ಸಾರಾಂಶ
ಹುಬ್ಬಳ್ಳಿ:
ಮಹಾನಗರದಲ್ಲಿ ಏಳು ತಿಂಗಳಲ್ಲಿ ಬರೋಬ್ಬರಿ 476 ಜನ ಬೀದಿ ನಾಯಿಗಳ ಕಡಿತಕ್ಕೆ ಒಳಗಾಗಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಪಾಲಿಕೆ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡುತ್ತಿದೆ. ಆದರೂ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಹೀಗಾಗಿ ಮತ್ತೆ ಮೂರು ಶಸ್ತ್ರಚಿಕಿತ್ಸಾ ಕೇಂದ್ರ ತೆರೆಯಲು ಮುಂದಾಗಿದೆ.ಹುಬ್ಬಳ್ಳಿ-ಧಾರವಾಡದಲ್ಲೀಗ ಬೀದಿ ನಾಯಿಗಳ ಕಾಟ ವಿಪರೀತವಾಗಿದೆ. ಮಕ್ಕಳು, ಮರಿಗಳ ಮೇಲಂತೂ ದಾಳಿ ಹೆಚ್ಚಿದೆ. ಪ್ರತಿದಿನ ಕನಿಷ್ಠವೆಂದರೂ ಇಬ್ಬರಿಂದ ಮೂವರಿಗೆ ನಾಯಿ ಕಡಿತವಾಗುತ್ತಿದೆ. ಕೆಲ ಮಕ್ಕಳ ಮೇಲಂತೂ ನಾಯಿಗಳ ಹಿಂಡೇ ದಾಳಿ ಇಡುವುದು ಕೂಡ ಮಾಮೂಲಿಯಾಗಿದೆ.
ಎಷ್ಟಿವೆ ಬೀದಿ ನಾಯಿ:ಹುಬ್ಬಳ್ಳಿ-ಧಾರವಾಡ ಪಾಲಿಕೆ ವ್ಯಾಪ್ತಿಯಲ್ಲಿ 30,137 ಬೀದಿ ನಾಯಿಗಳಿವೆ ಎಂಬುದು ಪಾಲಿಕೆ ಅಂಕಿ ಸಂಖ್ಯೆಗಳ ಲೆಕ್ಕ. ಆದರೆ ಕನಿಷ್ಠವೆಂದರೂ 50 ಸಾವಿರಕ್ಕೂ ಅಧಿಕ ಬೀದಿನಾಯಿಗಳಿವೆ ಎಂಬುದು ಪಾಲಿಕೆ ಸದಸ್ಯರ ಅಂಬೋಣ. 2021ರಲ್ಲಿ 69 ಜನರಿಗೆ, 2022ರಲ್ಲಿ 561, 2023ರಲ್ಲಿ 697 ಹಾಗೂ 2024ರ ಜುಲೈ ವರೆಗೂ 476 ಜನರ ಮೇಲೆ ಬೀದಿನಾಯಿಗಳು ದಾಳಿ ನಡೆಸಿ ಕಚ್ಚಿವೆ.
ತಡೆಗೆ ಏನು ಕ್ರಮ:ಸುಪ್ರೀಂಕೋರ್ಟ್ ನಿರ್ದೇಶನದಂತೆ ಪಾಲಿಕೆ ವ್ಯಾಪ್ತಿಯಲ್ಲೂ ಎಬಿಸಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಎಬಿಸಿ ಎಂದರೆ ಆ್ಯನಿಮಲ್ ಬರ್ತ್ ಕಂಟ್ರೋಲ್ ಅಂದರೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡುವುದು. ಹೀಗೆ ಶಸ್ತ್ರಚಿಕಿತ್ಸೆಗೊಳಪಡಿಸಿ ಬಳಿಕ ಆ ಬೀದಿ ನಾಯಿಗಳನ್ನು ಅದೇ ಪ್ರದೇಶದಲ್ಲೇ ಬಿಡಬೇಕು. 2022ರಲ್ಲಿ ಈ ಕೆಲಸವನ್ನು ಪಾಲಿಕೆ ಶುರು ಮಾಡಿದೆ. 2022- 23ರಲ್ಲಿ 4367 ಹಾಗೂ 2023-24ರ ಸಾಲಿನಲ್ಲಿ 5595 ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಪ್ರತಿದಿನ ಸರಾಸರಿ 16 ನಾಯಿಗಳ ಸಂತಾನ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ.
ಸದ್ಯ ಪಾಲಿಕೆಯಲ್ಲಿ ಒಬ್ಬ ಪಶುವೈದ್ಯಾಧಿಕಾರಿ, ಆರು ಜನ ಸಿಬ್ಬಂದಿ ಇದ್ದಾರೆ. ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲು ಒಂದೇ ಸೆಂಟರ್ ಇದೆ. ಇಷ್ಟೇ ಜನರಿಂದ ಎಲ್ಲ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡುವುದು ಸಾಧ್ಯವಾಗುತ್ತಿಲ್ಲ, ವಿಳಂಬವಾಗುತ್ತಿದೆ. ನಿರೀಕ್ಷಿತ ಮಟ್ಟದಲ್ಲಿ ಎಬಿಸಿ ಕಾರ್ಯಕ್ರಮ ಅನುಷ್ಠಾನಗೊಳ್ಳುತ್ತಿಲ್ಲ. ಜತೆಗೆ ಬೀದಿ ನಾಯಿಗಳಿಗೆ ವ್ಯಾಕ್ಸಿನೇಷನ್ ಕೂಡ ಮಾಡಿಸಬೇಕು ಎಂಬ ಬೇಡಿಕೆ ನಾಗರಿಕರದ್ದು. ಹೀಗಾದರೆ ಬೀದಿ ನಾಯಿಗಳು ದಾಳಿ ನಡೆಸಿದರೂ ಅಷ್ಟೊಂದು ದುಷ್ಪರಿಣಾಮ ಬೀರಲ್ಲ ಎಂಬ ಆಗ್ರಹ ಪ್ರಜ್ಞಾವಂತರದ್ದು.ಅದಕ್ಕಾಗಿ ಪಾಲಿಕೆಯನ್ನು ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಿ ನಾಲ್ಕು ಸೆಂಟರ್ ತೆರೆಯಬೇಕು. ನಾಲ್ಕು ಪ್ರತ್ಯೇಕ ತಂಡ ಮಾಡಬೇಕು. ಆಗ ಒಂದು ವರ್ಷದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಬರುತ್ತದೆ ಎಂಬ ಯೋಚನೆ ಪಾಲಿಕೆಯದ್ದು. ಆ ನಿಟ್ಟಿನಲ್ಲಿ ಸದ್ಯ ಇರುವ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಯ ಒಂದು ಸೆಂಟರ್‌ನೊಂದಿಗೆ ಮತ್ತೆ ಮೂರು ಸೆಂಟರ್ ತೆರೆಯಲು ಮುಂದಾಗಿದೆ ಎಂದು ಪಾಲಿಕೆ ಮೂಲಗಳು ತಿಳಿಸುತ್ತವೆ.
ಒಟ್ಟಿನಲ್ಲಿ ಬೀದಿನಾಯಿಗಳ ಹಾವಳಿ ತಡೆಯಲು ಪಾಲಿಕೆ ಮುಂದಾಗಿರುವುದು ಸಂತಸಕರ. ಆದರೆ ಇದು ಬರೀ ಹೇಳಿಕೆಗಷ್ಟೇ ಸೀಮಿತವಾಗದೇ ಕಾರ್ಯರೂಪಕ್ಕೆ ಬರಬೇಕೆಂಬುದು ನಾಗರಿಕರ ಒಕ್ಕೊರಲಿನ ಆಗ್ರಹ.ಪಾಲಿಕೆ ವ್ಯಾಪ್ತಿಯಲ್ಲಿ 30137 ಬೀದಿ ನಾಯಿಗಳಿವೆ ಎಂಬ ಅಂದಾಜಿದೆ. 50 ಸಾವಿರಕ್ಕೂ ಅಧಿಕ ಇರಬಹುದು ಎಂಬ ಸಂಶಯವಿದೆ. ಎನ್‌ಜಿಒ ಮೂಲಕ ಮತ್ತೊಮ್ಮೆ ಸಮೀಕ್ಷೆ ನಡೆಸಲಾಗುವುದು. ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯ ಒಂದು ಸೆಂಟರ್ ಇದೆ. ಅವುಗಳನ್ನು ನಾಲ್ಕಕ್ಕೇರಿಸಲಾಗುತ್ತಿದೆ ಎಂದು ಪಾಲಿಕೆ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದ್ದಾರೆ.ನಾಲ್ಕು ವಿಭಾಗಗಳನ್ನಾಗಿ ಮಾಡಿ ಪ್ರತ್ಯೇಕ ಸೆಂಟರ್ ಮಾಡಬೇಕು. ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಹೆಚ್ಚು ಮಾಡಲು ಕ್ರಮ ಕೈಗೊಳ್ಳಬೇಕು. ಅಂದಾಗ ಮಾತ್ರ ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಸಾಧ್ಯ ಎಂದು ಪಾಲಿಕೆ ಸದಸ್ಯ ಮಯೂರ ಮೋರೆ ಹೇಳಿದ್ದಾರೆ.