300 ಎಕರೆ ಅರಣ್ಯ ಒತ್ತುವರಿ ತೆರವು : ಸಚಿವ ಈಶ್ವರ ಖಂಡ್ರೆ

| N/A | Published : Jul 03 2025, 11:49 PM IST / Updated: Jul 04 2025, 12:43 PM IST

Eshwar Khandre
300 ಎಕರೆ ಅರಣ್ಯ ಒತ್ತುವರಿ ತೆರವು : ಸಚಿವ ಈಶ್ವರ ಖಂಡ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಅರಣ್ಯ ಭೂಮಿಯನ್ನು ಅಕ್ರಮವಾಗಿ ಕೆಲವರಿಗೆ ಮಂಜೂರು ಮಾಡಲಾಗಿತ್ತು. ಮತ್ತೆ ಕೆಲವರು ಒತ್ತುವರಿ ಮಾಡಿದ್ದರು. ಈ ಸಂಬಂಧ ಹೈಕೋರ್ಟ್‌ನಲ್ಲಿ ಅರಣ್ಯವಾಗಿ ಉಳಿಸಲು ಆದೇಶವಾಗಿತ್ತು.

  ತುಮಕೂರು  :  ತಿಪಟೂರು ಉಪ ವಿಭಾಗದ ಬುಕ್ಕಾಪಟ್ಟಣ ಚಿಂಕಾರಾ ವನ್ಯಜೀವಿಧಾಮದ ವ್ಯಾಪ್ತಿಯ ಮುತ್ತುಗದಹಳ್ಳಿ ಮೀಸಲು ಅರಣ್ಯದಲ್ಲಿ ಗುರುವಾರ 209 ಎಕರೆ ಅರಣ್ಯ ಹಾಗೂ ಅರಣ್ಯ ಇಲಾಖೆಯಿಂದ ತೋಟಗಾರಿಕೆ ಇಲಾಖೆಗೆ ನೀಡಿದ್ದ ಭೂಮಿ ಸೇರಿ ಒಟ್ಟು 300 ಎಕರೆ ಒತ್ತುವರಿಯನ್ನು ತೆರವುಗೊಳಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ. 

ಮೈಸೂರು ಮಹಾರಾಜರು 1926 ರಲ್ಲಿ ಮೈಸೂರು ಅರಣ್ಯ ಅಧಿನಿಯಮಗಳ ಅಡಿಯಲ್ಲಿ ಮುತ್ತುಗದಹಳ್ಳಿ ಅಂಬಾರಪುರದ ಸರ್ವೆ ನಂ. 46ರ ಜಮೀನನ್ನು ಅರಣ್ಯ ಇಲಾಖೆಗೆ ನೀಡಿದ್ದರು. ಆದರೆ ಈ ಅರಣ್ಯ ಭೂಮಿಯನ್ನು ಅಕ್ರಮವಾಗಿ ಕೆಲವರಿಗೆ ಮಂಜೂರು ಮಾಡಲಾಗಿತ್ತು.  

ಮತ್ತೆ ಕೆಲವರು ಒತ್ತುವರಿ ಮಾಡಿದ್ದರು. ಈ ಸಂಬಂಧ ಹೈಕೋರ್ಟ್‌ನಲ್ಲಿ ಅರಣ್ಯವಾಗಿ ಉಳಿಸಲು ಆದೇಶವಾಗಿತ್ತು. ಕಂದಾಯ ಅಧಿಕಾರಿಗಳು ಅಕ್ರಮ ಮಂಜೂರಾತಿ ರದ್ದುಪಡಿಸದ ಹಿನ್ನೆಲೆಯಲ್ಲಿ ಲೋಕಾಯುಕ್ತಕ್ಕೂ ದೂರು ಹೋಗಿತ್ತು. ಲೋಕಾಯುಕ್ತರ ಸೂಚನೆಯಂತೆ ಈಗ ಅರಣ್ಯ ಇಲಾಖೆಯ ಹೆಸರಿಗೆ ಇಂಡೀಕರಣ ಆಗಿದ್ದು, ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಅವರು ವಿವರಿಸಿದರು. 

ಪೊಲೀಸ್ ಇಲಾಖೆಯ ಬೆಂಬಲದೊಂದಿಗೆ ಹಾಸನ- ತುಮಕೂರು ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಅರಣ್ಯ ಭೂಮಿ ತೆರವು ಮಾಡಿಸಲಾಗಿದೆ. ಅರಣ್ಯ ಭೂಮಿ ಅನ್ಯ ಉದ್ದೇಶಕ್ಕೆ ಭೂಪರಿವರ್ತನೆ ಆಗದ ಹೊರತು ಅರಣ್ಯವಾಗಿ ಇರುತ್ತದೆ. ಇದನ್ನು ಅಧಿಕಾರಿಗಳು ಮತ್ತು ಸಾರ್ವಜನಿಕರು ಮನಗಾಣಬೇಕು ಎಂದೂ ಅವರು ಹೇಳಿದ್ದಾರೆ. ಯಶಸ್ವಿಯಾಗಿ ತೆರವು ಕಾರ್ಯಾಚರಣೆ ನಡೆಸಿದ ಅಧಿಕಾರಿ ಮತ್ತು ಸಿಬ್ಬಂದಿಗೆ ಸಚಿವರು ಅಭಿನಂದನೆ ಸಲ್ಲಿಸಿದ್ದಾರೆ.

Read more Articles on