ಸಾರಾಂಶ
ಕನ್ನಡಪ್ರಭ ವಾರ್ತೆ, ಚಿತ್ರದುರ್ಗ
ಸೆಪ್ಟೆಂಬರ್ 28ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಹಾಗೂ ಶೋಭಾ ಯಾತ್ರೆಗೆ ರಾಜ್ಯದ ವಿವಿಧ ಮೂಲೆಗಳಿಂದ ಮೂರು ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಶಾಂತಿ ಮತ್ತು ಸೌಹಾರ್ದತೆಯಿಂದ ಮೆರವಣಿಗೆ ಆಯೋಜಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಿಂದೂ ಮಹಾ ಗಣಪತಿ ಪ್ರತಿಷ್ಟಾಪನಾ ಸಮಿತಿ ಸದಸ್ಯರಗೆ ಸೂಚನೆ ನೀಡಿದ್ದಾರೆ.ಶೋಭಾಯಾತ್ರೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಪ್ರತಿಷ್ಠಾನೆ ಸಮಿತಿ ಸದಸ್ಯರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿ, ಪೊಲೀಸ್ ಇಲಾಖೆಯಿಂದ ಈಗಾಗಲೇ ಸೂಕ್ತ ಬಂದೋಬಸ್ತ್‌ಗೆ ಕ್ರಮ ಕೈಗೊಳ್ಳಲಾಗಿದೆ. ಸಂಘಟಕರು ಬೆಳಗ್ಗೆ 11 ಗಂಟೆಗೆ ಸರಿಯಾಗಿ ಮೆರವಣಿಗೆಯನ್ನು ಪ್ರಾರಂಭಿಸಿ ರಾತ್ರಿ 9 ಗಂಟೆಯ ಒಳಗೆ ಮೆರವಣಿಗೆ ಮುಕ್ತಾಯಗೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.
ನಗರದ ಬಿ.ಡಿ. ರಸ್ತೆ ಹಾಗೂ ಹೊಳಲ್ಕೆರೆ ರಸ್ತೆಯಲ್ಲಿ ಸುಗಮವಾಗಿ ಮೆರವಣಿಗೆ ಹಾದು ಹೋಗುವಂತೆ ನಗರಸಭೆಯಿಂದ ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕು. ಪೊಲೀಸರು ವೀಕ್ಷಣೆಗೆ ಅನುಕೂಲವಾಗುವಂತೆ ವಾಚ್‌ಟವರ್ ನಿರ್ಮಿಸಬೇಕು. ಸ್ವಚ್ಛತೆ, ಕುಡಿಯುವ ನೀರು ಹಾಗೂ ಸಂಚಾರಿ ಶೌಚಾಲಯಗಳ ವ್ಯವಸ್ಥೆ ಮಾಡಬೇಕು. ರಸ್ತೆಯಲ್ಲಿ ತಗ್ಗು ಗುಂಡಿಗಳು ಇದ್ದರೇ, ತಕ್ಷಣವೇ ಮುಚ್ಚುವ ಕೆಲಸ ಮಾಡಬೇಕು. ಮೆರವಣಿಗೆ ಸಾಗುವ ರಸ್ತೆ ಹಾಗೂ ಅಸು ಪಾಸಿನ ಸ್ಥಳದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮೇಲೆ ಸಾರ್ವಜನಿಕರು ಹತ್ತಿ ನಿಲ್ಲದಂತೆ ನಿರ್ಬಂಧ ವಿಧಿಸಬೇಕು ಎಂದು ಸೂಚಿಸಿದರು.ಮೆರವಣಿಗೆ ವೇಳೆ ಹಠಾತ್ ಅನಾರೋಗ್ಯಕ್ಕೆ ತುತ್ತಾದವರನ್ನು ಆರೈಕೆ ಮಾಡಲು ಸೇಫ್ ಹೌಸ್‌ಗಳನ್ನು ಗುರುತಿಸಬೇಕು. ಆರೋಗ್ಯ ಇಲಾಖೆಯಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡೊಂದನ್ನು ಮೀಸಲಿರಿಸಿ, ಅಗತ್ಯ ವೈದ್ಯರನ್ನು ನೇಮಿಸಬೇಕು. ಮೆರವಣಿಗೆ ಸಾಗುವ ಹಾದಿಯಲ್ಲಿ 4 ಆಂಬ್ಯುಲೆನ್ಸ್ ಗಳ ನಿಯೋಜಿಸಬೇಕು. ಬೆಸ್ಕಾಂ ಅಧಿಕಾರಿಗಳು ಮೆರವಣಿಗೆ ವೇಳೆ ವಿದ್ಯುತ್ ಅಡಚಣೆಯಾಗದಂತೆ ಕ್ರಮ ಕೈಗೊಳ್ಳಬೇಕು. ಮೆರವಣಿಗೆ ಸಾಗುವ ಹಾದಿಯಲ್ಲಿ ವಿದ್ಯುತ್ ತಂತಿಗಳನ್ನು ಎತ್ತರಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ ನೀಡಿದರು.3000 ಪೊಲೀಸ್ ಸಿಬ್ಬಂದಿ ನಿಯೋಜನೆ
ಗಣಪತಿ ವಿಸರ್ಜನಾ ಮೆರವಣಿಗೆ ಹಾಗೂ ಶೋಭಾಯಾತ್ರೆ ಬಂದೋಬಸ್ತ್ ಕಾರ್ಯಕ್ಕೆ 14 ಡಿವೈಸ್‌ಪಿ, 33 ಸಿಪಿಐ, 112 ಪಿಎಸ್‌ಐ, 167 ಎಎಸ್‌ಐ, 1997 ಪೊಲೀಸ್ ಕಾನ್ಸ್ಟೇಬಲ್, 658 ಗೃಹ ರಕ್ಷಕರು ಸೇರಿ 3000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು. ಇದರೊಂದಿಗೆ 15 ಕೆಎಸ್‌ಆರ್‌ಪಿ, 11 ಡಿಎಆರ್, 4 ಕ್ಯೂಆರ್‌ಟಿ ತುಕಡಿಗಳು ಕಾರ್ಯನಿರ್ವಹಿಸಲಿವೆ. 81 ಕಡೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುವುದು. 20 ವಿಡಿಯೋಗ್ರಾಫರ್‌ಗಳು ಮೆರವಣಿಗೆ ಚಿತ್ರೀಕರಣ ಮಾಡಲಿದ್ದಾರೆ. 9 ಚೆಕ್ ಪೋಸ್ಟ್‌ಳನ್ನು ನಿರ್ಮಿಸಲಾಗುವುದು. ಪಟಾಕಿ ಬಳಕೆಗೆ ಅವಕಾಶವಿಲ್ಲವೆಂದರು.ಮೆರವಣಿಗೆಯಲ್ಲಿ ಡಿಜೆ ಬಳಸಲು ಪೊಲೀಸ್ ಇಲಾಖೆ ನೀಡುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು. ಹೊರ ಜಿಲ್ಲೆಗಳಿಂದ ಆಗಮಿಸುವ ಪೊಲೀಸ್ ಸಿಬ್ಬಂದಿಗೆ ತಂಗಲು ನಗರದ ಹಾಸ್ಟೆಲ್‌ಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ ಬಂಡಾರು ತಿಳಿಸಿದರು.
ಸೆ.27 ಹಾಗೂ 28 ರಂದು ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧಕ್ಕೆ ಆದೇಶಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಕಚೇರಿಗೆ ಕೋರಿಕೆ ಸಲ್ಲಿಸಲಾಗಿದೆ. ಶೋಭಾಯಾತ್ರೆ ದಿನ ಬಿ.ಡಿ. ರಸ್ತೆಯಲ್ಲಿ ವಾಹನಗಳ ಓಡಾಟ ನಿರ್ಬಂಧಿಸಿ, ಬದಲಿ ಮಾರ್ಗದಲ್ಲಿ ಬಸ್ ಹಾಗೂ ಸಾರ್ವಜನಿಕ ವಾಹನಗಳ ಮಾರ್ಗ ಬದಲಾವಣೆ ಆದೇಶ ಹೊರಡಿಸಲು ಕೋರಿಕೆ ಸಲ್ಲಿಸುವುದಾಗಿ ಅವರು ತಿಳಿಸಿದರು.ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ಅಬಕಾರಿ ಉಪನಿರೀಕ್ಷಕ ಮಾದೇಶ್, ಉಪವಿಭಾಗಧಿಕಾರಿ ಎಂ.ಕಾರ್ತಿಕ್, ಹಿಂದೂ ಮಹಾ ಗಣಪತಿ ಪ್ರತಿಷ್ಟಾಪನಾ ಸಮಿತಿಯ ಬದ್ರಿನಾಥ್, ಉಮೇಶ್ ಕಾರಜೋಳ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಮಿತಿ ಪದಾಧಿಕಾರಿಗಳು ಇದ್ದರು.