ಸಾರಾಂಶ
ಸಿದ್ದಾಪುರ: ಬೆಳೆಗಳನ್ನು ಹಾಳು ಮಾಡಿ, ತಮ್ಮ ಮೇಲೆ ಅರಣ್ಯ ಇಲಾಖೆಯವರು ದೌರ್ಜನ್ಯ ಎಸಗಿದ್ದಾರೆ. ಇಲಾಖೆ ವಿರುದ್ಧ ಕಾನೂನು ಹೋರಾಟ ನಡೆಸುತ್ತೇವೆ ಎಂದು ತಾಲೂಕಿನ ಕುಣಜಿ ಗ್ರಾಮದ ಕೆಲವು ರೈತರು ಹೇಳಿದ್ದಾರೆ.
ಕುಣಜಿ ಗ್ರಾಮದ ತನುಜಾ ಪ್ರಕಾಶ ಗೌಡರ್, ಚನ್ನಬಸಪ್ಪ ಎಂ. ಗೌಡರ್, ಮಲ್ಲಸರ್ಜ ಗುರುನಾಥ ಗೌಡರ್ ಇತರರು ಸುದ್ದಿಗೋಷ್ಠಿಯಲ್ಲಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಮ್ಮ ವಹಿವಾಟಿನಲ್ಲಿರುವ ಬೆಟ್ಟ ಪ್ರದೇಶಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಯಾವ ನೋಟಿಸ್ ನೀಡದೇ ಪೂರ್ವ ಸೂಚನೆ ನೀಡದೇ ಆಗಮಿಸಿ, ಅಲ್ಲಿ ಕಳೆದ ೩-೪ ವರ್ಷದಿಂದ ಬೆಳೆಸಿದ ಅಡಕೆ, ತೆಂಗು, ಹಣ್ಣು-ಹಂಪಲು ಗಿಡಗಳನ್ನು ಕಡಿದು, ಸಂಪೂರ್ಣ ನಾಶ ಮಾಡಿದ್ದಾರೆ. ಲಕ್ಷಾಂತರ ರು. ವ್ಯಯಿಸಿ ಅಳವಡಿಸಿದ ಪೈಪ್‌ಲೈನ್‌ಗಳನ್ನು ಹಾಳುಗೆಡವಿದ್ದಾರೆ. ಅರಣ್ಯ ಇಲಾಖೆಯ ಈ ದೌರ್ಜನ್ಯವನ್ನು ಖಂಡಿಸಿ ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸುತ್ತೇವೆ. ಈ ದೌರ್ಜನ್ಯ ನಡೆಸಿದ ಅಧಿಕಾರಿಗಳ ತಲೆದಂಡಕ್ಕೆ ಆಗ್ರಹಿಸುತ್ತೇವೆ ಎಂದು ಹೇಳಿದರು.
ತನುಜಾ ಗೌಡರ್ ಮಾತನಾಡಿ, ನಾವು ಮೂರು ಕುಟುಂಬದವರು ಸ.ನಂ.೧೨೪/೨, ೧೨೫/೧, ೧೨೫/೨,೧೨೬ ಹಾಗೂ ೧೨೭ರ ಸ್ವಂತ ಮಾಲೀಕತ್ವ, ಕಬಜಾ ಇರುವ ಭಾಗಾಯ್ತ ಜಮೀನು ಹೊಂದಿದ್ದೇವೆ. ಕೆನರಾ ಪ್ರಿವಿಲೇಜ್ ಕಾನೂನು ಪ್ರಕಾರ ಸರ್ಕಾರಿ ಬೆಟ್ಟಗಳನ್ನು ನಮ್ಮ ಉಪಯೋಗಕ್ಕೆ ಬಿಡಲಾಗಿದೆ. ಈ ಬೆಟ್ಟಗಳೆಲ್ಲ ಪೋಡಿ ಕೂಡ ಆಗಿದೆ. ಈ ಬೆಟ್ಟಗಳಿಂದ ಸೊಪ್ಪು, ಮಣ್ಣು, ತರಗೆಲೆ ಬಳಸಿಕೊಂಡು ಬರುತ್ತಿದ್ದು, ಮಣ್ಣು ತೆಗೆದ ಜಾಗದಲ್ಲಿ ಅಡಕೆ, ತೆಂಗು, ಹಣ್ಣು-ಹಂಪಲು, ಕಾಡು ಜಾತಿಯ ಗಿಡಗಳನ್ನು ನೆಟ್ಟು ಬೆಳೆಸಿದ್ದೇವೆ. ಜು. ೨ರ ಮುಂಜಾನೆ ೬ ಗಂಟೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ೨೫-೩೦ ಸಿಬ್ಬಂದಿಯೊಂದಿಗೆ ಬಂದು ಎಲ್ಲ ಗಿಡಗಳನ್ನು ಕಡಿದು, ಬುಡಸಮೇತ ಕಿತ್ತು ಪೈಪ್‌ಲೈನ್ ಹಾಳುಗೆಡವಿ ಹೋಗಿದ್ದಾರೆ. ನಾವು ಸ್ಥಳಕ್ಕೆ ಹೋಗಿ ವಿನಂತಿಸಿಕೊಂಡರೂ ಅದಕ್ಕೆ ಪ್ರತಿಕ್ರಿಯಿಸದೇ ದೌರ್ಜನ್ಯ ನಡೆಸಿದ್ದಾರೆ. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಮಲ್ಲಸರ್ಜ ಗೌಡರ್ ಮಾತನಾಡಿ, ಕೆನರಾ ಪ್ರಿವಿಲೇಜ್ ಕಾಯ್ದೆ ಪ್ರಕಾರ ಬೆಟ್ಟ ಹಕ್ಕುದಾರರು ನಿಯಮ ಉಲ್ಲಂಘನೆ ಮಾಡಿದರೆ ಕಂದಾಯ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ವಸಾಹತು ಅಧಿಕಾರಿ, ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿ ಕ್ರಮಕೈಗೊಳ್ಳಬಹುದು. ಆದರೆ ನಮ್ಮ ಮೇಲೆ ಅರಣ್ಯ ಇಲಾಖೆ ದೌರ್ಜನ್ಯ ನಡೆಸಿದೆ. ಸುಮಾರು ₹೫ ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ಈ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದರು.
ಕುಣಜಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಶಿವಕುಮಾರ ಮಾತನಾಡಿ, ಬೆಟ್ಟಗಳು ಸಮಿತಿ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾರೆ. ಆದರೆ ಸಮಿತಿಯಿಂದ ಮಾಹಿತಿ ಕೇಳಬಹುದಿತ್ತು. ಅರಣ್ಯ ಇಲಾಖೆ ಏಕಾಏಕಿ ದೌರ್ಜನ್ಯ ನಡೆಸಿದ್ದು ತಪ್ಪು ಎಂದರು.ತಾಪಂ ಮಾಜಿ ಅಧ್ಯಕ್ಷ ಸುಧೀರ ಗೌಡರ್, ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಇಲಿಯಾಸ್ ಸಾಬ್, ಜಿಲ್ಲಾ ಪ್ರಮುಖ ಶಿವಲಿಂಗಯ್ಯ ಅಲ್ಲಯ್ಯನವರ, ಪರಮೇಶ್ವರಯ್ಯ ಕಾನಳ್ಳಿಮಠ, ಸಿ.ಎಸ್. ಗೌಡರ್, ಬಸವರಾಜ ಚಕ್ರಸಾಲಿ, ನಾಗರಾಜ ದೋಶೆಟ್ಟಿ, ಕುಮಾರ ಗೌಡರ್ ಉಪಸ್ಥಿತರಿದ್ದರು.