ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು
ಕಲ್ಪತರುನಾಡಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸಾಹೇ (ಶ್ರೀ ಸಿದ್ಧಾರ್ಥ ಆಕಾಡೆಮಿ ಆಫ್ ಹೈಯರ್ ಎಜುಕೇಷನ್) ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ ವಿಜೃಂಭಣೆಯಿಂದ ನಡೆಯಿತು.ನಗರದ ಅಗಲಕೋಟೆಯಲ್ಲಿರುವ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಹೆಚ್.ಎಂ. ಗಂಗಾಧರಯ್ಯ ಸ್ಮಾರಕ ಭವನದಲ್ಲಿಂದು ನಡೆದ ಸಾಹೇ ವಿಶ್ವವಿದ್ಯಾಲಯದ 13 ನೇ ಘಟಿಕೋತ್ಸವದಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ, ಪಿಎಚ್.ಡಿ ಸೇರಿದಂತೆ ಒಟ್ಟು 876 ವಿದ್ಯಾರ್ಥಿಗಳಿಗೆ ವಿವಿಯ ಕುಲಾಧಿಪತಿಗಳಾದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪದವಿ ಪ್ರದಾನ ಮಾಡಿದರು.
ಹಾಗೆಯೇ ಇಂಜಿನಿಯರಿಂಗ್‌ನಲ್ಲಿ 6, ವೈದ್ಯಕೀಯದಲ್ಲಿ 1, ದಂತ ವೈದ್ಯಕೀಯ 2, ಎಂಸಿಎ 1 ಸೇರಿ ಒಟ್ಟು 10 ಮಂದಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಾಯಿತು.ಮಾರ್ಗರೆಟ್ ಆಳ್ವಗೆ ಗೌಡಾ ಪ್ರದಾನ
13ನೇ ಸಾಹೇ ವಿವಿ ಘಟಿಕೋತ್ಸವದ ಕೇಂದ್ರ ಬಿಂದುವಾಗಿದ್ದ ಮಾಜಿ ಕೇಂದ್ರ ಸಚಿವರು ಹಾಗೂ ನಿಕಟಪೂರ್ವ ರಾಜ್ಯಪಾಲರು ಆದ ಮಾರ್ಗರೆಟ್ ಆಳ್ವ ಅವರಿಗೆ ವಿವಿಯ ಕುಲಾಧಿಪತಿಗಳಾದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದರು.ಹಾಗೆಯೇ ಡಾಕ್ಟರೇಟ್ ಪದವಿ-24, ಇಂಜಿನಿಯರಿಂಗ್-601, ವೈದ್ಯಕೀಯ-147, ದಂತ ವೈದ್ಯಕೀಯ-49 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಹಾಗೂ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಇಂಜಿನಿಯರಿಂಗ್-1, ವೈದ್ಯಕೀಯ-1 ಹಾಗೂ ದಂತ ವೈದ್ಯಕೀಯ-1ವಿದ್ಯಾರ್ಥಿಗೆ ಪದವಿ ಪ್ರದಾನ ಮಾಡಿ ಗೃಹ ಸಚಿವರು ಪ್ರೋತ್ಸಾಹಿಸಿದರು.
ನವದೆಹಲಿಯ ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್‌ನ ಅಧ್ಯಕ್ಷ ಪ್ರೊ. ಟಿ.ಜಿ. ಸೀತಾರಾಮ್ ಅವರು ಘಟಿಕೋತ್ಸವ ಭಾಷಣ ಮಾಡಿ, ಪ್ರಸ್ತುತ ಆಧುನಿಕ ಜಗತ್ತಿನಲ್ಲಿ ವೈದ್ಯಕೀಯ, ಇಂಜಿನಿಯರಿಂಗ್, ಎಂಸಿಎ ಸೇರಿದಂತೆ ವಿವಿಧ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿಯೂ ಪರಿಣಿತರಾಗಿರುವುದು ಅವಶ್ಯವಾಗಿದೆ ಎಂದರು.ಇದೇ ಸಂದರ್ಭದಲ್ಲಿ ಕುಲಾಧಿಪತಿಗಳಾದ ಡಾ. ಜಿ. ಪರಮೇಶ್ವರ್ ಅವರು ಪದವಿ ಪ್ರಮಾಣ ಗೌಪ್ಯತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು.
ಖುಷಿಪಟ್ಟ ವಿದ್ಯಾರ್ಥಿಗಳುಸಾಹೇ ವಿವಿಯ 13ನೇ ಘಟಿಕೋತ್ಸದಲ್ಲಿ ಪದವಿ ಪ್ರಮಾಣ ಪತ್ರ ಪಡೆಯಲು ಆಗಮಿಸಿದ್ದ ವೈದ್ಯಕೀಯ, ಇಂಜಿನಿಯರಿಂಗ್, ಎಂಸಿಎ ಸೇರಿದಂತೆ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಒಬ್ಬರಿಗೊಬ್ಬರು ಶುಭಾಶಯ ವಿನಿಮಯ ಮಾಡಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ಘಟಿಕೋತ್ಸವದ ಧಿರಿಸಿನಲ್ಲಿ ಪದವಿ ಪ್ರಮಾಣ ಪತ್ರ ಸ್ವೀಕರಿಸಲು ಬಂದಿದ್ದ ವಿದ್ಯಾರ್ಥಿಗಳು ತಮ್ಮ ಸ್ನೇಹಿತರೊಂದಿಗೆ ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯಗಳು ಕಂಡು ಬಂದವು.ಸಮಾರಂಭದಲ್ಲಿ ಸಂಸ್ಥೆಯ ಕನ್ನಿಕಾ ಪರಮೇಶ್ವರ್, ಸಾಹೇ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಕೆ.ಬಿ.ಲಿಂಗೇಗೌಡ, ಕುಲಸಚಿವರಾದ ಡಾ.ಎಂ.ಝೆಡ್. ಕುರಿಯನ್, ಕುಲಾಧಿಪತಿಗಳ ಸಲಹೆಗಾರರಾದ ಡಾ.ವಿವೇಕ್ ವೀರಯ್ಯ, ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಎಸ್. ರವಿಪ್ರಕಾಶ್, ಸಾಹೇ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ನಿಯಂತ್ರಕ ಡಾ. ಗುರುಶಂಕರ್, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಸಾಣಿಕೊಪ್ಪ, ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಪ್ರವೀಣ್ ಕುಡುವ, ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಪ್ರಭಾಕರ್ ಜಿ.ಎನ್., ಉಪ ಕುಲಸಚಿವ ಡಾ. ಸುದೀಪ್ ಕುಮಾರ್ ಹಾಗೂ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.