ಸಾರಾಂಶ
ಕುಷ್ಟಗಿ:
ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕನಿಷ್ಠ 33 ಅಂಕ ಪಡೆದಿರಬೇಕೆಂಬ ನೂತನ ಕ್ರಮ ರಾಜ್ಯದ ಪ್ರಸ್ತುತ ಶೈಕ್ಷಣಿಕ ಪರಿಸ್ಥಿತಿಯಲ್ಲಿ ಸಮಂಜಸ ಅಲ್ಲ ಎಂದು ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿ ಅಭಿಪ್ರಾಯಪಟ್ಟರು.ಪಟ್ಟಣದ ಎಸ್‌ವಿಸಿ ಶಿಕ್ಷಣ ಸಂಸ್ಥೆ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಎರಡು ದಿನಗಳ ಉಚಿತ ಪರೀಕ್ಷಾ ಯಶಸ್ಸಿನ ಸೂತ್ರದ ಕಮ್ಮಟ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಪರಿಸ್ಥಿತಿಯಲ್ಲಿ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಕಲಿಕಾ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ. ನೂತನ ಕ್ರಮದಿಂದ ಕೇವಲ 33 ಅಂಕ ಪಡೆದರೂ ವಿದ್ಯಾರ್ಥಿಗಳು ಉತ್ತೀರ್ಣರಾಗಬಹುದು. ಕಲಿಕಾ ಪ್ರಕ್ರಿಯೆ ಸರಿಯಾಗಿದ್ದಾಗ ಇಂತಹ ಕ್ರಮ ಫಲ ನೀಡಬಲ್ಲದು ಎಂದರು. ಕಲಿಕಾ ಪ್ರಕ್ರಿಯೆ ಆಗದೆ ವಿದ್ಯಾರ್ಥಿಗಳು ಉತ್ತೀರ್ಣವಾಗುವುದು ಅವರ ಭವಿಷ್ಯಕ್ಕೆ ಮಾರಕ. ಹೀಗಾಗಿ ಇಂತಹ ಕ್ರಮಗಳಿಂದ ಫಲಿತಾಂಶ ಹೆಚ್ಚಳ ಮಾಡುವುದರಲ್ಲಿ ಅರ್ಥವಿಲ್ಲ. ಮಾಜಿ ಶಿಕ್ಷಣ ಸಚಿವರು, ಶಿಕ್ಷಣ ತಜ್ಞರು ಹಾಗೂ ಶಿಕ್ಷಕ ಸಂಘದವರು ನೂತನ ಕ್ರಮ ವಿರೋಧಿಸಿರುವುದು ಗಮನಾರ್ಹ ಸಂಗತಿ ಎಂದು ಹೇಳಿದರು.ರಾಜ್ಯ ಪಠ್ಯಕ್ರಮದ ಪರೀಕ್ಷಾ ಪದ್ಧತಿಯನ್ನು ಸಿಬಿಎಸ್ಇ ಪಠ್ಯಕ್ರಮದ ಪರೀಕ್ಷಾ ಮಾದರಿಯಲ್ಲಿ ಬದಲಾಯಿಸಲಾಗಿದೆ. ಸಿಬಿಎಸ್ಇ ಪಠ್ಯಕ್ರಮ ಅತ್ಯಂತ ಕ್ಲಿಷ್ಟಕರವಾಗಿದೆ. ಆದರೆ, ಉತ್ತೀರ್ಣರಾಗಲು ಅತ್ಯಂತ ಕಡಿಮೆ ಅಂಕ ನಿಗದಿ ಮಾಡಲಾಗಿದೆ. ಪಠ್ಯ ಮತ್ತು ಪರೀಕ್ಷಾ ಪದ್ಧತಿಯ ನಡುವಿನ ಅತಿ ದೊಡ್ಡ ಕಂದಕ ಇದರಿಂದ ಸೃಷ್ಟಿಯಾಗಿ ಮಕ್ಕಳ ಕಲಿಕೆಯ ಮೇಲೆ ದುಷ್ಪರಿಣಾಮ ಬೀರಿದೆ. ಇದೇ ಮಾದರಿಯನ್ನು ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವುದು ಸಮಂಜಸವಲ್ಲ ಎಂದರು.
ಕಳೆದ ಹಲವಾರು ವರ್ಷಗಳಲ್ಲಿ ಪುಸ್ತಕಗಳ ಗಾತ್ರ ವಿಸ್ತಾರವಾಗಿದೆ. ಕಲಿಕೆಗೆ ಬೇಕಾದ ಸಮಯ ಕಡಿಮೆಯಾಗಿದೆ. ಇದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮೇಲೆ ಅನಗತ್ಯ ಹೊರ ಸೃಷ್ಟಿಯಾಗಿ ಜ್ಞಾನ ಪ್ರಸರಣಕ್ಕೆ ದೊಡ್ಡ ಹಿನ್ನಡೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.ಒಂದು ವರದಿಯ ಪ್ರಕಾರ ಈ ಹಿಂದೆ ಒಬ್ಬ ಶಿಕ್ಷಕನಿಗೆ ಕಲಿಸಲು ಸಿಗುತ್ತಿದ್ದ ಸಮಯ 6 ಗಂಟೆ 12 ನಿಮಿಷ. ಅನೇಕ ಯೋಜನೆಗಳ ಒತ್ತಡದ ಪರಿಣಾಮವಾಗಿ ಈಗ ಅವರಿಗೆ ಕಲಿಕೆಗೆ ಸಿಗುತ್ತಿರುವ ಸಮಯ 2 ಗಂಟೆ 24 ನಿಮಿಷ. ಈ ಸಮಯ ಕೆಲ ವರ್ಷಗಳಿಂದ ಇನ್ನೂ ಕಡಿಮೆಯಾಗಿದೆ. ಈ ಅವಧಿಯಲ್ಲಿ ಪಠ್ಯಕ್ರಮದ ಹೊರೆ ಹೆಚ್ಚಿಸಲಾಗಿದೆ. ವ್ಯವಸ್ಥೆಯು ಶಿಕ್ಷಕರಿಗೆ ಕಲಿಕೆಗಾಗಿ ಹೆಚ್ಚಿನ ಸಮಯ ಸಿಗುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಅಂಕಪಟ್ಟಿಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ತೋರಿಸುತ್ತಾರೆ. ಆದರೆ, ಜ್ಞಾನ ಗಳಿಕೆಯಲ್ಲಿ ಹಿಂದುಳಿಯುತ್ತಾರೆ ಎಂದು ಎಚ್ಚರಿಸಿದರು.ಶಿಕ್ಷಣ ನೀಡುವ ಕ್ರಮ ಜ್ಞಾನಪ್ರಸರಣಕ್ಕೆ ಪೂರಕವಾಗಿರಬೇಕು. ಪಡೆದ ಅಂಕಗಳು ಜ್ಞಾನಾರ್ಜನೆಯ ಮಾನದಂಡವಾಗುತ್ತಿರುವುದು ವ್ಯವಸ್ಥೆಯ ಅಣಕ ಎಂದ ಅವರು, ಕಮ್ಮಟದ ಅಂಗವಾಗಿ ನಡೆದ ಪೋಷಕರ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತು ಉತ್ತರಿಸಿದರು.ಎಸ್‌ವಿಸಿ ಸಂಸ್ಥೆಯ ಸಿಇಒ ಡಾ. ಜಗದೀಶ್ ಅಂಗಡಿ, ನಿವೃತ್ತ ಉಪನ್ಯಾಸಕರಾದ ಬಸವರಾಜ ಸವಡಿ, ರಾಜ್ಯ ಆಂಗ್ಲ ಭಾಷಾ ಸಂಪನ್ಮೂಲ ಸಿ.ವಿ. ಪಾಟೀಲ್, ಎಸ್‌ವಿಸಿ ಸಂಸ್ಥೆಗಳ ಪ್ರಾಂಶುಪಾಲರು ಹಾಜರಿದ್ದರು.