ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲೆಯು ಕಲೆಗಳ ತವರೂರಾಗಿದ್ದು ಎಲ್ಲಾ ಕಲಾವಿದರ ಹೆಸರು ಅಜರಾಮರವಾಗಿ ಉಳಿಯಲು ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಪ್ರಮುಖ ಕಲಾವಿದರ ಹೆಸರಿಡಬೇಕು ಎಂದು ಶ್ರೀಗಂಧದ ಕನ್ನಡ ಯುವ ವೇದಿಕೆ ಅಧ್ಯಕ್ಷ ರವಿಚಂದ್ರಪ್ರಸಾದ್ ಕಹಳೆ ಜಿಲ್ಲಾಡಳಿತವನ್ನು ಒತ್ತಾಯಿಸಿದರು.ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ 50 ದಿನಗಳವರೆಗೆ ಅಯೋಜಿಸಿರುವ ಕನ್ನಡ ರಾಜ್ಯೋತ್ಸವದ 40ನೇ ದಿನದ ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರರಂಗ ನಿರ್ದೇಶಕ ಹ.ಸು.ರಾಜಶೇಖರ, ಕೆಸ್ತೂರು ಬಸವರಾಜು, ಸುಂದರಕೃಷ್ಣ ಅರಸ್, ನಾದೆ ನರಸಿಂಹಮೂರ್ತಿ ಕುರಿತು ಮಾತನಾಡಿ, ಜಿಲ್ಲೆಯ ಎಲ್ಲ ಕಲಾವಿದರು ತಮ್ಮದೇ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ್ದಾರೆ. ಇವರು ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಗಳಾಗಿದ್ದರು. ಮುಂದಿನ ಪೀಳಿಗೆಗೆ ಇವರ ಪರಿಚಯ ಆಗಬೇಕು ಎಂದರು.
ಹ.ಸು.ರಾಜಶೇಖರ ನಿರ್ದೇಶನದ ಕರ್ಪ್ಯೂ ಜಿಲ್ಲೆಯ ಸೊಗಡಿನ ಚಿತ್ರವಾಗಿದ್ದು, ರಾಷ್ಟ್ರ ಪ್ರಶಸ್ತಿ ದೊರೆತಿದೆ. ಕೆಸ್ತೂರು ಬಸವರಾಜು ಅವರ ನಿರ್ದೇಶನ ಸಂಘರ್ಷ ಚಿತ್ರ, ಕರಿನಾಗ, ಸಮಾಜಕ್ಕೆ ಸವಾಲು, ಇತರೆ ಚಲನಚಿತ್ರಗಳು ಕೂಡ ಮಹಿಳಾ ಪ್ರಧಾನ ಚಿತ್ರಗಳಾಗಿದ್ದು, ಬಾಲಕ ಅಂಬೇಡ್ಕರ್ ಚಿತ್ರವು ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದೆ. ಉತ್ತುವಳ್ಳಿ ಸುಂದರ್ ಕೃಷ್ಣ ಅರಸ್ ಅವರ ನಿರ್ದೇಶನದ ಸೂಪರ್ ನೋವಾ 2020 ಚಿತ್ರವು ಕೂಡ ಹೆಸರು ಪಡೆದು, ನಾದೆ ವಿರಚಿತ ರಾಷ್ಟ್ರೀಯ ಮಟ್ಟದ ನಾಟಕವಾದ ಪೊಲೀಸನ ಮಗಳು ನಾಟಕವು ಸಾವಿರಾರು ಪ್ರದರ್ಶನವಾಗಿದೆ. ಹೆಸರಾಂತ ನಾಟಕ ಕಂಪನಿ ಕೆಬಿಆರ್ ಗ್ರಾಮ ಕಂಪನಿಯು ರಾಜ್ಯಾದ್ಯಂತ ಹೆಸರುವಾಸಿಯಾಗಿದೆ. ಜಿಲ್ಲೆಯ ವರನಟ ಡಾ.ರಾಜ್ ಕುಮಾರ್ ಅವರಿಗೆ ಆನೆಯ ಮೆರವಣಿಗೆ ಮಾಡಿದಂತೆ ಉತ್ತರ ಕರ್ನಾಟಕದಲ್ಲಿ ನಾದೆ ನರಸಿಂಹಮೂರ್ತಿ ಅವರಿಗೆ ಆನೆ ಮೇಲೆ ಮೆರವಣಿಗೆ ಮಾಡಿದ್ದು ಹೆಗ್ಗಳಿಕೆಯೇ ಸರಿ. ಇಂಥ ಕಲಾವಿದರು ಮುಂದಿನ ಪೀಳಿಗೆಗೆ ಉಳಿಯಲು ಜಿಲ್ಲಾಡಳಿತ ನಗರದ ಪ್ರಮುಖ ರಸ್ತೆ, ವೃತ್ತಗಳಿಗೆ ಇವರ ಹೆಸರಿಡಬೇಕು ಎಂದು ಆಗ್ರಹಿಸಿದರು.ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ, ಅಖಿಲ ಕರ್ನಾಟಕ ಕನ್ನಡ ಮಹಾಸಭಾ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿದರು. ಕಾರ್ಯಕ್ರಮದಲ್ಲಿ ಚಾ.ವೆಂ.ರಾಜ್ ಗೋಪಾಲ್, ಪಣ್ಯದಹುಂಡಿ ರಾಜು, ಶಿವಲಿಂಗಮೂರ್ತಿ, ಬಸವರಾಜು ನಾಯಕ, ಡಾ.ಪರಮೇಶ್ವರಪ್ಪ, ಸದಾಶಿವ ಮೂರ್ತಿ , ಪದ್ಮಪುರುಷೋತ್ತಮ್, ಚಾ.ಸಿ.ಸಿದ್ದರಾಜು ಇತರರು ಹಾಜರಿದ್ದರು.