3280 ಸರ್ಕಾರಿ ಸರ್ವೇ ನಂಬರ್‌ಗಳ ದರಖಾಸ್ತು ಜಮೀನು ದುರಸ್ತುಗೆ ಚಾಲನೆ: ಕಂದಾಯ ಸಚಿವ ಕೃಷ್ಣ ಭೈರೇಗೌಡ

| Published : Dec 15 2024, 02:04 AM IST / Updated: Dec 15 2024, 12:22 PM IST

3280 ಸರ್ಕಾರಿ ಸರ್ವೇ ನಂಬರ್‌ಗಳ ದರಖಾಸ್ತು ಜಮೀನು ದುರಸ್ತುಗೆ ಚಾಲನೆ: ಕಂದಾಯ ಸಚಿವ ಕೃಷ್ಣ ಭೈರೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಜಿಲ್ಲೆಯಲ್ಲಿ ೩೨೮೦ ಸರ್ಕಾರಿ ಸರ್ವೇ ನಂಬರ್‌ಗಳಲ್ಲಿ ದರಖಾಸ್ತು ಜಮೀನು ಮಂಜೂರಾಗಿದ್ದು, ಇದರಲ್ಲಿ ೧೧೪೦ ಸರ್ವೇ ನಂಬರ್‌ಗಳಿಗೆ ಒನ್ ಟು ಫೈವ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇದರಲ್ಲಿ ೪೫೪ ರೈತರ ಸರ್ವೇ ಕಾರ್ಯ ಮುಗಿದಿದೆ.  

 ನಾಗಮಂಗಲ : ಜಿಲ್ಲೆಯಲ್ಲಿ ೩೨೮೦ ಸರ್ಕಾರಿ ಸರ್ವೇ ನಂಬರ್‌ಗಳಲ್ಲಿ ದರಖಾಸ್ತು ಜಮೀನು ಮಂಜೂರಾಗಿದ್ದು, ಇದರಲ್ಲಿ ೧೧೪೦ ಸರ್ವೇ ನಂಬರ್‌ಗಳಿಗೆ ಒನ್ ಟು ಫೈವ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇದರಲ್ಲಿ ೪೫೪ ರೈತರ ಸರ್ವೇ ಕಾರ್ಯ ಮುಗಿದಿದೆ. ಅದರಲ್ಲಿ ೨೭೧ ಜನರಿಗೆ ಪೋಡಿ ದುರಸ್ತು ಮಾಡಿ ಹೊಸ ಪಹಣಿ ಮತ್ತು ಪೋಡಿ ದಾಖಲೆ ವಿತರಣೆ ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

ಶನಿವಾರ ನಾಗಮಂಗಲ ಪಟ್ಟಣದಲ್ಲಿ ದರಖಾಸ್ತು ಪೋಡಿ ದುರಸ್ತು, ಸರಳೀಕೃತ ಕಾರ್ಯಾಚಾರಣೆಗೆ ಚಾಲನೆ ಹಾಗೂ ಹೊಸ ಪಹಣಿ ಮತ್ತು ಪೋಡಿ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕಂದಾಯ ಇಲಾಖೆಯಲ್ಲಿ ಮಹತ್ವದ ಕೆಲಸ ಪ್ರಾರಂಭಿಸಿದ್ದು, ಒಂದೇ ವಾರದಲ್ಲಿ ೪೫೪ ಪ್ರಕರಣಗಳನ್ನು ಅಳತೆ ಮಾಡಿ ೨೭೧ ರೈತರಿಗೆ ಹಕ್ಕು ಸ್ವಾಮ್ಯ ನೀಡಲಾಗುತ್ತಿದೆ. ಈ ಮೊದಲು ಒಂದು ವರ್ಷಕ್ಕೆ ಕೇವಲ ೧೦೦ ಪೋಡಿ ದುರಸ್ತು ಮಾಡಲಾಗುತ್ತಿತ್ತು. ಈ ಕೆಲಸವನ್ನು ಸರಳೀಕರಣಗೊಳಿಸಿ ಎಲ್ಲಾ ದಾಖಲೆಗಳಗನ್ನು ಆನ್‌ಲೈನ್‌ನಲ್ಲಿ ಸಂಗ್ರಹಿಸಿಡುವ ಕೆಲಸ ಮಾಡಲಾಗುತ್ತಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಕಂದಾಯ ಇಲಾಖೆ ಕೆಲಸಗಳನ್ನು ಜನರ ಮನೆ ಬಾಗಿಲಿಗೆ ತೆರಳಿ ಮಾಡಿಕೊಡುವಂತಹ ವ್ಯವಸ್ಥೆ ಜಾರಿಗೊಳಿಸಿದ್ದೇವೆ ಎಂದರು.

೧೯೭೦ರ ದಶಕದಲ್ಲಿ ಮಂಜೂರಾಗಿರುವ ದರಖಾಸ್ತು ಜಮೀನುಗಳು ನಾನಾ ಕಾರಣಗಳಿಂದ ಇದುವರೆಗೂ ದುರಸ್ತು ಆಗಿಲ್ಲ. ಅನೇಕರು ತಮ್ಮ ಶಕ್ತಿಯನ್ನು ಬಳಸಿ ದುರಸ್ತುಪಡಿಸಿಕೊಂಡಿದ್ದರೆ, ಹಲವರು ದಾಖಲೆಗಳಿಲ್ಲದ ಕಾರಣ ದುರಸ್ತು ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಕೆಲವರು ಕೆಲ ದಾಖಲೆಗಳನ್ನು ಹೊಂದಿದ್ದರೂ ದುರಸ್ತು ಮಾಡಿಸಿಕೊಂಡಿಲ್ಲ. ಕೆಲವಾರು ದಾಖಲೆಗಳನ್ನು ಹೊಂದಿರುವವರಿಗಾದರೂ ಜಮೀನು ದುರಸ್ತು ಮಾಡಿಕೊಡುವುದಕ್ಕೆ ರಾಜ್ಯದಲ್ಲಿ ಪೋಡಿ ದುರಸ್ತು ಸರಳೀಕೃತ ಕಾರ್ಯದ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು.

ಸರ್ವೇ ಮಾಡುವ ವಿಚಾರದಲ್ಲಿ ೧ ವರ್ಷದಿಂದ ಸರ್ವೇ ಹಾಗೂ ಕಂದಾಯ ಇಲಾಖೆಯವರು ಚರ್ಚಿಸಿ ಐದು ದಾಖಲೆಗಳನ್ನು ಸಲ್ಲಿಸಬೇಕಾದ ಕಡೆ ಈಗ ಕೇವಲ ಮೂರು ದಾಖಲೆಗಳಿಗೆ ಇಳಿಸಲಾಗಿದೆ. ಎಲ್ಲವನ್ನೂ ಆನ್‌ಲೈನ್‌ನಲ್ಲಿ ದಾಖಲು ಮಾಡುತ್ತಿರುವುದರಿಂದ ಅರ್ಜಿಗಳ ಸಲ್ಲಿಕೆ, ಕಡತಗಳ ದಾಖಲೆ ಪ್ರತಿಯೊಂದನ್ನೂ ಸುಲಭವಾಗಿ ತೆಗೆದುಕೊಳ್ಳಬಹುದಾಗಿದೆ ಎಂದರು.

ದರಖಾಸ್ತು ಜಮೀನುಗಳ ದುರಸ್ತು ಮಾಡಬೇಕಾದರೆ ಕೆಲವೊಂದು ದಾಖಲೆಗಳು ಇರಲೇಬೇಕು. ಬಗರ್‌ಹುಕುಂಗೆ ಅರ್ಜಿ ಹಾಕಿರುವ, ಸಾಗುವಳಿ ಚೀಟಿ ಹೊಂದಿರುವ ಹಾಗೂ ೧೫ ವರ್ಷಗಳಿಂದ ಸಾಗುವಳಿ ಮಾಡುತ್ತಿರುವುದು ಕಂಡುಬಂದರೆ ಅಂತಹವರ ಜಮೀನನ್ನು ದುರಸ್ತು ಮಾಡಿಕೊಡುವುದಕ್ಕೆ ತೊಂದರೆ ಇಲ್ಲ. ಯಾವೊಂದು ದಾಖಲೆಯೇ ಇಲ್ಲದೆ ದುರಸ್ತು ಮಾಡಿಕೊಡಿ ಎಂದರೆ ಆಗುವುದಿಲ್ಲ ಎಂದು ನೇರವಾಗಿ ತಿಳಿಸಿದರು.

ರೈತರು ಕೇಳದಿದ್ದರೂ ದರಖಾಸ್ತು ಜಮೀನನ್ನು ದುರಸ್ತು ಮಾಡಿಕೊಡುವುದು ಸರ್ಕಾರದ ಕರ್ತವ್ಯ. ಹಿಂದೆ ಜವಾಬ್ದಾರಿ ಸ್ಥಾನದಲ್ಲಿದ್ದವರು ಅದನ್ನು ಅಧಿಕಾರಿಗಳಿಗೆ ಹೇಳಿ ಮಾಡಿಸಬೇಕಿತ್ತು. ಆಗ ಯಾರೂ ಮಾಡಿಸಲಿಲ್ಲ. ಅದಕ್ಕೆ ಈ ಪ್ರಜಾಪ್ರಭುತ್ವದಲ್ಲಿ ಮಂತ್ರಿ ಮಂಡಲವೇ ಜವಾಬ್ದಾರಿ. ಕೆಲಸ ಮಾಡಿಸುವವರು ಸರಿಯಾಗಿದ್ದರೆ ಅಧಿಕಾರಿಗಳೂ ಕೆಲಸ ಮಾಡುತ್ತಾರೆ. ಕೇವಲ ಸರ್ಕಾರದ ಕೆಲಸ ದೇವರ ಕೆಲಸ, ಕಾಯಕವೇ ಕೈಲಾಸ ಎಂದು ಬಾಯಲ್ಲಿ ಹೇಳಿದರೆ ಸಾಲದು. ಜನರ ಕೆಲಸ ಮಾಡುವುದೇ ಸರ್ಕಾರದ ಕೆಲಸವೆಂದು ತಿಳಿದು ಪ್ರತಿಯೊಬ್ಬರೂ ಕೆಲಸ ಮಾಡಬೇಕು ಎಂದರು.

ದರಖಾಸ್ತು ಜಮೀನುಗಳ ದುರಸ್ತು ಮಾಡುವುದಕ್ಕೆ ಕಳೆದೊಂದು ವರ್ಷದಿಂದ ಸರ್ವೆ ಇಲಾಖೆ, ಕಂದಾಯ ಇಲಾಖೆಯವರೊಂದಿಗೆ ಚರ್ಚಿಸಿ ಸರಳೀಕರಣಗೊಳಿಸಿ ಪೋಡಿ ದುರಸ್ತು ಅಭಿಯಾನ ಆರಂಭಿಸಲಾಗಿದೆ. ಇದರಲ್ಲಿ ಆಕಾರ್‌ ಬಂದ್, ಟಿಪ್ಪಣಿ, ಸ್ಕೆಚ್ ಮತ್ತು ಆರ್‌ಟಿಸಿ ಸಹಿತ ಫಲಾನುಭವಿಗಳಿಗೆ ನೀಡಲಾಗುತ್ತಿದೆ ಎಂದು ವಿವರಿಸಿದರು.

ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಹಿಂದೆ ದರಖಾಸ್ತು ಜಮೀನುಗಳ ದುರಸ್ತು ಮಾಡಿಸಲು ಶಿಫಾರಸು, ಒತ್ತಡ, ಪ್ರಭಾವ ಬಳಸಬೇಕಿತ್ತು. ಈಗ ಅವೆಲ್ಲಕ್ಕೂ ಅಂತ್ಯವಾಡಲಾಗಿದೆ. ಪೋಡಿ ದುರಸ್ತನ್ನು ಸರಳೀಕರಣಗೊಳಿಸಿ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಕೆಲಸ ಮಾಡಿದ್ದೇವೆ. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಮನೆ ಮನೆಗೆ ತೆರಳಿ ಪೋಡಿ ದುರಸ್ತು ಮಾಡಿಕೊಡಲಾಗುತ್ತಿದೆ ಎಂದರು.

ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅನೇಕ ಬದಲಾವಣೆ ತರುವ ಮೂಲಕ ಕಂದಾಯ ಇಲಾಖೆಯಲ್ಲಿ ಸುಧಾರಣೆ ತರಲಾಗಿದೆ. ಹಲವಾರು ವರ್ಷಗಳಿಂದ ಉಪವಿಭಾಗಾಧಿಕಾರಿ ಮತ್ತು ತಹಸೀಲ್ದಾರ್ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಒಟ್ಟು ೧೫,೦೦೦ ಪ್ರಕರಣಗಳಲ್ಲಿ ೧೩,೦೦೦ ಪ್ರಕರಣ ಇತ್ಯರ್ಥಗೊಳಿಸಲಾಗಿದೆ. ಕೇವಲ ೧ ವಾರದಲ್ಲಿಯೇ ನಾಗಮಂಗಲದಲ್ಲಿ ೪೧೪ ಪ್ರಕರಣಗಳ ಸರ್ವೇ ಮಾಡಲಾಗಿದೆ. ಜೊತೆಗೆ ೧೯೦ ಪೌತಿ ಖಾತೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿರುವ ಕಂದಾಯ ಇಲಾಖೆಯ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲಾಗುತ್ತಿದೆ. ೧೯೬೦- ೭೦ರಲ್ಲಿ ಮಂಜೂರಾಗಿರುವ ಕಂದಾಯ ಇಲಾಖೆಯ ದರಖಾಸ್ತು ಪೋಡಿ ದುರಸ್ಥಿ ಸರಳೀಕೃತ ಕಾರ್ಯದ ಹೊಸ ಪಹಣೆ ಮತ್ತು ಪೋಡಿ ದಾಖಲೆಗೆ ಸಂಬಂಧಪಟ್ಟಂತೆ ಶಾಶ್ವತ ದಾಖಲೆಗಳನ್ನು ನೀಡಲಾಗುತ್ತಿದೆ ಎಂದರು.

ನಮ್ಮ ಸರ್ಕಾರವು ಜನರ ಮನೆಯ ಬಾಗಿಲಿಗೆ ಅನೇಕ ಯೋಜನೆ ನೀಡುವ ಮೂಲಕ ಅನುಕೂಲ ಮಾಡುತ್ತಿದೆ. ಸರ್ಕಾರದ ಪಂಚ ಗ್ಯಾರಂಟಿಗಳಾದ ಶಕ್ತಿ ಯೋಜನೆ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಯುವ ನಿಧಿ, ಅನ್ನ ಭಾಗ್ಯ ಯೋಜನೆಗಳಿಂದ ಸಾರ್ವಜನಿಕರು ಸದುಪಯೋಗ ಪಡೆಯುತ್ತಿದ್ದಾರೆ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಕೃಷಿ ಇಲಾಖೆಯಿಂದ ಡೀಸಲ್ ಎಂಜಿನ್, ಪಿವಿಸಿ ಪೈಪ್, ರಾಗಿ ಫ್ಲೋರ್‌ಮಿಲ್ ಸೇರಿದಂತೆ ೩೮೦ ಫಲಾನುಭವಿಗಳಿಗೆ ೧ಕೋಟಿ ರು. ವೆಚ್ಚದ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತ ಜೆ.ಮಂಜುನಾಥ್, ಮೈಸೂರು ವಿಭಾಗ ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕ ಈ. ಪ್ರಕಾಶ್, ಜಿಲ್ಲಾಧಿಕಾರಿ ಡಾ ಕುಮಾರ, ಉಪವಿಭಾಗಾಧಿಕಾರಿ ಶಿವಮೂರ್ತಿ, ಶ್ರೀನಿವಾಸ್, ತಹಸೀಲ್ದಾರ್ ಆದರ್ಶ ಇತರರಿದ್ದರು.