ಬೆಂಗಳೂರಿನ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ಕಾವೇರಿ ನದಿ ನೀರು ಒದಗಿಸಲು ಕೊಳ್ಳೆಗಾಲ ತಾಲೂಕಿನ ಅಗರ ಮತ್ತು ಮದ್ದೂರು ಕೆರೆಗಳ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚು ಮಾಡಿ ಅಲ್ಲಿಂದ ನೀರು ಪಂಪ್‌ ಮಾಡಲು ಯೋಜನೆ ರೂಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರಿನ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ಕಾವೇರಿ ನದಿ ನೀರು ಒದಗಿಸಲು ಕೊಳ್ಳೆಗಾಲ ತಾಲೂಕಿನ ಅಗರ ಮತ್ತು ಮದ್ದೂರು ಕೆರೆಗಳ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚು ಮಾಡಿ ಅಲ್ಲಿಂದ ನೀರು ಪಂಪ್‌ ಮಾಡಲು ಯೋಜನೆ ರೂಪಿಸಲಾಗಿದೆ. ಅದರಿಂದ ಹಾಲಿ ಒಂದು ಬೆಳೆ ಬೆಳೆಯುತ್ತಿರುವ ಅಚ್ಚುಕಟ್ಟು ಪ್ರದೇಶದ ರೈತರು ಮುಂದಿನ ದಿನಗಳಲ್ಲಿ ವರ್ಷಕ್ಕೆ ಎರಡು ಬೆಳೆ ಬೆಳೆಯಬಹುದು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದರು.

ಖನಿಜ ಭವನದಲ್ಲಿ ಬುಧವಾರ ತಮ್ಮನ್ನು ಭೇಟಿಯಾದ ಶಾಸಕ ಎ.ಆರ್‌. ಕೃಷ್ಣಮೂರ್ತಿ ಅವರೊಂದಿಗೆ ಚರ್ಚಿಸಿ ಮಾತನಾಡಿದ ಎಂ.ಬಿ. ಪಾಟೀಲ್‌, ಕಾವೇರಿ ನ್ಯಾಯಮಂಡಳಿ ಕೈಗಾರಿಕಾ ಉದ್ದೇಶಕ್ಕೆ 4 ಟಿಎಂಸಿ ಅಡಿ ನೀರು ಮೀಸಲಿಟ್ಟಿದೆ. ಅದರಲ್ಲಿ ಸದ್ಯ 1.37 ಟಿಎಂಸಿ ಅಡಿ ನೀರು ಮಾತ್ರ ಬಳಕೆ ಮಾಡಲಾಗುತ್ತಿದೆ. ಉಳಿದ 2.63 ಟಿಎಂಸಿ ಅಡಿ ನೀರಲ್ಲಿ 2.50 ಟಿಎಂಸಿ ಅಡಿ ನೀರನ್ನು ಬೆಂಗಳೂರಿನ ಕೈಗಾರಿಕಾ ಪ್ರದೇಶಗಳಿಗೆ ಪಂಪ್‌ ಮಾಡಲು ಯೋಜನೆ ರೂಪಿಸಲಾಗಿದೆ. ಕೃಷಿಗೆ ಮೀಸಲಿಟ್ಟ ಕಾವೇರಿ ನೀರನ್ನು ಇದಕ್ಕೆ ಬಳಸುತ್ತಿಲ್ಲ. ಮಳೆಗಾಲದ 120 ದಿನಗಳಲ್ಲಿ ನೇರವಾಗಿ ಕಾವೇರಿ ನದಿಯಿಂದಲೇ ನೀರು ಪಂಪ್‌ ಮಾಡಲಾಗುವುದು. ಉಳಿದ ದಿನಗಳಲ್ಲಿ ಮಾತ್ರ ಕೆರೆಗಳಿಂದ ನೀರು ಪಡೆಯಲಾಗುತ್ತದೆ. ಅದಕ್ಕಾಗಿ ಕೆರೆಗಳ ನೀರು ಸಂಗ್ರಹ ಸಾಮರ್ಥ್ಯ ಹತ್ತು ಪಟ್ಟು ಹೆಚ್ಚಿಸಲಾಗುವುದು. ಅದರಿಂದ ರೈತರಿಗೂ ಅನುಕೂಲವಾಗಲಿದೆ ಎಂದು ವಿವರಿಸಿದರು.

ಸದ್ಯ ಅಗರ ಮತ್ತು ಮದ್ದೂರು ಕೆರೆಗಳ ಸಾಮರ್ಥ್ಯ ಕ್ರಮವಾಗಿ 0.156 ಮತ್ತು 0.111 ಟಿಎಂಸಿ ಅಡಿಗಳಷ್ಟಿದೆ. ಅದನ್ನು 1.156 ಮತ್ತು 1.112 ಟಿಎಂಸಿ ಅಡಿಗೆ ಹೆಚ್ಚಿಸಲಾಗುವುದು. ಇಲ್ಲಿ ಕೆರೆಗಳ ಆಳವನ್ನು ಜಾಸ್ತಿ ಮಾಡಲಾಗುವುದೇ ವಿನಾ ಹೊಸ ಜಮೀನಿನ ಸ್ವಾಧೀನ ಮಾಡುವುದಿಲ್ಲ. ಈ ಯೋಜನೆಯಿಂದ ಕೆರೆಗಳ ಅಚ್ಚುಕಟ್ಟು ವ್ಯಾಪ್ತಿಯಲ್ಲಿನ ರೈತರಿಗೆ ಯಾವ ತೊಂದರೆಯೂ ಇಲ್ಲ. ಈಗ ಅವರಿಗೆಲ್ಲ ವರ್ಷಕ್ಕೆ ಒಂದು ಬೆಳೆಗಷ್ಟೇ ನೀರು ಕೊಡಲಾಗುತ್ತಿದೆ. ಆದರೆ, ಯೋಜನೆ ಮುಗಿದ ನಂತರ ಅಚ್ಚುಕಟ್ಟು ಪ್ರದೇಶ ಹೆಚ್ಚಳದ ಜತೆಗೆ ಎರಡು ಬೆಳೆಗಳಿಗೆ ನೀರು ಕೊಡಲಾಗುವುದು ಎಂದರು.

ಅಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್‌, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಕೈಗಾರಿಕಾ ಇಲಾಖೆ ಆಯುಕ್ತೆ ಖುಷ್ಬು ಗೋಯಲ್‌ ಇತರರಿದ್ದರು.