ರಾಜ್ಯದಲ್ಲಿ ಮಹಿಳೆಯರೇ ಇಲ್ಲದ ಸಚಿವ ಸಂಪುಟವನ್ನು ರಚಿಸಿರುವುದು ಸರ್ಕಾರದ ಮಹಿಳಾ ವಿರೋಧಿ ಮನೋಭಾವ

ಕನ್ನಡಪ್ರಭ ವಾರ್ತೆ ಮೈಸೂರುಜನಗಣತಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆ ಹೆಸರಿನಲ್ಲಿ ಮಹಿಳಾ ಮೀಸಲಾತಿಯನ್ನು ವಂಚಿಸುವ ಕ್ರಮ ನಿಲ್ಲಿಸಿ, ಶಾಸನ ಸಭೆಗಳಲ್ಲಿ ಯಾವುದೇ ಷರತ್ತುಗಳಿಲ್ಲದೆ ಶೇ.33 ರಷ್ಟು ಮಹಿಳಾ ಮೀಸಲಾತಿ ಜಾರಿಗೊಳಿಸಲು ಆಗ್ರಹಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯವರು ನಗರದ ಗಾಂಧಿ ಚೌಕದಲ್ಲಿ ಶನಿವಾರ ಪ್ರತಿಭಟಿಸಿದರು.ರಾಜ್ಯದಲ್ಲಿ ಮಹಿಳೆಯರೇ ಇಲ್ಲದ ಸಚಿವ ಸಂಪುಟವನ್ನು ರಚಿಸಿರುವುದು ಸರ್ಕಾರದ ಮಹಿಳಾ ವಿರೋಧಿ ಮನೋಭಾವವನ್ನು ಬಿಂಬಿಸುತ್ತದೆ. ಇದು ಸಂವಿಧಾನಬದ್ಧ ಸಮಾನತೆ ಮತ್ತು ಪ್ರಜಾಪ್ರಭುತ್ವದ ಮೂಲಭೂತ ಮೌಲ್ಯಗಳಿಗೆ ವಿರುದ್ಧವಾದ ಕ್ರಮವಾಗಿದೆ ಎಂದು ಅವರು ಕಿಡಿಕಾರಿದರು.ರಾಜ್ಯದ ಒಟ್ಟು ಮತದಾರರಲ್ಲಿ ಶೇ.52 ರಷ್ಟು ಮಹಿಳೆಯರಿದ್ದು, ಸರ್ಕಾರಗಳ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಕೃಷಿ, ಉದ್ಯೋಗ ಹಾಗೂ ಆಹಾರ ಭದ್ರತೆ ಸೇರಿದಂತೆ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಕೊಡುಗೆ ಅಪಾರವಾಗಿದೆ. ಹೀಗಿದ್ದರೂ, ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶ ನೀಡದಿರುವುದು ಅವರ ಸಾಮರ್ಥ್ಯವನ್ನು ಕಡೆಗಣಿಸಿ, ರಾಜಕೀಯ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಿಂದ ಉದ್ದೇಶಪೂರ್ವಕವಾಗಿ ಹೊರಗಿಡುವ ಧೋರಣೆಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 10 ಮಹಿಳಾ ಶಾಸಕಿಯರು ಆಯ್ಕೆಯಾಗಿದ್ದು, ಅವರಲ್ಲಿ 4 ಮಂದಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಕಾಯ್ದೆಗೆ ಬೆಂಬಲ ವ್ಯಕ್ತಪಡಿಸುವ ಕಾಂಗ್ರೆಸ್ ಹೈಕಮಾಂಡ್, ತನ್ನದೇ ಆಡಳಿತವಿರುವ ಕರ್ನಾಟಕದಲ್ಲಿ ಮಹಿಳೆಯರಿಗೆ ಸಂಪುಟ ಸ್ಥಾನ ನಿರಾಕರಿಸಿರುವುದು ತೀವ್ರ ವಿರೋಧಾಭಾಸ ಹಾಗೂ ದ್ವಂದ್ವ ನೀತಿಯಾಗಿದೆ. ಇದು ಪುರುಷ ಪ್ರಧಾನ ರಾಜಕೀಯ ಮನಸ್ಥಿತಿ ಇನ್ನೂ ಮುಂದುವರಿದಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಅವರು ಕಿಡಿಕಾರಿದರು.ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರು ಯಶಸ್ವಿಯಾಗಿ ಆಡಳಿತ ನಡೆಸಿರುವುದನ್ನು ದೇಶ ಕಂಡಿದೆ. ಮಹಿಳೆಯರು ಕೇವಲ ಮತದಾರರಷ್ಟೇ ಅಲ್ಲ, ಸಮರ್ಥ ಜನಪ್ರತಿನಿಧಿಗಳು ಮತ್ತು ನೀತಿ ನಿರೂಪಕರೂ ಆಗಿದ್ದಾರೆ. ಹೀಗಾಗಿ, ಕರ್ನಾಟಕ ಸರ್ಕಾರ ಹಾಗೂ ಕಾಂಗ್ರೆಸ್ ಹೈಕಮಾಂಡ್ ಕೂಡಲೇ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಿ, ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸೂಕ್ತ ಮತ್ತು ನ್ಯಾಯಯುತ ಪ್ರಾತಿನಿಧ್ಯ ನೀಡಬೇಕು ಎಂದು ಅವರು ಒತ್ತಾಯಿಸಿದರು.ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ, ರಾಜ್ಯ ಸಹ ಕಾರ್ಯದರ್ಶಿ ಸುಶೀಲಾ, ಜಿಲ್ಲಾ ಸಂಚಾಲಕಿ ಶಕುಂತಲಾ, ಮುಖಂಡರಾದ ಖೈರುನ್ನಿಸಾ, ರೂಪಾ, ಮಮತಾ, ಲಕ್ಷ್ಮೀ, ಮಾನಸ, ಚಂದ್ರಮ್ಮ, ಮಹಾದೇವಮ್ಮ ಮೊದಲಾದವರು ಇದ್ದರು.----ಬಾಕ್ಸ್... ಷರತ್ತುಗಳಿಲ್ಲದೆ ಮಹಿಳಾ ಮೀಸಲು ಜಾರಿಗೊಳಿಸಿಈ ವೇಳೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ದೇವಿ ಮಾತನಾಡಿ, ಜನಗಣತಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆ ಹೆಸರಿನಲ್ಲಿ ಮಹಿಳೆಯರಿಗೆ ಸಿಗಬೇಕಾದ ಶೇ.33 ರಷ್ಟು ಮೀಸಲಾತಿಯನ್ನು ವಂಚಿಸಲು ಯತ್ನಿಸುತ್ತಿರುವ ಕ್ರಮವನ್ನು ಕೈಬಿಟ್ಟು ಶೀಘ್ರವಾಗಿ ಈ ಅಧಿವೇಶನದಲ್ಲೇ ಮಹಿಳಾ ಮೀಸಲಾತಿ ಜಾರಿಗೊಳಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.ಪ್ರಸ್ತುತ ಲೋಕಸಭೆಯಲ್ಲಿ 543 ಸದಸ್ಯರಲ್ಲಿ ಕೇವಲ 74 ಮಹಿಳೆಯರು (ಶೇ.14 ಕಡಿಮೆ) ಮಾತ್ರ ಇದ್ದಾರೆ. ರಾಜ್ಯಸಭೆಯಲ್ಲಿ 245 ಸದಸ್ಯರಲ್ಲಿ 42 ಮಹಿಳೆಯರು (ಸುಮಾರು ಶೇ.17) ಮಾತ್ರ ಸದಸ್ಯರಾಗಿದ್ದಾರೆ. ಕರ್ನಾಟಕ ವಿಧಾನಸಭೆಯ ಪರಿಸ್ಥಿತಿ ಇನ್ನೂ ಹೆಚ್ಚು ಕಳವಳಕಾರಿಯಾಗಿದೆ. 224 ಸದಸ್ಯರಲ್ಲಿ ಕೇವಲ 10 ಮಹಿಳೆಯರು (ಶೇ.4.46) ಮಾತ್ರ ಸದಸ್ಯರಾಗಿದ್ದಾರೆ. ಹೀಗಾಗಿ, ಮಹಿಳಾ ಮೀಸಲಾತಿಯನ್ನು ತಕ್ಷಣ ಮತ್ತು ಷರತ್ತುಗಳಿಲ್ಲದೆ ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.