ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಧರಿಸುವ ಮುನ್ನವೇ ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ, ಹಂದಿಹಾಳು, ಅಮರಾಪುರ ಗ್ರಾಪಂಗೆ ಸಾಮಗ್ರಿಗಳನ್ನು ಪೂರೈಕೆ ಮಾಡಲಾಗಿದೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ಗ್ರಾಮ ಪಂಚಾಯಿತಿಗಳಲ್ಲಿನ ಅರಿವು ಕಲಿಕಾ ಕೇಂದ್ರಗಳಿಗೆ ಸರಬರಾಜು ಮಾಡುವ ಸಾಮಗ್ರಿಗಳಲ್ಲಿ ಹಣ ದುರ್ಬಳಕೆ ಆರೋಪ ಕೇಳಿ ಬಂದಿದ್ದು, ಪ್ರಕರಣ ತನಿಖೆಯ ಜಾಡು ಹಿಡಿದಿದೆ.

ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಧರಿಸುವ ಮುನ್ನವೇ ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ, ಹಂದಿಹಾಳು, ಅಮರಾಪುರ ಗ್ರಾಪಂಗೆ ಸಾಮಗ್ರಿಗಳನ್ನು ಪೂರೈಕೆ ಮಾಡಲಾಗಿದೆ. ಇದಕ್ಕೆ ಪಂಚಾಯಿತಿ ಸದಸ್ಯರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಕೆಲವು ರಾಜಕೀಯ ನಾಯಕರು ಹಾಗೂ ಅಧಿಕಾರಿಗಳ ಒತ್ತಡದಿಂದ ಕೊಟೇಷನ್, ಟೆಂಡರ್ ಕರೆಯುವ ಮುನ್ನವೇ ಪಂಚಾಯಿತಿಗಳಿಗೆ ಸಾಮಗ್ರಿಗಳನ್ನು ಕಳಿಸಿಕೊಡುತ್ತಿದ್ದು, ಒಬ್ಬನೇ ವ್ಯಕ್ತಿ ಸಾಮಗ್ರಿಗಳನ್ನು ಪೂರೈಕೆ ಮಾಡುತ್ತಿದ್ದಾರೆ ಎಂದು ಪಂಚಾಯಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಏನಿದು ಅರಿವು ಕಲಿಕಾ ಕೇಂದ್ರ?: ಪಂಚಾಯಿತಿಗಳಲ್ಲಿನ ಕಲಿಕಾ ಕೇಂದ್ರಗಳ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ, ಸಿಬ್ಬಂದಿಗೆ ಉತ್ತಮ ಕಾರ್ಯಕ್ಷಮತೆ ಕಲಿಕೆಯ ಅವಕಾಶ ಕಲ್ಪಿಸುವುದು ಕೇಂದ್ರಗಳ ಪ್ರಮುಖ ಉದ್ದೇಶ. ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ, ಅಮರಾಪುರ, ಹಂದಿಹಾಳು ಗ್ರಾಪಂಗಳಲ್ಲಿ ಕೇಂದ್ರಗಳು ಸ್ಥಾಪನೆಯಾಗಬೇಕಿದ್ದು ಇದಕ್ಕೆ ಗ್ರಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು. ಬಳಿಕವಷ್ಟೇ ಕೊಟೇಷನ್, ಟೆಂಡರ್ ಪ್ರಕ್ರಿಯೆ ನಡೆಯಬೇಕು. ಆದರೆ, ಈ ಮೂರು ಪಂಚಾಯಿತಿಯಲ್ಲಿ ಟೆಂಡರ್ ಆಹ್ವಾನಿಸುವ ಮೊದಲೇ ಕೆಲ ರಾಜಕೀಯ ನಾಯಕರ ಹಿಂಬಾಲಕರು ಕೇಂದ್ರಕ್ಕೆ ಬೇಕಾದ 40 ಖುರ್ಚಿ, ಕಂಪ್ಯೂಟರ್, ಫ್ರಿಂಟರ್, ಸ್ಕ್ರೀನ್ ಪ್ರಾಜೆಕ್ಟರ್, ಕಿಟಕಿ ಕರ್ಟನ್ಸ್‌ ಸಾಮಗ್ರಿ ಪೂರೈಕೆಯಾಗಿದೆ. ಪಂಚಾಯಿತಿ ಸದಸ್ಯರೇ ಆರೋಪಿಸುವಂತೆ ಸಾಮಗ್ರಿಗಳನ್ನು ಎರಡರಿಂದ ಮೂರು ಪಟ್ಟು ದರ ನಿಗದಿಗೊಳಿಸಲಾಗಿದೆ.

ಕಿಟಕಿ ಕರ್ಟನ್‌ಗೆ ₹34,500: ಕಲಿಕಾ ಕೇಂದ್ರಕ್ಕೆ ಬಳ್ಳಾರಿಯ ವಾಸವಿ ಕಮ್ಯುನಿಕೇಷನ್ಸ್‌ ನೀಡಿರುವ ಕೊಟೇಷನ್ ಹುಬ್ಬೇರಿಸುವಂತೆ ಮಾಡಿದೆ. ಕಿಟಕಿ ಕರ್ಟನ್‌ಗೆ ₹34,500 ಕೊಟೇಷನ್ ನೀಡಲಾಗಿದೆ. ಮಯೂರ ಸರ್ಗ್‌ಮಿಡ್‌ ಅಂಗಡಿಯಿಂದ ವ್ಹೀಲ್ ಚೇರ್‌ಗೆ ಒಂದೇ ಕೊಟೇಷನ್‌ನಲ್ಲಿ ಮೂರು ದರ ನೀಡಿದ್ದಾರೆ. ಮೂರರಲ್ಲಿ ಕಡಿಮೆ ಇರುವುದನ್ನು ಆಯ್ಕೆ ಮಾಡಿಕೊಳ್ಳಲೇಬೇಕು.

ಅರಿವು ಯೋಜನೆಯಡಿ ಆಗಿರುವ ಅವ್ಯವಹಾರ ಆರೋಪ ಗಮನಕ್ಕೆ ಬಂದಿದೆ. ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ಜಿಪಂ ಉಪ ಕಾರ್ಯದರ್ಶಿಗೆ ಸೂಚನೆ ನೀಡಿದ್ದೇನೆ. ತನಿಖಾ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜರುಗಿಸುತ್ತೇವೆ ಎನ್ನುತ್ತಾರೆ ಬಳ್ಳಾರಿ ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್.

ಕಲಿಕಾ ಕೇಂದ್ರದ ಅವ್ಯವಹಾರ ಸೇರಿದಂತೆ ಪಂಚಾಯಿತಿಗಳಲ್ಲಾಗುವ ಹಣ ದುರುಪಯೋಗದ ವಿರುದ್ಧ ಒಕ್ಕೂಟದಿಂದ ಹೋರಾಟ ಮುಂದುವರಿಯಲಿದೆ. ರಾಜಕೀಯ ಒತ್ತಡಗಳಿಂದಾಗಿ ಅಧಿಕಾರಿಗಳ ಮೇಲೂ ಒತ್ತಡ ತಂದು ಪಂಚಾಯಿತಿ ವ್ಯವಸ್ಥೆಯ ಆಶಯವನ್ನು ಹಾಳು ಮಾಡಲಾಗುತ್ತಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ಗ್ರಾಪಂ ಸದಸ್ಯರ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಣಾಪುರ ನಾಗರಾಜ್.