ಸಾರಾಂಶ
- ಇದು ಸಹಜ ಸಾವೋ ಅಥವಾ ವಿಷವಿಕ್ಕಿ ಕೊಂದಿದ್ದೋ?
- ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲುಕನ್ನಡಪ್ರಭ ವಾರ್ತೆ ಎನ್.ಆರ್.ಪುರ (ಚಿಕ್ಕಮಗಳೂರು)ತಾಲೂಕಿನ ಕಾನೂರು ಗ್ರಾಮದ ರಾಮನಹಡ್ಲು ಎಂಬಲ್ಲಿ ಶುಕ್ರವಾರ ಬೆಳಗ್ಗೆ 30 ಮಂಗಗಳ ಮೃತದೇಹ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಕೆಲ ವರ್ಷಗಳ ಹಿಂದೆ ಬೆಳೆಹಾನಿ ಮಾಡುತ್ತಿದ್ದ ಕಾರಣಕ್ಕೆ ಹಾಸನದಲ್ಲಿ 38 ಮಂಗಗಳನ್ನು ವಿಷವಿಟ್ಟು ಕೊಂದಿದ್ದು ಭಾರೀ ಸುದ್ದಿಯಾಗಿತ್ತು. ಇದು ಕೂಡ ಅದೇ ರೀತಿಯ ಹತ್ಯೆಯೇ ಎಂಬ ಅನುಮಾನ ಇದೀಗ ಗ್ರಾಮಸ್ಥರಲ್ಲಿ ಮೂಡಿದೆ.ರಾಮನಹಡ್ಲು ಎಂಬಲ್ಲಿ ಚಿಕ್ಕಅಗ್ರಹಾರ ವಲಯ ಅರಣ್ಯ ಇಲಾಖೆ ವ್ಯಾಪ್ತಿಯ ಮೇಗರಮಕ್ಕಿ ಮೀಸಲು ಅರಣ್ಯದಲ್ಲಿ 30 ಮಂಗಗಳ ಮೃತದೇಹ ಪತ್ತೆಯಾಗಿದೆ. ಆತಂಕಗೊಂಡ ಗ್ರಾಮಸ್ಥರು ತಕ್ಷಣ ಅರಣ್ಯ ಇಲಾಖೆ, ಗ್ರಾಪಂ ಹಾಗೂ ಆರೋಗ್ಯ ಇಲಾಖೆ ಗಮನಕ್ಕೆ ಈ ವಿಚಾರ ತಂದಿದ್ದಾರೆ. ತಕ್ಷಣ ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ ಸಚಿನ್, ಎಸಿಎಫ್ ಸುದರ್ಶನ್, ಕಾನೂರು ಉಪ ವಲಯ ಅರಣ್ಯಾಧಿಕಾರಿ ರಂಗನಾಥ್, ಕಾನೂರು ಗ್ರಾಪಂ ಪಿಡಿಒ ಶ್ರೀನಿವಾಸ್, ಗ್ರಾಮ ಆಡಳಿತಾಧಿಕಾರಿ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೇಸಿಗೆ ದಿನಗಳಲ್ಲಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಮಂಗನಕಾಯಿಲೆ ಕಂಡು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ಕಟ್ಟಿನಮನೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ವಿನಯಕುಮಾರ್ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಪೋಸ್ಟ್ ಮಾರ್ಟಂ: ಮಂಗಗಳ ಅಸಹಜ ಸಾವು ಹಿನ್ನೆಲೆಯಲ್ಲಿ ಪಶು ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮಂಗಗಳ ಸಾವಿಗೆ ನಿಖರ ಕಾರಣ ತಿಳಿಯಲು ಅವುಗಳ ದೇಹದ ಕೆಲ ಭಾಗಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ತೀರ್ಮಾನಿಸಲಾಗಿದೆ. 1972 ವನ್ಯಜೀವಿ ಸಂರಕ್ಷಣ ಕಾಯ್ದೆಯಡಿ ಅರಣ್ಯ ಇಲಾಖೆಯವರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
====ಈ ಹಿಂದೆ ಹಾಸನದ ಚೌಡನಹಳ್ಳಿಯಲ್ಲಿ 38 ಮಂಗಗಳನ್ನು ವಿಷ ಹಾಕಿಕೊಲ್ಲಲಾಗಿತ್ತು. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿ, ಈ ಸಂಬಂಧ ಹಲವರನ್ನು ಬಂಧಿಸಲಾಗಿತ್ತು.