ಸಾರಾಂಶ
ಬೆಂಗಳೂರು : ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆಂಧ್ರಪ್ರದೇಶ ಮೂಲದ ಒಂದೇ ಗ್ರಾಮದ ಮೂವರು ಯುವಕರು ಮೃತಪಟ್ಟಿರುವ ದಾರುಣ ಘಟನೆ ಬೈಯಪ್ಪನಹಳ್ಳಿ ರೈಲು ನಿಲ್ದಾಣದ ಸಮೀಪ ಜರುಗಿದೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರಾಮಸಮುದ್ರ ಮಂಡಲ್ ಮೂಲದ ಬಾಲಸುಬ್ರಹ್ಮಣ್ಯಂ(22), ಲೋಕೇಶ್(23) ಹಾಗೂ ಸಿ.ಶಶಿಕುಮಾರ್(20) ಮೃತ ದುರ್ದೈವಿಗಳು. ಬುಧವಾರ ರಾತ್ರಿ ಸುಮಾರು 10.20ಕ್ಕೆ ಮಾರತ್ತಹಳ್ಳಿ ರೈಲ್ವೆ ಸೇತುವೆ ಬಳಿ ಈ ದುರ್ಘಟನೆ ನಡೆದಿದೆ.
ಮೂವರ ಯುವಕರು ರೈಲು ಬರುವಾಗ ಅಕ್ರಮವಾಗಿ ರೈಲ್ವೆ ಹಳಿ ಪ್ರವೇಶಿಸಿರುವುದೇ ಘಟನೆಗೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದೇ ಗ್ರಾಮದವರಾಗಿರುವ ಮೃತ ಮೂವರು ಯುವಕರು ಸ್ನೇಹಿತರಾಗಿದ್ದರು. ಶಶಿಕುಮಾರ್ ಕೆಲ ದಿನಗಳ ಹಿಂದೆಯಷ್ಟೇ ಕೆಲಸ ಹುಡುಕಿ ಬೆಂಗಳೂರಿಗೆ ಬಂದಿದ್ದ. ಲೋಕೇಶ್ ಕೆಲ ತಿಂಗಳಿಂದ ನಗರದಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಬಾಲಸುಬ್ರಹ್ಮಣ್ಯಂ ಪದವಿ ವ್ಯಾಸಂಗ ಮಾಡಿದ್ದು, ಹೊಸ ಕೋರ್ಸ್‌ಗೆ ಸೇರಲು ನಗರಕ್ಕೆ ಬಂದಿದ್ದ. ಮೂವರು ಮಾರತ್ತಹಳ್ಳಿಯ ಪೇಯಿಂಗ್ ಗೇಸ್ಟ್(ಪಿಜಿ)ನಲ್ಲಿ ಉಳಿದುಕೊಂಡಿದ್ದರು ಎಂದು ತಿಳಿದು ಬಂದಿದೆ.ಅತಿಕ್ರಮ ಪ್ರವೇಶದಿಂದ ರೈಲು ಡಿಕ್ಕಿಯಾಗಿ ಸಾವು
ಯಶವಂತಪುರದಿಂದ ಕಣ್ಣೂರಿಗೆ ಸಂಚರಿಸುವ ಕಣ್ಣೂರು ಎಕ್ಸ್‌ಪ್ರೆಸ್ ರೈಲು ಬುಧವಾರ ರಾತ್ರಿ 9.45ಕ್ಕೆ ಯಶವಂತಪುರದಿಂದ ಹೊರಟ್ಟಿತ್ತು. ರಾತ್ರಿ ಸುಮಾರು 10.20ಕ್ಕೆ ಬೈಯಪ್ಪನಹಳ್ಳಿ ರೈಲು ನಿಲ್ದಾಣ ತಲುಪಿ ಮುಂದೆ ಸಾಗುತ್ತಿತ್ತು. ಈ ವೇಳೆ ಈ ಮೂವರು ಯುವಕರು ಮಾರತ್ತಹಳ್ಳಿ ರೈಲ್ವೆ ಸೇತುವೆ ಬಳಿ ರೈಲು ಹಳಿ ದಾಟಲು ಮುಂದಾಗಿದ್ದಾರೆ. ಇದೇ ಸಮಯಕ್ಕೆ ಬಂದ ಕಣ್ಣೂರು ಎಕ್ಸ್‌ಪ್ರೆಸ್ ರೈಲು ಮೂವರಿಗೂ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೂವರು ಯುವಕರು ಹಳಿಯಿಂದ ಸುಮಾರು 15 ಅಡಿಗಳಷ್ಟು ದೂರಕ್ಕೆ ಹಾರಿ ಬಿದ್ದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರೈಲಿನ ಲೋಕೋ ಪೈಲಟ್ ನೀಡಿರುವ ಮಾಹಿತಿ ಪ್ರಕಾರ ರೈಲು ಬರುವಾಗ ಈ ಯುವಕರು ರೈಲು ಹಳಿ ಅತಿಕ್ರಮ ಪ್ರವೇಶ ಮಾಡಿರುವುದೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ.
ಒಂದೊಂದು ದಿಕ್ಕಿನಲ್ಲಿ 3 ಮೃತದೇಹ ಪತ್ತೆ
ಲೋಕೋ ಪೈಲಟ್ ನೀಡಿದ ಮಾಹಿತಿ ಮೇರೆಗೆ ತಡರಾತ್ರಿಯೇ ಘಟನಾ ಸ್ಥಳದಲ್ಲಿ ಮೃತದೇಹಗಳಿಗಾಗಿ ಶೋಧಿಸಲಾಗಿತ್ತು. ಆದರೆ, ಅಲ್ಲಿ ಯಾವುದೇ ಮೃತದೇಹಗಳು ಪತ್ತೆ ಆಗಿರಲಿಲ್ಲ. ಗುರುವಾರ ಮುಂಜಾನೆ ಮತ್ತೊಮ್ಮೆ ಮೃತದೇಹಗಳಿಗಾಗಿ ಶೋಧಿಸುವಾಗ, ಸ್ಥಳೀಯರು ಮೃತದೇಹಗಳ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಪರಿಶೀಲಿಸಿದಾಗ ಮೂವರು ಯುವಕರ ಮೃತದೇಹಗಳು ಒಂದೊಂದು ದಿಕ್ಕಿನಲ್ಲಿ ಬಿದ್ದಿದ್ದವು.
ಇದು ಘಟನೆ ಆಕಸ್ಮಿಕವೋ ಅಥವಾ ಆತ್ಮಹತ್ಯೆಯೇ ಎಂದು ಈಗಲೇ ನಿಖರವಾಗಿ ಹೇಳಲು ಸಾಧ್ಯವಿಲ್ಲ. ಈ ಸಂಬಂಧ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ರೈಲ್ವೆ ಎಸ್ಪಿ ಡಾ। ಸೌಮ್ಯಲತಾ ಮಾತನಾಡಿ. ಬುಧವಾರ ರಾತ್ರಿ ಕಣ್ಣೂರು ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ಮೂವರು ಯುವಕರು ಮೃತಪಟ್ಟಿದ್ದಾರೆ. ಮೃತರ ಗುರುತು ಪತ್ತೆಯಾಗಿದ್ದು, ಅವರ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಲೋಕೋಪೈಲೆಟ್ ಮಾಹಿತಿ ಪ್ರಕಾರ ರೈಲ್ವೆ ಹಳಿ ಮೇಲೆ ಯುವಕರ ಅಕ್ರಮ ಪ್ರವೇಶವೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ತನಿಖೆ ಬಳಿಕ ನಿಖರ ಕಾರಣ ತಿಳಿದು ಬರಲಿದೆ ಎಂದು ಹೇಳಿದರು.
;Resize=(690,390))
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))