ಸಾರಾಂಶ
ಹನೂರು : ರಸ್ತೆಯ ಸಂಪರ್ಕವೇ ಇಲ್ಲದ ಚಾಮರಾಜನಗರ ಜಿಲ್ಲೆಯ 31 ಹಾಡಿಗಳಿಗೆ ₹42 ಕೋಟಿ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದರು.
ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಾರ್ ಗ್ರಾಮದಲ್ಲಿ ಭಾನುವಾರ ನೂತನ ವಿದ್ಯುತ್ ಸಂಪರ್ಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆಯುತ್ತಿದ್ದರೂ ಕಾಡಂಚಿನ ಕುಗ್ರಾಮಗಳಿಗೆ ಕುಡಿಯುವ ನೀರು, ರಸ್ತೆ, ವಿದ್ಯುತ್ ಸೌಲಭ್ಯ ಕೊಡಲು ಸಾಧ್ಯವಾಗಿಲ್ಲ. ಇವರನ್ನು ಸಮಾಜದ ಮುಖ್ಯವಾಹನಿಗೆ ತರುವ ನಿಟ್ಟಿನಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿಕೊಡಲು ತೀರ್ಮಾನ ಕೈಗೊಳ್ಳಲಾಗಿದೆ. ಹಾಡಿಗಳಲ್ಲಿನ 123 ಕಿ.ಮೀ.ರಸ್ತೆಯನ್ನು ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಮೂರು ಅವಧಿಗೆ ಶಾಸಕರಾಗಿದ್ದ ಆರ್.ನರೇಂದ್ರ ಅವರು ಈ ಹಿಂದೆ ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕೊಡಿಸಲು ಅವಿರತ ಪ್ರಯತ್ನ ಮಾಡಿದ್ದಾರೆ. ಇದೀಗ ಹಾಡಿಯ ನಿವಾಸಿಗಳಿಗೆ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಈ ಹಿಂದೆ ಅರಣ್ಯದಲ್ಲಿ ವಾಸ ಮಾಡುತ್ತಿದ್ದ ಬುಡಕಟ್ಟು ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಗಿದೆ ಎಂದು ಹೇಳಿದರು.
ಶಾಸಕ ಎಂ.ಆರ್ ಮಂಜುನಾಥ್ ಮಾತನಾಡಿ, ಇದೀಗ ಪಾಲಾರ್ ಹಾಡಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಉಳಿದಂತೆ ಮುಂದಿನ ದಿನಗಳಲ್ಲಿ ಎಲ್ಲಾ ಹಾಡಿಗಳಿಗೂ ವಿದ್ಯುತ್ ಸಂಪರ್ಕ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.