ಸಾರಾಂಶ
- ಸುಗಮ ಪರೀಕ್ಷೆಗೆ ಶಿಕ್ಷಣ ಇಲಾಖೆ ಸಕಲ ರೀತಿಯಲ್ಲೂ ಸಜ್ಜು: ಬಿಇಒ ಕೆ.ಟಿ.ನಿಂಗಪ್ಪ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
2024-25ಸೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾರ್ಚ್21ರಿಂದ ಏಪ್ರಿಲ್ 4 ರವರೆಗೆ ನಡೆಯಲಿವೆ. ಪರೀಕ್ಷೆಯನ್ನು ಅತ್ಯಂತ ಪಾರದರ್ಶಕ ಹಾಗೂ ಸಸೂತ್ರವಾಗಿ ನಡೆಸಲು ಶಿಕ್ಷಣ ಇಲಾಖೆ ವತಿಯಿಂದ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ.ನಿಂಗಪ್ಪ ತಿಳಿಸಿದ್ದಾರೆ.2024-25ನೇ ಸಾಲಿಗೆ ನವೀನ ವಿದ್ಯಾರ್ಥಿಗಳಲ್ಲಿ ಬಾಲಕರು 1341, ಬಾಲಕಿಯರು 1619 ಸೇರಿ ಒಟ್ಟು 2960 ಮಂದಿ ಇದ್ದಾರೆ. ಪುನರಾವರ್ತಿತ ವಿದ್ಯಾರ್ಥಿಗಳ ಪೈಕಿ 43 ಬಾಲಕರು, 29 ಬಾಲಕಿಯರು ಸೇರಿ ಒಟ್ಟು 72 ವಿದ್ಯಾರ್ಥಿಗಳು, ಖಾಸಗಿ ವಿದ್ಯಾರ್ಥಿಗಳಲ್ಲಿ ಬಾಲಕರು 11 ಮತ್ತು ಬಾಲಕಿಯರು 6 ಸೇರಿ ಒಟ್ಟು 17, ಪುನರಾವರ್ತಿತ ಖಾಸಗಿ ವಿದ್ಯಾರ್ಥಿಗಳಲ್ಲಿ ಬಾಲಕ 1, ಬಾಲಕಿ 1 ಸೇರಿ ಒಟ್ಟು 2 ಮಂದಿ ಇದ್ದಾರೆ. ಒಟ್ಟು ನೋಂದಣಿ ಆಗಿರುವ ವಿದ್ಯಾರ್ಥಿಗಳ ಸಂಖ್ಯೆ ಬಾಲಕರು 1396, ಬಾಲಕಿಯರು 1655 ಎಲ್ಲ ಸೇರಿ ಒಟ್ಟು 3051 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ ಎಂದಿದ್ದಾರೆ.
11 ಪರೀಕ್ಷಾ ಕೇಂದ್ರಗಳು:ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕು ವತಿಯಿಂದ 11 ಪರೀಕ್ಷೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನಗರ ಪ್ರದೇಶದಲ್ಲಿ 3 ಮತ್ತು ಗ್ರಾಮೀಣ ಕೇಂದ್ರದಲ್ಲಿ 8 ಪರೀಕ್ಷಾ ಕೇಂದ್ರಗಳನ್ನು ಮಾಡಲಾಗಿದೆ. ಒಟ್ಟಾರೆಯಾಗಿ 11 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 3051 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ. ಈ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು 128 ಸುವ್ಯವಸ್ಥಿತ ಕೊಠಡಿಗಳು, ಪೀಠೋಪಕರಣಗಳು, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.
ಪರೀಕ್ಷಾ ಕೇಂದ್ರ ಸುತ್ತಲ 200 ಅಡಿಗಳ ದೂರದವರೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಪರೀಕ್ಷೆಗಳು ಸುಗಮ ಹಾಗೂ ಸುರಕ್ಷಿತವಾಗಿ ನಡೆಸಲು ಪ್ರತಿ ಕೇಂದ್ರಕ್ಕೆ ಒಬ್ಬ ಪೊಲೀಸ್ ಹಾಗೂ ಒಬ್ಬ ಗೃಹರಕ್ಷಕ ದಳ ಸಿಬ್ಬಂದಿ ನಿಯೋಜಿಸಲಾಗಿದೆ. 11 ಆಶಾ ಕಾರ್ಯಕರ್ತೆಯರು ಹಾಗೂ 11 ಆರೋಗ್ಯ ಸಿಬ್ಬಂದಿ ಸಹ ನೇಮಕ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.128 ಶಿಕ್ಷಕರನ್ನು ಪರೀಕ್ಷಾ ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಿಸಿಕೊಳ್ಳಲಾಗಿದೆ. 11 ಜನ ಸ್ಥಾನಿಕ ಜಾಗೃತ ದಳದವರನ್ನು, 6 ಜನ ಮಾರ್ಗಾಧಿಕಾರಿಗಳನ್ನು, ತಾಲೂಕುಮಟ್ಟದ ಅಧಿಕಾರಿಗಳನ್ನು, ಸಂಚಾರಿ ಜಾಗೃತ ದಳದ ತಂಡವನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
6 ಇಲಾಖೆ ವಾಹನಗಳಲ್ಲಿ ಪ್ರಶ್ನೆ ಮತ್ತು ಉತ್ತರ ಪತ್ರಿಕೆಗಳನ್ನು ಸರಬರಾಜು ಮಾಡಲು ವ್ಯವಸ್ಥೆ ಮಾಡಲಾಗಿರುವ ಮೂಲಕ ಪರೀಕ್ಷಾಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ: 9844231116 ಇಲ್ಲಿಗೆ ಸಂಪರ್ಕಿಸಲು ಅವಕಾಶವಿದೆ. ಗೈರುಹಾಜರಿ ಹಾಗೂ ಸ್ವೀಕೃತಿ ಕೇಂದ್ರಗಳ ನಿರ್ವಹಣೆಗಾಗಿ ನಿಯೋಜಿತ ಶಿಕ್ಷಣ ಸಂಯೋಜಕ ಹನುಮಂತಪ್ಪ ಅವರನ್ನು ನೇಮಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಕ್ಷೇತ್ರ ಸಂಯೋಜನಾಧಿಕಾರಿ ತಿಪ್ಪೇಶಪ್ಪ ಮುಂತಾದವರು ಇದ್ದರು.
- - - -18ಎಚ್.ಎಲ್.ಐ1: ಕೆ.ಟಿ. ನಿಂಗಪ್ಪ