ಸಾರಾಂಶ
ಬೆಂಗಳೂರು ದಕ್ಷಿಣ : ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ 5 ಹುಲಿಗಳು ವಿಷಪ್ರಾಶನದಿಂದ ಮೃತಪಟ್ಟ ಘಟನೆ ಹಚ್ಚಹಸಿರಾಗಿರುವಾಗಲೇ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ 3 ಹುಲಿ ಮರಿಗಳು ಸಂಶಯಾಸ್ಪದವಾಗಿ ಸಾವಿಗೀಡಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಮೂರ್ನಾಲ್ಕು ದಿನದ ಹಿಂದೆ ಹಿಮ ಎಂಬ ಹೆಸರಿನ 7 ವರ್ಷದ ಹೆಣ್ಣು ಹುಲಿಯೊಂದು 2 ಗಂಡು ಹಾಗೂ 1 ಹೆಣ್ಣು ಸೇರಿ ಒಟ್ಟು 3 ಮರಿಗಳಿಗೆ ಜನ್ಮ ನೀಡಿತ್ತು. ಜನ್ಮ ನೀಡಿದ 3 ದಿನಗಳ ಅಂತರದಲ್ಲಿ ಮೂರೂಮರಿಗಳು ಮೃತಪಟ್ಟಿವೆ. ಆದರೆ, ಸಂಬಂಧಪಟ್ಟ ಅರಣ್ಯ ಅಧಿಕಾರಿಗಳು ಹುಲಿ ಮರಿಗಳ ಕಳೇಬರದ ಪಂಚನಾಮೆ ಹಾಗೂ ಮರಣೋತ್ತರ ಪರೀಕ್ಷೆ ನಡೆಸದೇ ಸುಟ್ಟು ಹಾಕಿದ್ದಾರೆ. ಈ ಮೂಲಕ ಹುಲಿ ಮರಿಗಳ ಸಾವಿನ ಸತ್ಯಾಂಶವನ್ನು ಮುಚ್ಚಿ ಹಾಕಲಾಗಿದೆ ಎಂಬ ದೂರುಗಳು ಕೇಳಿಬಂದಿವೆ.
ಸಾಮಾನ್ಯವಾಗಿ ಉದ್ಯಾನದಲ್ಲಿ ಪ್ರಾಣಿಗಳ ಜನನದ ನಂತರ ಅವುಗಳ ಚಲನವಲನಗಳ ಮೇಲೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಗಾ ವಹಿಸಬೇಕು. ಜನ್ಮ ನೀಡಿದ ಹುಲಿಯ ನಡವಳಿಕೆ ಮತ್ತು ಮನಸ್ಥಿತಿಯನ್ನು ಖಚಿತಪಡಿಸಿಕೊಂಡು ಅನುಕೂಲಕರವಾದ ವಾತಾವರಣ ನಿರ್ಮಿಸಬೇಕು. ಆದರೆ, ಬನ್ನೇರುಘಟ್ಟದಲ್ಲಿ ಪ್ರಾಣಿ ಕಲ್ಯಾಣ ಮತ್ತು ನಿರ್ವಹಣೆಯಲ್ಲಿ ಕೌಶಲ್ಯವನ್ನು ಹೊಂದಿರುವ ಹಿರಿಯ ಅನುಭವಿ ತಜ್ಞ ವೈದ್ಯರು ಹಾಗೂ ಪಶು ವೈದ್ಯಕೀಯ ಶಸ್ತ್ರಚಿಕಿತ್ಸಕರ ಕೊರತೆ ಇದ್ದು, ಈ ಕಾರಣದಿಂದಲೇ ಪ್ರಾಣಿಗಳ ಸಾವು ಸಂಭವಿಸುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ಬಗ್ಗೆ ‘ಕನ್ನಡಪ್ರಭ’ ಮಾಹಿತಿ ಕೇಳಿದಾಗ ಜೈವಿಕ ಉದ್ಯಾನದ ಸಿಬ್ಬಂದಿ ಒಬ್ಬಬ್ಬರು ಒಂದೊಂದು ರೀತಿ ಹೇಳಿಕೆ ನೀಡುವ ಮೂಲಕ ಗೊಂದಲ ಸೃಷ್ಟಿಸಿದ್ದು, ಈ 3 ಹುಲಿ ಮರಿಗಳ ಸಾವಿಗೆ ನಿಜವಾದ ಕಾರಣ ತಿಳಿದು ಬರುತ್ತಿಲ್ಲ.
ಮೂರು ಹುಲಿ ಮರಿಗಳು ಜನಿಸಿದ ಸಂದರ್ಭದಿಂದ ತಾಯಿ ಹುಲಿಯಾದ ಹಿಮ ಅವುಗಳಿಗೆ ಹಾಲುಣಿಸದಿರುವುದು ಕಂಡು ಬಂದಿದೆ. ಸಾಮಾನ್ಯವಾಗಿ ಹುಲಿ ಮರಿಗಳು ಜನನದ ನಂತರ ಹಲವಾರು ಕಾರಣಗಳಿಂದ ಸಾವಿಗೀಡಾಗುತ್ತವೆ.
- ವಿಶಾಲ್ ಸೂರ್ಯ ಸೇನ್, ಕಾರ್ಯ ನಿರ್ವಾಹಕ ಅಧಿಕಾರಿ, ಬನ್ನೇರುಘಟ್ಟ ಜೈವಿಕ ಉದ್ಯಾನ.
- - ಹುಟ್ಟಿದ ಮೂರೇ ದಿನಕ್ಕೇ ಶಂಕಾಸ್ಪದ ಸಾವು
- - ಶವಪರೀಕ್ಷೆಯನ್ನೇ ಮಾಡದೆ ಸುಟ್ಟ ಸಿಬ್ಬಂದಿ
- - ಅಧಿಕಾರಿಗಳ ನಡೆ ಬಗ್ಗೆ ಭಾರಿ ಅನುಮಾನ
- - ಹಿಮ ಎಂಬ ಹೆಸರಿನ 7 ವರ್ಷದ ಹೆಣ್ಣು ಹುಲಿ 2 ಗಂಡು, 1 ಹೆಣ್ಣು ಮರಿಗೆ ಜನ್ಮ ನೀಡಿತ್ತು. ಹುಟ್ಟಿದ ಮೂರೇ ದಿನಕ್ಕೆ ಮೂರೂ ಮರಿ ಸಾವು
- - ಹುಲಿ ಮರಿಗಳ ಸಾವಿನ ಬಳಿಕ ಕಳೇಬರದ ಪಂಚನಾಮೆ, ಮರಣೋತ್ತರ ಪರೀಕ್ಷೆಯನ್ನೂ ನಡೆಸದ ಬನ್ನೇರುಘಟ್ಟ ಉದ್ಯಾನದ ಸಿಬ್ಬಂದಿ
- - ಮೃತ ಮರಿಗಳನ್ನು ಸುಟ್ಟು ಹಾಕುವ ಮೂಲಕ ಹುಲಿಗಳ ಸಾವಿನ ಸತ್ಯಾಂಶವನ್ನೇ ಬಚ್ಚಿಡುವ ಪ್ರಯತ್ನ ನಡೆದಿದೆ ಎಂಬ ಬಗ್ಗೆ ಆರೋಪ


;Resize=(128,128))
;Resize=(128,128))
;Resize=(128,128))