ಸಾರಾಂಶ
ಹುಬ್ಬಳ್ಳಿ: ಮೂರು ಡಿಸಿಎಂ ಮಾಡಿದರೆ ತೊಂದರೆ ಏನು? ಸತೀಶ ಜಾರಕಿಹೊಳಿ ಹೇಳಿರುವುದಕ್ಕೆ ತಮ್ಮದು ಸಂಪೂರ್ಣ ಸಹಮತವಿದೆ ಎಂದು ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ನಗರಕ್ಕೆ ಭೇಟಿ ನೀಡಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ನಾನು ಮೊದಲಿನಿಂದಲೂ ಹೆಚ್ಚು ಡಿಸಿಎಂ ಹುದ್ದೆ ಸೃಷ್ಟಿಸಿ ಎಂದು ಹೇಳುತ್ತಲೇ ಬಂದಿದ್ದೇನೆ. ಮಧ್ಯೆ ಚುನಾವಣೆ ಬಂದಿದ್ದರಿಂದ ಎಐಸಿಸಿ ಅಧ್ಯಕ್ಷರು ಸಾರ್ವಜನಿಕವಾಗಿ ಈ ಬಗ್ಗೆ ಪ್ರಸ್ತಾಪ ಮಾಡಬೇಡಿ ಎಂದು ಹೇಳಿದ್ದರು. ಆದ್ದರಿಂದ ಸುಮ್ಮನಿದ್ದೇವು ಎಂದರು. ಇದೀಗ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಅವರು ಹೇಳಿದ್ದರಲ್ಲಿ ತಪ್ಪೇನಿದೆ. ಅವರು ಮಾತನಾಡಿದ್ದು ಸರಿಯೇ ಇದೆ. ಅವರ ಹೇಳಿಕೆಗೆ ನಮ್ಮದು ಸಹಮತವಿದೆ ಎಂದರು.
ತಪ್ಪು ತಪ್ಪೇ:
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಳಿದ ಪ್ರಶ್ನೆಗೆ, ತಪ್ಪು ಯಾರೇ ಮಾಡಿರಲಿ ಅದು ತಪ್ಪೇ. ಅಮಾಯಕರನ್ನು ಮೃಗನ ರೀತಿ ಕೊಲೆ ಮಾಡುತ್ತಾರೆ ಎಂದರೆ ಅದನ್ನು ಯಾರೂ ಒಪ್ಪುವುದಿಲ್ಲ. ಸೆಲೆಬ್ರಿಟಿ ಇರಬಹುದು. ಅದನ್ನು ಎಲ್ಲರೂ ಖಂಡನೆ ಮಾಡುತ್ತಾರೆ. ಸೆಲೆಬ್ರಿಟಿ ಇದ್ದಾರೆ ಎಂದು ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರ ಯಾರೂ ಕೊಟ್ಟಿಲ್ಲ ಎಂದರು. ಹಿಂದೆ ದರ್ಶನ ಒಳ್ಳೆಯವನಿದ್ದ ಈ ಕಾರಣಕ್ಕೆ ಕೃಷಿ ರಾಯಭಾರಿ ಮಾಡಿರಬೇಕು. ಈಗ ಒಳ್ಳೆಯವನಲ್ಲ ಅಂತಹ ಗೊತ್ತಾದ ಮೇಲೆ ಯಾಕೆ ರಾಯಭಾರಿ ಮಾಡುತ್ತಾರೆ ಎಂದರು.
ರಾಜಕುಮಾರ ಕೂಡ ಸೆಲೆಬ್ರಿಟಿ ಇದ್ದರು. ಎಂಥ ಹಂಬಲ್ ಇದ್ದರು ಅವರು. ಅಂತಹ ನಾಯಕನಟ ನಮಗೆ ಬೇಕು. ತಮ್ಮ ಜತೆಗೆ ಶೂಟಿಂಗ್ ಬರುತ್ತಿದ್ದ ಎಲ್ಲರನ್ನು ಜತೆಗೂಡಿಸಿಕೊಂಡು ಊಟ ಮಾಡುತ್ತಿದ್ದರು ಎಂದರು.
ಬಿಜೆಪಿಗರದು ಹಗಲುಗನಸು:
ಇನ್ನು ಆರು ತಿಂಗಳಲ್ಲಿ ರಾಜ್ಯ ಸರ್ಕಾರ ಇರಲ್ಲ ಎಂದು ಬಿಜೆಪಿಗರ ಹೇಳಿಕೆಗೆ, ಅವರದು ಹಗಲುಗನಸು. ಹಾಗೆ ಹೇಳಿಕೆ ನೀಡಿ ತೃಪ್ತಿ ಪಟ್ಟುಕೊಳ್ಳಲಿ ಬಿಡಿ ಎಂದು ಸಚಿವ ರಾಜಣ್ಣ ವ್ಯಂಗ್ಯವಾಡಿದರು.
ಸೂರಜ್ ರೇವಣ್ಣ ಪ್ರಕರಣ ಪ್ರಶ್ನೆಗೆ, ಆ ವಿಚಾರ ನನಗೆ ಗೊತ್ತಿಲ್ಲ ಎಂದಷ್ಟೇ ಉತ್ತರಿಸಿದರು. ಪೆಟ್ರೋಲ್ ಬೆಲೆ ಏರಿಕೆ ಕುರಿತು ಬಿಜೆಪಿಗರು ನಡೆಸುತ್ತಿರುವ ಪ್ರತಿಭಟನೆಗೆ ಕಿಡಿಕಾರಿದ ಸಚಿವರು, ಪ್ರತಿಭಟನೆ ಮಾಡಲಿ. ವಿರೋಧ ಪಕ್ಷವಾಗಿ ಕೆಲಸ ಮಾಡಬೇಕು. ಅದನ್ನೇ ಅವರು ಮಾಡುತ್ತಿದ್ದಾರಷ್ಟೇ ಎಂದರು.
ನಮ್ಮ ಪಕ್ಕದ ರಾಜ್ಯದಲ್ಲೇ ತೈಲ ಬೆಲೆ ನಮಗಿಂತ ₹ 8ರಿಂದ ₹ 9 ಹೆಚ್ಚಿದೆ. ಸರ್ಕಾರಕ್ಕೆ ಆದಾಯಬೇಕು. ಆದಾಯವಿದ್ದರೆ ಜನರ ಕೆಲಸ ಮಾಡಲು ಸಾಧ್ಯ. ಇದನ್ನು ವಿರೋಧ ಪಕ್ಷದವರು ಅರ್ಥ ಮಾಡಿಕೊಳ್ಳಬೇಕು ಎಂದರು. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ. ಇದೆಲ್ಲವೂ ಸುಳ್ಳು ವದಂತಿ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.