ವಿಂಜೋ ಆನ್‌ಲೈನ್‌ ಗೇಮಿಂಗ್‌ ಹೆಸರಿನಲ್ಲಿ ಸಾವಿರಾರು ಕೋಟಿ ರು. ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣದ ತನಿಖೆ ನಡೆಸಿದ್ದ ಜಾರಿ ನಿರ್ದೇಶನಾಲಯವು ಇದೀಗ ಆರೋಪಿಗಳ ವಿರುದ್ಧ ನಗರದ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದು, ₹3522 ಕೋಟಿ ಅಕ್ರಮ ಆದಾಯ ಗಳಿಸಿರುವ ಮಾಹಿತಿ ತನಿಖೆಯಲ್ಲಿ ಬಯಲಾಗಿದೆ.

 ಬೆಂಗಳೂರು : ವಿಂಜೋ ಆನ್‌ಲೈನ್‌ ಗೇಮಿಂಗ್‌ ಹೆಸರಿನಲ್ಲಿ ಸಾವಿರಾರು ಕೋಟಿ ರು. ಅಕ್ರಮ ಹಣ ವರ್ಗಾವಣೆ ಆರೋಪದ ಪ್ರಕರಣದ ತನಿಖೆ ನಡೆಸಿದ್ದ ಜಾರಿ ನಿರ್ದೇಶನಾಲಯವು (ಇ.ಡಿ.) ಇದೀಗ ಆರೋಪಿಗಳ ವಿರುದ್ಧ ನಗರದ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದು, ₹3522 ಕೋಟಿ ಅಕ್ರಮ ಆದಾಯ ಗಳಿಸಿರುವ ಮಾಹಿತಿ ತನಿಖೆಯಲ್ಲಿ ಬಯಲಾಗಿದೆ.

ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ (ಪಿಎಂಎಲ್‌ಎ) ಪ್ರಕರಣದ ಪ್ರಮುಖ ಆರೋಪಿಗಳಾದ ವಿಂಜೋ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಹಾಗೂ ಅದರ ನಿರ್ದೇರ್ಶಕರಾದ ಪವನ್ ನಂದಾ, ಸೌಮ್ಯ ಸಿಂಗ್‌ ರಾಥೋಡ್‌ ಮತ್ತು ವಿಂಜೋ ಕಂಪನಿಯ ಭಾರತ ಮತ್ತು ವಿದೇಶಿ ಅಂಗಸಂಸ್ಥೆಗಳಾದ ವಿಂಜೋ ಯುಎಸ್‌, ವಿಂಜೋ ಎಸ್‌ಜಿ ಪ್ರೈವೇಟ್‌ ಲಿಮಿಡ್‌, ಜೋ ಪ್ರೈವೇಟ್‌ ಲಿಮಿಟ್‌ ಕಂಪನಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

ವಿಂಜೋ ಆನ್‌ಲೈನ್‌ ಗೇಮಿಂಗ್‌ ವಂಚನೆ ಆರೋಪ ಸಂಬಂಧ ಬೆಂಗಳೂರಿನ ಸೈಬರ್‌ ಕ್ರೈಂ ಪೊಲೀಸ್‌ ಠಾಣೆ, ರಾಜಸ್ಥಾನ, ನವದೆಹಲಿ ಮತ್ತು ಗುರುಗ್ರಾಮ್‌ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಎಫ್‌ಐಆರ್‌ ಆಧಾರದಡಿ ಇ.ಡಿ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತ್ತು.

ಇದಕ್ಕೂ ಮುನ್ನ ಇ.ಡಿ.ಅಧಿಕಾರಿಗಳು ಕಳೆದ ನ.18 ಮತ್ತು ಡಿ.30ರಂದು ವಿಂಜೋ ಕಂಪನಿಯ ಕಚೇರಿ, ಕಂಪನಿಯ ನಿರ್ದೇಶಕರ ನಿವಾಸಗಳು, ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಶೋಧ ಕಾರ್ಯದ ವೇಳೆ ವಂಚನೆಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ಜಪ್ತಿ ಮಾಡಿದ್ದರು. ಬ್ಯಾಂಕ್ ಬ್ಯಾಲೆನ್ಸ್, ಪಾವತಿ ಗೇಟ್‌ವೇ ಬ್ಯಾಲೆನ್ಸ್‌ಗಳು, ಮ್ಯೂಚುವಲ್ ಫಂಡ್‌ಗಳು, ಬಾಂಡ್‌ಗಳು, ಸ್ಥಿರ ಠೇವಣಿಗಳು ಮತ್ತು ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ಗಳು ಸೇರಿದಂತೆ ಸುಮಾರು ₹690 ಕೋಟಿ ಮೌಲ್ಯದ ಚರಾಸ್ತಿಗಳನ್ನು ಫ್ರೀಜ್‌ ಮಾಡಿದ್ದರು.

ನಂಬಿಕೆ ಹುಟ್ಟಿಸಿ ಬಳಿಕ ವಂಚನೆ:

ವಿಂಜೊ ಕಂಪನಿಯು ತನ್ನ ಮೊಬೈಲ್ ಅಪ್ಲಿಕೇಶನ್ ಮೂಲಕ ರಿಯಲ್ ಮನಿ ಗೇಮ್ಸ್ (ಆರ್‌ಎಂಜಿ) ವ್ಯವಹಾರ ನಡೆಸುತ್ತಿತ್ತು. ಸುಮಾರು 25 ಕೋಟಿ ಬಳಕೆದಾರರನ್ನು ಹೊಂದಿದ್ದ ಕಂಪನಿಯು 100ಕ್ಕೂ ಹೆಚ್ಚು ಆಟಗಳನ್ನು ನೀಡುತ್ತಿತ್ತು. ಪ್ರಮುಖವಾಗಿ ಟೈರ್‌-3 ಮತ್ತು ಟೈರ್‌-4 ನಗರಗಳಿಂದ ಈ ಆರ್‌ಎಂಜಿ ಸೇವೆಗಳನ್ನು ನೀಡಲು ಕಂಪನಿಯು ಬಳಕೆದಾರರ ಬೆಟ್ಟಿಂಗ್ ಮೊತ್ತದ ನಿರ್ದಿಷ್ಟ ಶೇಕಡಾವಾರು ಮೊತ್ತವನ್ನು ಕಮಿಷನ್ ಆಗಿ ಪಡೆಯುತ್ತಿತ್ತು. ಈ ಆನ್‌ಲೈನ್‌ ಗೇಮ್ಸ್‌ಗಳು ಸುರಕ್ಷಿತ ಹಾಗೂ ಪಾರದರ್ಶಕವಾಗಿದೆ ಎಂದು ಬಳಕೆದಾರರನ್ನು ನಂಬಿಸಿತ್ತು.

ವ್ಯವಸ್ಥಿತವಾಗಿ ಸೋಲಿಸಿ ₹734 ಕೋಟಿ ನಷ್ಟ:

ಆರಂಭದಲ್ಲಿ ಬಳಕೆದಾರರಿಗೆ ಸಣ್ಣ ಬೋನಸ್‌ಗಳ ಆಮಿಷವೊಡ್ಡಿ ಸುಲಭವಾಗಿ ಗೆಲ್ಲುವಂತೆ ಮಾಡಲಾಗುತ್ತಿತ್ತು. ಗೆದ್ದಾಗ ಬಂದ ಹಣವನ್ನು ವಾಪಾಸ್‌ ಪಡೆಯಲು ಅವಕಾಶವನ್ನೂ ಕಲ್ಪಿಸಲಾಗಿತ್ತು. ಬಳಕೆದಾರರು ಹೆಚ್ಚಿನ ಮೊತ್ತದೊಂದಿಗೆ ಗೇಮ್‌ಗಳನ್ನು ಆಡಲು ಪ್ರಾರಂಭಿಸಿದಾಗ ತಂತ್ರಜ್ಞಾನದ ಮುಖಾಂತರ ಸೋಲಿಸಿ ಆರ್ಥಿಕ ನಷ್ಟ ಉಂಟಾಗುವಂತೆ ಮಾಡಲಾಗುತ್ತಿತ್ತು. ಬಳಕೆದಾರರನ್ನು ಅಕ್ರಮವಾಗಿ ವ್ಯವಸ್ಥಿತವಾಗಿ ಸೋಲಿಸಿ ಸುಮಾರು 734 ಕೋಟಿ ರು. ನಷ್ಟ ಉಂಟಾಗುವಂತೆ ಮಾಡಿರುವುದು ಇ.ಡಿ. ತನಿಖೆಯಲ್ಲಿ ಬಹಿರಂಗವಾಗಿದೆ. ಬಳಕೆದಾರರು ಗೇಮ್‌ಗಳಲ್ಲಿ ಗೆದ್ದಿರುವ ಹಣವನ್ನು ಹಿಂಪಡೆಯಲು ನಿರ್ಬಂಧಿಸಲಾಗಿತ್ತು. ನಿರಂತರ ಆಟಕ್ಕೆ ಒತ್ತಾಯಿಸಲಾಗುತ್ತಿತ್ತು ಎಂದು ಇ.ಡಿ. ತಿಳಿಸಿದೆ.

ಒಂದೇ ವರ್ಷದಲ್ಲಿ ₹3522 ಕೋಟಿ ಅಕ್ರಮ ಆದಾಯ ಗಳಿಕೆ

ಕೇಂದ್ರ ಸರ್ಕಾರವು ರಿಯಲ್‌ ಮನಿ ಗೇಮಿಂಗ್ಸ್‌ ನಿಷೇಧಿಸಿದ ನಂತರವೂ ವಿಂಜೋ ಕಂಪನಿ ಬಳಕೆದಾರರ 47.66 ಕೋಟಿ ರು. ಠೇವಣಿ ಹಿಂದಿರುಗಿಸಲು ವಿಫಲವಾಗಿದೆ. ಇದೇ ರೀತಿ 2021-22ನೇ ಆರ್ಥಿಕ ವರ್ಷದಲ್ಲಿ ಸುಮಾರು ₹3,522.05 ಕೋಟಿ ಹಣವನ್ನು ವಂಚನೆಯಿಂದ ಗಳಿಸಿರುವುದು ಇ.ಡಿ.ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಂತೆಯೆ ಈ ಕಂಪನಿ ಆರ್‌ಎಂಜಿ ಮುಖಾಂತರ ಕ್ರಮವಾಗಿ ಗಳಿಸಿದ ಆದಾಯವನ್ನು ಯುಎಸ್‌ಎ ಮತ್ತು ಸಿಂಗಾಪುರದ ಶೆಲ್‌ ಕಂಪನಿಗಳ ಮೂಲಕ ಅಕ್ರಮವಾಗಿ ವರ್ಗಾಯಿಸಿದೆ. ಈ ಶೆಲ್‌ ಕಂಪನಿಗಳ ಹೆಸರಿನಲ್ಲಿ ಹೊಂದಿರುವ ವಿದೇಶಿ ಬ್ಯಾಂಕ್‌ ಖಾತೆಗಳಿಗೆ ಸುಮಾರು 55 ಮಿಲಿಯನ್‌ ಯುಎಸ್‌ ಡಾಲರ್‌ ಹಣವನ್ನು ವಿದೇಶಿ ನೇರ ಹೂಡಿಕೆ ಸೋಗಿನಲ್ಲಿ ವರ್ಗಾಯಿಸಿರುವುದು ಇ.ಡಿ.ತನಿಖೆಯಲ್ಲಿ ಬಯಲಾಗಿದೆ.

ಉದ್ದೇಶಪೂರ್ವಕ ವಂಚನೆ

ಈ ವಿಂಜೋ ಕಂಪನಿಯು ಹೋಲ್ಡಿಂಗ್‌ ಕಂಪನಿಯಿಂದ ಸಾಲಗಳು ಎಂದು ಅಂಗಸಂಸ್ಥೆ ಕಂಪನಿಗೆ ಸುಮಾರು 230 ಕೋಟಿ ರು. ತಿರುಗಿಸಿದೆ. ಅಂತೆಯೆ ಅಕ್ರಮ ಆದಾಯದ ಹೆಚ್ಚುವರಿ 150 ಕೋಟಿ ರು. ಹಣವನ್ನು ಅಂಗಸಂಸ್ಥೆ ಕಂಪನಿಗೆ ತಿರುಗಿಸಲು ಪ್ರಯತ್ನಿಸಿರುವುದು ಇ.ಡಿ.ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಗಳು ಉದ್ದೇಶ ಪೂರ್ವಕವಾಗಿಯೇ ವಂಚಿಸಿ ಅಕ್ರಮ ಸಂಪಾದನೆ ಮಾಡಿದ್ದಾರೆ. ಈ ಅಕ್ರಮ ಆದಾಯವನ್ನು ಮರೆಮಾಚಿದ್ದಾರೆ. ಈ ಆದಾಯವು ಸಕ್ರಮ ಆಸ್ತಿ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂದು ಇ.ಡಿ. ದೋಷಾರೋಪಟ್ಟಿಯಲ್ಲಿ ಉಲ್ಲೇಖಿಸಿದೆ.