30 ಅಕ್ರಮ ಗೋವು ಸಾಗಾಟ: ಮೂವರ ಬಂಧನ

| Published : Oct 05 2025, 01:00 AM IST

ಸಾರಾಂಶ

ಹೊಸಪೇಟೆಯಿಂದ ಬೆಂಗಳೂರಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 30 ಗೋವುಗಳನ್ನು ಬಜರಂಗದಳ ಕಾರ್ಯಕರ್ತರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಧುಗಿರಿ

ಹೊಸಪೇಟೆಯಿಂದ ಬೆಂಗಳೂರಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 30 ಗೋವುಗಳನ್ನು ಬಜರಂಗದಳ ಕಾರ್ಯಕರ್ತರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಿರಾ ಮೂಲಕ ಮಧುಗಿರಿಗೆ ಬರುತ್ತಿದ್ದ ಲಾರಿಯನ್ನು ಬೆಳಿಗ್ಗೆ ಬೆನ್ನಟ್ಟಿದ್ದ ಜಗದೀಶ್‌, ಗಂಗರಾಜು, ಲಿಖಿತ್ ಕುಮಾರ್‌ ಹಾಗೂ ನಾಗೇಶ್‌ ಎಂಬ ಕಾರ್ಯಕರ್ತರು ಲಾರಿಯನ್ನು ತಡೆದು ನಿಲ್ಲಿಸಿದಾಗ ಅದರಲ್ಲಿ 30ಗೋವುಗಳಿರುವುದನ್ನು ಕಂಡು ಕೂಡಲೇ ಪ್ರಾಣಿದಯಾ ಸಂಘದ ಸದಸ್ಯ ಜಗದೀಶ್‌ ಮೂಲಕ ಮಧುಗಿರಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಾರಿ ಚಾಲಕ ಎಂ.ಎಸ್‌.ಪಾಳ್ಯದ ಮುಜೀಬ್, ಕ್ಲೀನರ್ ಹಿದಾಯತ್‌ ಉಲ್ಲಾಖಾನ್, ಮಹಮದ್ ಸುಭಾನ್‌ ಅವರನ್ನು ವಶಕ್ಕೆ ಪಡೆದಿದ್ದಾರೆ.

ಹೊಸಪೇಟೆಯಿಂದ ಬೆಂಗಳೂರಿಗೆ ಅಕ್ರಮ ಸಾಗಾಟ

ಸಲೀಂ ಎಂಬಾತ ಹೋಸಪೇಟೆಯ ಸಂತೆಯಲ್ಲಿ ಈ ದನಗಳನ್ನು ತುಂಬಿಸಿಕೊಂಡು ಕಟಾವು ಮಾಡುವ ಉದ್ದೇಶದಿಂದ ಬೆಂಗಳೂರಿನ ಹೊಸಪಾಳ್ಯಕ್ಕೆ ಸಾಗಿಸುತ್ತಿದ್ದ. ಶನಿವಾರ ಮುಂಜಾನೆ ಖಚಿತ ಮಾಹಿತಿ ಮೇರೆಗೆ ಲಾರಿ ಅಡ್ಡಗಟ್ಟಿದ ಜಗದೀಶ್ ಹಾಗೂ ಇತರರು ಗೋವುಗಳ ಸಮೇತ ಮಧುಗಿರಿ ಪೋಲಿಸ್‌ ಠಾಣೆಗೆ ಲಾರಿ ತಂದು ಒಪ್ಪಿಸಿದರು. ಈ ವೇಳೆ ಪೊಲೀಸರು ಸಮ್ಮುಖದಲ್ಲಿ ಲಾರಿಯಲ್ಲಿದ್ದ ಗೋವುಗಳನ್ನು ರಕ್ಷಿಸಲಾಗಿದ್ದು ಸದ್ಯ ದಂಡಿಮಾರಮ್ಮ ದೇವಾಲಯದ ಆವರಣಕ್ಕೆ ಸ್ಥಳಾಂತರಿಸಲಾಗಿದೆ. ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್ ತಕ್ಷಣ ಗೋವುಗಳಿಗೆ ಮೇವು, ನೀರಿನ ವ್ಯವಸ್ಥೆ ಮಾಡಿದರು. ಈ ವೇಳೆ ಬಿಜೆಪಿ ಅಧ್ಯಕ್ಷ ಹನುಮಂತರೆಡ್ಡಿ ಕೆ.ಎಸ್‌.ಪಾಂಡುರಂಗಾರೆಡ್ಡಿ, ಮೋಹನ್ ರಾಜ್, ರಮೇಶ ಹಾಗೂ ಇತರರು ಗೋವುಗಳನ್ನು ರಕ್ಷಣೆ ಮಾಡುವಲ್ಲಿ ಕೈ ಜೋಡಿಸಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ರಮೇಶ್ ಮಾತನಾಡಿ, ಅಕ್ರಮ ಗೋವುಗಳ ಸಾಗಾಣೆ ಲಾರಿಯನ್ನು ಬಜರಂಗದಳ ಕಾರ್ಯಕರ್ತರು ಹಿಡಿದಿದ್ದು, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಿದ್ದರೂ ಇದು ಪುಸ್ತಕದಲ್ಲಿದೆ. ರಾಜ್ಯದಲ್ಲಿ ಜಾರಿಯಾಗಿಲ್ಲ ಎಂದರು.

ಲಾರಿಯಲ್ಲಿ ಮಚ್ಚು,ಲಾಂಗ್ ಕಾರದ ಪುಡಿ

ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್ ಮಾತನಾಡಿ, ಲಾರಿಯಲ್ಲಿ ಅಕ್ರಮ ಗೋವುಗಳ ಸಾಗಾಣೆ ನಡೆದಿದ್ದು, ತಡೆಯಲು ಬರುವವರ ಮೇಲೆ ದಾಳಿ ಮಾಡುವ ನಿಟ್ಟಿನಲ್ಲಿ ಮಚ್ಚು ,ಲಾಂಗು ಹಾಗೂ ಕಾರದಪುಡಿ ಎರಚಲು ವಾಹನ ಚಾಲಕರು ಇಟ್ಟುಕೊಂಡಿದ್ದರು. ಇದನ್ನು ನೋಡಿದರೆ ಇವರು ಯಾವುದೇ ರೀತಿಯ ಹಲ್ಲೆ ಮಾಡಲು ಹೇಸುವುದಿಲ್ಲ ಎಂಬುದು ತಿಳಿಯುತ್ತದೆ. ಇಂತಹ ಘಟನೆಗಳು ನಡೆಯಲು ಬಿಡಬಾರದು. ಈಗ ಈ ಗೋವುಗಳನ್ನು ಗೋಶಾಲೆಗೆ ಸೇರಿಸಲು ಕ್ರಮ ವಹಿಸಲಿದ್ದು, ಇವುಗಳ ರಕ್ಷಣೆಗೆ ನಿಂತ ಎಲ್ಲರಿಗೂ ಧನ್ಯವಾದ ಹೇಳಿದರು.