5 ವರ್ಷದಲ್ಲಿ 30000 ಉದ್ಯೋಗ: ಹೊಸ ಜೈವಿಕ ತಂತ್ರಜ್ಞಾನ ನೀತಿ- 20 ಸಾವಿರ ಜನರಿಗೆ ವಿಶೇಷ ಕೌಶಲ್ಯ ತರಬೇತಿ ನೀಡುವ ಗುರಿ

| Published : Sep 07 2024, 01:42 AM IST / Updated: Sep 07 2024, 05:52 AM IST

Government bank job
5 ವರ್ಷದಲ್ಲಿ 30000 ಉದ್ಯೋಗ: ಹೊಸ ಜೈವಿಕ ತಂತ್ರಜ್ಞಾನ ನೀತಿ- 20 ಸಾವಿರ ಜನರಿಗೆ ವಿಶೇಷ ಕೌಶಲ್ಯ ತರಬೇತಿ ನೀಡುವ ಗುರಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕವನ್ನು ಜಾಗತಿಕ ಜೈವಿಕ ತಂತ್ರಜ್ಞಾನ (ಬಿಟಿ)ದ ಉತ್ಪಾದನಾ ಕೇಂದ್ರವನ್ನಾಗಿಸುವ ಗುರಿಯ ಜತೆಗೆ 2029ರ ವೇಳೆ ಬಿಟಿ ಕ್ಷೇತ್ರದಲ್ಲಿ 30 ಸಾವಿರ ಉದ್ಯೋಗ ಸೃಷ್ಟಿ ಮತ್ತು 20 ಸಾವಿರ ಜನರಿಗೆ ವಿಶೇಷ ಕೌಶಲ್ಯ ತರಬೇತಿ ನೀಡುವ ಗುರಿ 

 ಬೆಂಗಳೂರು :  ಕರ್ನಾಟಕವನ್ನು ಜಾಗತಿಕ ಜೈವಿಕ ತಂತ್ರಜ್ಞಾನ (ಬಿಟಿ)ದ ಉತ್ಪಾದನಾ ಕೇಂದ್ರವನ್ನಾಗಿಸುವ ಗುರಿಯ ಜತೆಗೆ 2029ರ ವೇಳೆ ಬಿಟಿ ಕ್ಷೇತ್ರದಲ್ಲಿ 30 ಸಾವಿರ ಉದ್ಯೋಗ ಸೃಷ್ಟಿ ಮತ್ತು 20 ಸಾವಿರ ಜನರಿಗೆ ವಿಶೇಷ ಕೌಶಲ್ಯ ತರಬೇತಿ ನೀಡುವ ಗುರಿಯೊಂದಿಗೆ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ 2024-29ನೇ ಸಾಲಿನ ಜೈವಿಕ ತಂತ್ರಜ್ಞಾನ ನೀತಿಯನ್ನು ಪ್ರಕಟಿಸಿದೆ.

ಕರ್ನಾಟಕದ ಬಿಟಿ ಕ್ಷೇತ್ರಕ್ಕೆ ಹೊಸ ನವೋದ್ಯಮ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪ್ರವೇಶಕ್ಕೆ ಉತ್ತೇಜನ ನೀಡುವುದು ಸೇರಿದಂತೆ ಹಲವು ಅಂಶಗಳನ್ನೊಳಗೊಂಡ ಬಿಟಿ ನೀತಿ 2024-29 ಅನ್ನು ಸಿದ್ಧಪಡಿಸಲಾಗಿದೆ. ಕೌಶಲ್ಯಾಭಿವೃದ್ಧಿ, ಬಿಟಿ ಕ್ಷೇತ್ರದ ನಿಯಂತ್ರಣವನ್ನು ವ್ಯವಸ್ಥಿತಗೊಳಿಸುವುದು, ಬಿಟಿ ಚಟುವಟಿಕೆಗಳಿಗೆ ಬೆಂಬಲ ಹಾಗೂ ಬಿಟಿ ಉದ್ಯಮದಲ್ಲಿ ಕೆಲಸ ಮಾಡುವವರಿಗೆ ಹಣಕಾಸಿನ ಪ್ರೋತ್ಸಾಹ ಹಾಗೂ ವಿವಿಧ ರಿಯಾಯಿತಿಗಳನ್ನು ನೀಡುವ ಅಂಶಗಳು ನೂತನ ನೀತಿಯಲ್ಲಿದೆ.

2029ರ ವೇಳೆಗೆ 50 ನವೀನ ಸಂಸ್ಥೆಗಳು ಸೇರಿದಂತೆ 300 ಜೈವಿಕ ತಂತ್ರಜ್ಞಾನ ಕಂಪನಿಗಳನ್ನು ರಚಿಸುವಂತೆ ಮಾಡುವುದು, 30 ಸಾವಿರ ಉದ್ಯೋಗ ಸೃಷ್ಟಿಸಿ, 20 ಸಾವಿರ ಜನರಿಗೆ ವಿಶೇಷ ಕೌಶಲ್ಯ ತರಬೇತಿ ನೀಡಲು 200ಕ್ಕೂ ಹೆಚ್ಚಿನ ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದುವ ಗುರಿಯನ್ನು ನೀತಿ ಹೊಂದಿದೆ.

ಕರ್ನಾಟಕವನ್ನು ಜಾಗತಿಕ ಜೈವಿಕ ಉತ್ಪಾದನಾ ಕೇಂದ್ರವನ್ನಾಗಿಸಲು ಉದ್ಯೋಗ ಮತ್ತು ಉದ್ಯಮಶೀಲತೆ ಬೆಂಬಲಿಸುವುದು. ವ್ಯವಹಾರ ಸುಗಮಗೊಳಿಸಲು ಮತ್ತು ಹೂಡಿಕೆಯನ್ನು ಆಕರ್ಷಿಸಲು ಜೈವಿಕ ತಂತ್ರಜ್ಞಾನ ನಿಯಮಗಳನ್ನು ಸರಳಗೊಳಿಸುವುದು ಹಾಗೂ ಜೀನೋಮಿಕ್ಸ್‌, ಅಣ್ವಿಕ ಜೀವಶಾಸ್ತ್ರ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ವಾಣೀಜ್ಯೀಕರಣಕ್ಕೆ ಬೆಂಬಲ ನೀಡುವ ಅಂಶಗಳನ್ನು ನೀತಿಯಲ್ಲಿ ಸೇರಿಸಲಾಗಿದೆ.

ಹಣಕಾಸು ಪ್ರೋತ್ರಾಹ-ರಿಯಾಯಿತಿ: ನೀತಿ ಅಡಿಯಲ್ಲಿ ನವೋದ್ಯಮಗಳಿಗೆ ರಾಜ್ಯ ಜಿಎಸ್‌ಟಿ, ಮಾರುಕಟ್ಟೆ ವೆಚ್ಚ, ಪೇಟೆಂಟ್‌ ವೆಚ್ಚ, ಗುಣಮಟ್ಟ ಪ್ರಮಾಣೀಕರಣ ವೆಚ್ಚ ಮರುಪಾವತಿಯನ್ನು ನೀಡುವುದಾಗಿ ಘೋಷಿಸಲಾಗಿದೆ. ಅದೇ ರೀತಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಪೇಟೆಂಟ್‌ ವೆಚ್ಚ, ಮಾರುಕಟ್ಟೆ ವೆಚ್ಚ, ಗುಣಮಟ್ಟ ಪ್ರಮಾಣೀಕರಣ ವೆಚ್ಚ, ಪ್ರೋಟೋಟೈಪಿಂಗ್‌ ವೆಚ್ಚ ಮರುಪಾವತಿ, ಬಡ್ಡಿ ಸಬ್ಸಿಡಿ, ಸ್ಟ್ಯಾಂಪ್‌ ಡ್ಯೂಟಿ ವಿನಾಯಿತಿ, ಭೂ ಪರಿವರ್ತನೆ ಶುಲ್ಕ ಪ್ರೋತ್ಸಾಹ ಹಾಗೂ ವಿದ್ಯುತ್‌ ದರ ರಿಯಾಯಿತಿ ನೀಡುವ ಕುರಿತು ಉಲ್ಲೇಖಿಸಲಾಗಿದೆ.

ಹಾಗೆಯೇ ದೊಡ್ಡ ಕೈಗಾರಿಕೆಗಳಿಗೆ ಪೇಟೆಂಟ್‌ ವೆಚ್ಚ, ಮಾರುಕಟ್ಟೆ ವೆಚ್ಚ, ಎಸ್‌ಟಿಪಿ ವೆಚ್ಚ, ಮಳೆ ನೀರು ಕೊಯ್ಲು ವೆಚ್ಚ, ಭೂ ವೆಚ್ಚ ಮರುಪಾವತಿ, ಬಡ್ಡಿ ಸಬ್ಸಿಡಿ, ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕಗಳು ಹಾಗೂ ವಿದ್ಯುತ್‌ ದರ ರಿಯಾಯಿತಿ ನೀಡುವ ಕುರಿತು ಘೋಷಿಸಲಾಗಿದೆ.