ಅಪ್ರಾಪ್ತನ ಮೇಲೆ ಹಲ್ಲೆ ನಡೆಸಿ ಸಿಗರೆಟ್ ಖರೀದಿಸಲು ₹200 ಸುಲಿಗೆ ಮಾಡಿದ್ದ ಮೂವರು ಅಪ್ರಾಪ್ತರನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಅಪ್ರಾಪ್ತನ ಮೇಲೆ ಹಲ್ಲೆ ನಡೆಸಿ ಸಿಗರೆಟ್ ಖರೀದಿಸಲು ₹200 ಸುಲಿಗೆ ಮಾಡಿದ್ದ ಮೂವರು ಅಪ್ರಾಪ್ತರನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಖಾಸಗಿ ಕಾಲೇಜಿನ 17 ವರ್ಷದ ಪಿಯುಸಿ ವಿದ್ಯಾರ್ಥಿ ಹಲ್ಲೆಗೊಳಗಾಗಿದ್ದು, 5 ದಿನಗಳ ಹಿಂದೆ ಐಡಿಯಲ್ ಹೋಮ್ಸ್ ಬಳಿ ಈ ಕೃತ್ಯ ನಡೆದಿದೆ. ಸಂತ್ರಸ್ತನ ದೂರು ಆಧರಿಸಿ ಮೂವರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರನ್ನು ಬಂಧನವಾಗಿದ್ದು, ತಪ್ಪಿಸಿಕೊಂಡಿರುವ ಮತ್ತೊಬ್ಬನ ಪತ್ತೆಗೆ ತನಿಖೆ ನಡೆದಿದೆ.
ಇನ್‌ಸ್ಟಾಗ್ರಾಂನಲ್ಲಿ ಮೆಸೇಜ್:ಮೇ 15ರಂದು ರಾತ್ರಿ 8 ಗಂಟೆಗೆ ಝೆರಾಕ್ಸ್ ಸಲುವಾಗಿ ದ್ವಿಚಕ್ರವಾಹನದಲ್ಲಿ ಐಡಿಯಲ್ ಹೋಮ್ಸ್‌ಗೆ ಸಂತ್ರಸ್ತ ತೆರಳಿದ್ದ. ಆಗ ಪಾಲಿಕೆಯ ಕಚೇರಿ ಬಳಿ ಆತನನ್ನು ಅಡ್ಡಗಟ್ಟಿ ನಾಲ್ವರು ಅಪ್ರಾಪ್ತರು ಬೆದರಿಸಿ ಹಲ್ಲೆ ಮಾಡಿ ಜೇಬಿನಲ್ಲಿದ್ದ 200 ರು. ಕಸಿದುಕೊಂಡಿದ್ದಾರೆ. ಬಳಿಕ ಸಂತ್ರಸ್ತನ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಆರೋಪಿಗಳು ಪರಾರಿಯಾಗಿದ್ದರು. ಕೆಲ ಹೊತ್ತಿನ ಬಳಿಕ ಸಂತ್ರಸ್ತನ ಇನ್‌ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿ ರಿಲಯನ್ಸ್ ಡಿಜಿಟಲ್ ಬಳಿ ಆತನ ಸ್ಕೂಟರ್ ನಿಲ್ಲಿಸಲಾಗಿದೆ ತೆಗೆದುಕೊಂಡು ಹೋಗುವಂತೆ ಸಂದೇಶ ಕಳುಹಿಸಿದ್ದರು ಎಂದು ತಿಳಿದು ಬಂದಿದೆ.
ಈ ಘಟನೆ ಸಂಬಂಧ ರಾಜರಾಜೇಶ್ವರಿನಗರ ಠಾಣೆಯಲ್ಲಿ ಸಂತ್ರಸ್ತನ ಪೋಷಕರು ದೂರು ದಾಖಲಿಸಿದ್ದರು. ಅಷ್ಟರಲ್ಲಿ ಬಂಧನ ಭೀತಿಯಿಂದ ಆರೋಪಿಗಳು, ಸ್ಕೂಟರ್ ಅನ್ನು ಬಿಟ್ಟು ಪರಾರಿಯಾಗಿದ್ದರು. ಕೊನೆಗೆ ತಾಂತ್ರಿಕ ಮಾಹಿತಿ ಆಧರಿಸಿ ಬಂಧಿಸಲಾಯಿತು. ಈ ಅಪ್ರಾಪ್ತರ ಪೈಕಿ ಇಬ್ಬರು ಎಸ್‌ಎಲ್‌ಎಸಿಗೆ ಶಿಕ್ಷಣ ಮೊಟಕುಗೊಳಿಸಿದ್ದರು. ದುಶ್ಟಟಗಳ ವ್ಯಸನಿಗಳಾಗಿದ್ದ ಅವರು, ಈ ಮೋಜಿಗೆ ಹಣ ಹೊಂದಿಸಲು ಸುಲಿಗೆ ಕೃತ್ಯ ಎಸಗಿದ್ದರು ಎಂದು ಮೂಲಗಳು ಹೇಳಿವೆ.