ಧರ್ಮಯಾತ್ರಗೆ 300 ವಾಹನಗಳಿಗೆ ಚಾಲನೆ

| Published : Aug 24 2025, 02:00 AM IST

ಸಾರಾಂಶ

ಶಾಸಕ ಎಂ.ಸತೀಶ್ ರೆಡ್ಡಿ ಅವರು ಪೂಜೆ ಸಲ್ಲಿಸಿ ಧರ್ಮಯಾತ್ರೆಗೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಬೊಮ್ಮನಹಳ್ಳಿ “ಧರ್ಮೋ ರಕ್ಷತಿ ರಕ್ಷಿತಃ”, ಧರ್ಮದ ಉಳಿವಿಗಾಗಿ ಧರ್ಮ ಯುದ್ಧ ನಡೆಸುತ್ತಿದ್ದು, ಯಾವುದೇ ಧರ್ಮವನ್ನು ಅವಹೇಳನ ಮಾಡಬಾರದು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಭೇದ ತೊರೆದು ಇಂದು ಧರ್ಮಸ್ಥಳ ರಕ್ಷಣೆಗೆ ಮುಂದಾಗಿದ್ದೇವೆಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಸತೀಶ್ ರೆಡ್ಡಿ ಹೇಳಿದರು.

ಶನಿವಾರ ಹೊಂಗಸಂದ್ರದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಶಾಸಕ ಎಂ.ಸತೀಶ್ ರೆಡ್ಡಿಯವರು ಸುಮಾರು ೩೦೦ ವಾಹನಗಳೊಂದಿಗೆ ಸಾವಿರಾರು ಭಕ್ತಾದಿಗಳು, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರೊಡನೆ ಧರ್ಮಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಧರ್ಮಸ್ಥಳ ಕ್ಷೇತ್ರದ ಮೇಲೆ ಅಪಪ್ರಚಾರ ಮಾಡುತ್ತಿರುವ ಕೆಲವರು ಈಗಾಗಲೇ ಶ್ರೀ ಮಂಜುನಾಥನ ಅವಕೃಪೆಗೆ ಪಾತ್ರರಾಗಿದ್ದಾರೆ. ಈಗಾಗಲೇ ಕಳೆದ ಎರಡು ದಿನಗಳಿಂದ ಪೊಲೀಸರು ಅಂತಹವರನ್ನು ಬಂಧಿಸುತ್ತಿದ್ದಾರೆ. ಸದನದಲ್ಲಿ ಈಗಾಗಲೇ ಧರ್ಮಸ್ಥಳದ ಅಪಪ್ರಚಾರದ ಬಗ್ಗೆ ಧ್ವನಿ ಎತ್ತಿದ್ದೇವೆ ಎಂದರು.

ಈ ಧರ್ಮಯಾತ್ರೆಯಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಜಲ್ಲಿ ರಮೇಶ್, ರಾಮ ಮೋಹನ್ ರಾಜ್, ಬಿ. ಮಂಜುನಾಥ ರೆಡ್ಡಿ, ಪುರುಷೋತ್ತಮ್ (ರವಿ), ಅರಕೆರೆ ವಾರ್ಡ್ ಅಧ್ಯಕ್ಷ ಮಂಜುನಾಥ್, ಬಿಜೆಪಿ ಮುಖಂಡರಾದ ಮುನಿರಾಂ, ಮುರಳಿ, ರಾಮಚಂದ್ರ, ಸೋಮಸಂದ್ರಪಾಳ್ಯ ಶ್ರೀನಿವಾಸ ರೆಡ್ಡಿ, ಇಬ್ಬಲೂರು ಮುನಿರಾಜು, ಎಟಿ ಲೋಕೇಶ್ ಮತ್ತಿತರರು ಇದ್ದರು.