ಸಾರಾಂಶ
ತಕ್ಷಣ ಅವರನ್ನು ಚಿಕಿತ್ಸೆ ಗೆ ಒಳಪಡಿಸಿದಾಗ ಊಟ ಸೇವನೆಯಿಂದ ಅಸ್ವಸ್ಥರಾಗಿದ್ದಾರೆ ಎಂದು ಗೊತ್ತಾಗಿದೆ. ಅಸ್ವಸ್ಥಗೊಂಡ 32 ವಿದ್ಯಾರ್ಥಿಗಳ ಪೈಕಿ 16 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, 11 ವಿದ್ಯಾರ್ಥಿಗಳು ಡಿಸ್ಚಾರ್ಜ್ ಆಗಿದ್ದಾರೆ.
ಮಿಮ್ಸ್ ಸೇರಿ ವಿವಿಧ ಆಸ್ಪತ್ರೆಗಳಿಗೆ ದಾಖಲು, ಡಿಎಚ್ ಒ ಭೇಟಿ
ಕನ್ನಡಪ್ರಭ ವಾರ್ತೆ ಮದ್ದೂರುತಾಲೂಕಿನ ಭಾರತೀನಗರದ ಜಿ.ಮಾದೇಗೌಡ ಶಿಕ್ಷಣ ಸಂಸ್ಥೆಯ ಭಾರತೀ ಎಕ್ಸಲೆನ್ಸ್ ಶಾಲೆಯ ವಿದ್ಯಾರ್ಥಿ ನಿಲಯದಲ್ಲಿ ಗುರುವಾರ ಮಧ್ಯಾಹ್ನ ಊಟ ಸೇವಿಸಿದ 32 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಜರುಗಿದೆ.
ಶಾಲೆಯ ಒಂದನೇ ತರಗತಿಯಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ 32 ವಿದ್ಯಾರ್ಥಿಗಳು ಗುರುವಾರ ಮಧ್ಯಾಹ್ನ ಅನ್ನ- ಸಾಂಬಾರ್ ಸೇವಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಈ ವಿದ್ಯಾರ್ಥಿಗಳು ಇದ್ದಕ್ಕಿದ್ದಂತೆ ಜ್ವರ, ವಾಂತಿ ಮತ್ತು ಹೊಟ್ಟೆ ನೋವಿನಿಂದಅಸ್ವಸ್ಥರಾಗಿದ್ದಾರೆ.
ತಕ್ಷಣ ಅವರನ್ನು ಚಿಕಿತ್ಸೆ ಗೆ ಒಳಪಡಿಸಿದಾಗ ಊಟ ಸೇವನೆಯಿಂದ ಅಸ್ವಸ್ಥರಾಗಿದ್ದಾರೆ ಎಂದು ಗೊತ್ತಾಗಿದೆ. ಅಸ್ವಸ್ಥಗೊಂಡ 32 ವಿದ್ಯಾರ್ಥಿಗಳ ಪೈಕಿ 16 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, 11 ವಿದ್ಯಾರ್ಥಿಗಳು ಡಿಸ್ಚಾರ್ಜ್ ಆಗಿದ್ದಾರೆ.ಉಳಿದ ವಿದ್ಯಾರ್ಥಿಗಳನ್ನು ತೀವ್ರ ನಿಗಾ ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ.
ಮಿಮ್ಸ್ ಆಸ್ಪತ್ರೆಯಲ್ಲಿ ನಾಲ್ಕು, ಪ್ರಗತಿ, ಸ್ಪಂದನ ಮತ್ತು ರವಿ ನರ್ಸಿಂಗ್ ಹೋಮ್ ನಲ್ಲಿ ತಲಾ ಒಬ್ಬರು ವಿದ್ಯಾರ್ಥಿಗಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ನೋಡಲ್ ಅಧಿಕಾರಿ ಡಾ.ಬೆಟ್ಟಸ್ವಾಮಿಗೌಡ ತಿಳಿಸಿದ್ದಾರೆ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮೋಹನ್, ಪ್ರಭಾರ ತಾಲೂಕು ಆರೋಗ್ಯ ಅಧಿಕಾರಿ ಡಾ.ರವಿಶಂಕರ್ ಸೇರಿದಂತೆ ಇಲಾಖೆ ವೈದ್ಯರು ಹಾಗು ಸಿಬ್ಬಂದಿ ಆಸ್ಪತ್ರೆಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ಯಾವುದೇ ಆತಂಕಕ್ಕೆ ಒಳಗಾಗದಂತೆ ವಿದ್ಯಾರ್ಥಿಗಳ ಪೋಷಕರಿಗೆ ಧೈರ್ಯ ತುಂಬಿದ್ದಾರೆ.