ಪಟ್ಟಣದ ಗಾಂಧಿನಗರದಲ್ಲಿರುವ ಸುರೇಶ ಕೊರವರ ಅವರ ಬಾಡಿಗೆ ಮನೆಯಲ್ಲಿ ಇಬ್ಬರೂ ಸೇರಿಕೊಂಡು ಕಾಡುಹಂದಿ ಮಾಂಸವನ್ನು ಪಾಲು ಮಾಡಿ ಅಡುಗೆ ತಯಾರಿಸುತ್ತಿದ್ದರು ಎನ್ನಲಾದ ಬಗ್ಗೆ ಖಚಿತ ಮಾಹಿತಿ ಪಡೆದ ಮುಂಡಗೋಡ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ದಾಳಿ ನಡೆಸಿದ್ದಾರೆ.

ಮುಂಡಗೋಡ: ಮನೆಯೊಂದರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ಬೇಟೆಯಾಡಿ ದಾಸ್ತಾನು ಮಾಡಲಾದ ಸುಮಾರು ೩೫ ಕೆಜಿ ಕಾಡುಹಂದಿ ಮಾಂಸವನ್ನು ವಶಪಡಿಸಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ.

ಬೆಂಗಳೂರು ಹೆಸರುಘಟ್ಟ ನಿವಾಸಿ ಪ್ರಜ್ವಲ್ ಎಂಬಾತನೆ ಬಂಧಿತ ಆರೋಪಿ. ಮತ್ತೋರ್ವ ಆರೋಪಿ ಸುರೇಶ ತಿಮ್ಮಣ್ಣ ಕೊರವರ ಪರಾರಿಯಾಗಿದ್ದಾನೆ.

ಪಟ್ಟಣದ ಗಾಂಧಿನಗರದಲ್ಲಿರುವ ಸುರೇಶ ಕೊರವರ ಅವರ ಬಾಡಿಗೆ ಮನೆಯಲ್ಲಿ ಇಬ್ಬರೂ ಸೇರಿಕೊಂಡು ಕಾಡುಹಂದಿ ಮಾಂಸವನ್ನು ಪಾಲು ಮಾಡಿ ಅಡುಗೆ ತಯಾರಿಸುತ್ತಿದ್ದರು ಎನ್ನಲಾದ ಬಗ್ಗೆ ಖಚಿತ ಮಾಹಿತಿ ಪಡೆದ ಮುಂಡಗೋಡ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ದಾಳಿ ನಡೆಸಿದ್ದಾರೆ.

ಈ ವೇಳೆ ಅರಣ್ಯಾಧಿಕಾರಿಗಳನ್ನು ಕಂಡು ಓರ್ವ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಮತ್ತೋರ್ವನನ್ನು ವಶಕ್ಕೆ ಪಡೆಯಲಾಗಿದೆ. ಮನೆಯಲ್ಲಿದ್ದ ಸುಮಾರು ೩೫ ಕೆಜಿ ಕಾಡುಹಂದಿ ಮಾಂಸವನ್ನು ಜಪ್ತಿ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ೧೯೭೨ರ ಅಡಿಯಲ್ಲಿ ಅರಣ್ಯ ಮೊಕದ್ದಮೆ ದಾಖಲಿಸಲಾಗಿದ್ದು, ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ನ್ಯಾಯಾಲಯವು ಡಿ. ೪ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಪರಾರಿಯಾಗಿರುವ ಮತ್ತೊಬ್ಬ ಆರೋಪಿಯ ಪತ್ತೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಈರೇಶ ಕಬ್ಬಿನ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಅಪ್ಪಾರಾವ್ ಕಲಶೆಟ್ಟಿ, ಉಪವಲಯ ಅರಣ್ಯಾಧಿಕಾರಿಗಳಾದ ಅರ್ಜುನ ಮೊರಬ, ಸುನೀತಾ ಬಿ.ಎಂ., ಗಸ್ತು ಅರಣ್ಯ ಪಾಲಕ ಮುಸ್ತಾಕಅಲಿ ಒಂಟಿ, ಮುತ್ತುರಾಜ ಹಳ್ಳಿ, ಸಂತೋಷ ಜಲ್ಲೇರ, ರಾಘವೇಂದ್ರ ಅಮ್ಮಿನಬಾವಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ಲಕ್ಷಾಂತರ ರು. ನೀಡದೇ ವಂಚನೆ: ಆರೋಪ

ಯಲ್ಲಾಪುರ: ಹೋಂ ಇಂಡಸ್ಟ್ರೀ ಮೂಲಕ ಉಪ್ಪಿನಕಾಯಿ ಖರೀದಿಸಿದ ಉದ್ಯಮಿಯೊಬ್ಬ ಲಕ್ಷಾಂತರ ರು. ಹಣ ನೀಡದೇ‌ ವಂಚಿಸಿದ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಟ್ಟಣದಲ್ಲಿ ದಿವ್ಯಾ ಹೋಂ ಮತ್ತು ಹನಿ ಇಂಡಸ್ಟ್ರೀ ನಡೆಸುತ್ತಿರುವ ವನಿತಾ ರಾಮಚಂದ್ರ ಭಟ್ಟ ಅವರ ಬಳಿ, ಕಳೆದ ವರ್ಷ ನ. 21ರಂದು ಮೈಸೂರಿನ ಕಾಟನ್ ಬ್ರಿಜ್ ಪ್ರೈವೇಟ್ ಲಿಮಿಟೆಡ್ ಮಾಲೀಕ ವೇಣುಗೋಪಾಲ ಎಚ್.ಎನ್. ಅವರು ಉಪ್ಪಿನಕಾಯಿ ಖರೀದಿಸಿದ್ದರು.

ಒಟ್ಟು ₹1.83 ಲಕ್ಷ ಮೌಲ್ಯದ 14 ಬಗೆಯ ಉಪ್ಪಿನಕಾಯಿಯನ್ನು ತನ್ನ ಕಂಪನಿಯ ಹೆಸರಿನಲ್ಲಿ ಖರೀದಿ ಮಾಡಿದ್ದರು. ಆದರೆ ಅದರ ಹಣ ಪಾವತಿಸಿರಲಿಲ್ಲ. ಪದೇ ಪದೇ ಕೇಳಿದಾಗ ಕಳೆದ ಜೂನ್ ತಿಂಗಳಲ್ಲಿ ಎರಡು ಕಂತುಗಳ ಮೂಲಕ ₹15 ಸಾವಿರ ಪಾವತಿಸಿದ್ದರು.

ಉಳಿದ ₹1.68 ಲಕ್ಷ ನೀಡದೇ ವಂಚಿಸಿದ್ದು, ಈ ಬಗ್ಗೆ ಕೇಳಿದರೆ ತನಗಿರುವ ರಾಜಕೀಯ ಪ್ರಭಾವ ಬಳಸಿಕೊಂಡು, ನಿಮ್ಮ ವಿರುದ್ಧವೇ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆಂದು ವನಿತಾ ಭಟ್ಟ ದೂರಿದ್ದಾರೆ.