ಮಣಿಪಾಲ ಕೆಎಂಸಿ ಮಾರ್ಕ್‌ನ 35ನೇ ವರ್ಷಾಚರಣೆ

| Published : Feb 21 2024, 02:06 AM IST

ಸಾರಾಂಶ

ಬಂಜೆತನ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿರುವ ಮಾರ್ಕ್ ತನ್ನ ಯಶಸ್ವಿ ಚಿಕತ್ಸೆಯಿಂದ 11,000 ಶಿಶುಗಳ ಜನನವನ್ನು ಹೆಮ್ಮೆಯಿಂದ ಘೋಷಿಸಲಾಯಿತು. ಇದು ಮಾರ್ಕ್ ಬಂಜೆತನದ ದಂಪತಿಗೆ ನೀಡುತ್ತಿರುವ ಸೇವೆ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ.

ಕನ್ನಡಪ್ರಭ ವಾರ್ತೆ ಮಣಿಪಾಲಇಲ್ಲಿನ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಸಹಾಯಿತಾ ಪ್ರಜನನ ಕೇಂದ್ರವು (ಎಂಎಆರ್‌ಸಿ- ಮಾರ್ಕ್) ಸಂತಾನಹೀನ ದಂಪತಿಗಳಿಗೆ ನೀಡುತ್ತಿರುವ ಯಶಸ್ವಿ ಸೇವೆಯ 35ನೇ ವರ್ಷವನ್ನು ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡಾ. ಟಿ.ಎಂ.ಎ. ಪೈ ಆಡಿಟೋರಿಯಂನಲ್ಲಿ ಮಾರ್ಕ್ ದಿನವನ್ನಾಗಿ ಆಚರಣೆ ನಡೆಸಲಾಯಿತು.ಈ ಸಂದರ್ಭ ಬಂಜೆತನ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿರುವ ಮಾರ್ಕ್ ತನ್ನ ಯಶಸ್ವಿ ಚಿಕತ್ಸೆಯಿಂದ 11,000 ಶಿಶುಗಳ ಜನನವನ್ನು ಹೆಮ್ಮೆಯಿಂದ ಘೋಷಿಸಲಾಯಿತು. ಇದು ಮಾರ್ಕ್ ಬಂಜೆತನದ ದಂಪತಿಗೆ ನೀಡುತ್ತಿರುವ ಸೇವೆ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ.ಇದೇ ಸಂದರ್ಭದಲ್ಲಿ ಮಾರ್ಕ್ ಮೂಲಕ ಜನಿಸಿದ ಮೊದಲ ಇನ್ ವಿಟ್ರೋ ಫರ್ಟಿಲೈಸೇಶನ್ (ಐವಿಎಫ್) ಮಗುವಿನ 25ನೇ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.

ಸಂತಾನೋತ್ಪತ್ತಿ ಔಷಧಿ ಮತ್ತು ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಪ್ರತಾಪ್ ಕುಮಾರ್ ಮಾತನಾಡಿ, ಮಾರ್ಕ್ 1990ರಲ್ಲಿ ಸರಳವಾದ ಕಾರ್ಯವಿಧಾನಗಳೊಂದಿಗೆ ಪ್ರಾರಂಭವಾಯಿತು ಮತ್ತು ನಂತರ 1998ರಲ್ಲಿ ಟೆಸ್ಟ್ ಟ್ಯೂಬ್ ಬೇಬಿ (ಐವಿಎಫ್) ಕಾರ್ಯವಿಧಾನವನ್ನು ಪ್ರಾರಂಭಿಸಿತು. ಫೆ.18, 1999ರಂದು ಮೊದಲ ಐವಿಎಫ್ ಮಗುವಿನ ಜನನದೊಂದಿಗೆ ಅದರ ಮೊದಲ ಯಶಸ್ಸನ್ನು ಕಂಡಿತು. ಅನುಭವಿ ವೈದ್ಯರು ಮತ್ತು ತರಬೇತಿ ಪಡೆದ ವಿಜ್ಞಾನಿಗಳಿಂದ ಬೆಂಬಲಿತವಾದ ಮಾರ್ಕ್ ಕೇಂದ್ರವು ಭಾರತದ ಅತ್ಯಂತ ಮುಂದುವರಿದ ಬಂಜೆತನ ಚಿಕಿತ್ಸಾ ಕೇಂದ್ರಗಳಲ್ಲಿ ಒಂದಾಗಿದೆ ಎಂದರು.

ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ.ಪದ್ಮರಾಜ್ ಹೆಗ್ಡೆ ಮಾತನಾಡಿ, ಪುರುಷ ಸಂತಾನಹೀನತೆಯ ಮೌಲ್ಯಮಾಪನಕ್ಕಾಗಿ ಸುಸಜ್ಜಿತ ಆಂಡ್ರಾಲಜಿ ಪ್ರಯೋಗಾಲಯ, ಅಲ್ಪಾವಧಿಯ ಮತ್ತು ದೀರ್ಘಾವಧಿಯ ಶೇಖರಣೆಗಾಗಿ ವೀರ್ಯ ಬ್ಯಾಂಕ್ ಮತ್ತು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಭ್ರೂಣಶಾಸ್ತ್ರ ಪ್ರಯೋಗಾಲಯಗಳು ಸೇರಿದಂತೆ ಮಾರ್ಕ್ ಅತ್ಯಾಧುನಿಕ ಸೌಲಭ್ಯಗಳನ್ನು, ಫಲವತ್ತತೆ ವರ್ಧನೆಗಾಗಿ ಲ್ಯಾಪರೊಸ್ಕೋಪಿಕ್ ಮತ್ತು ಹಿಸ್ಟರೊಸ್ಕೋಪಿಕ್ ಶಸ್ತ್ರಚಿಕಿತ್ಸೆಗಳಲ್ಲಿ ಪರಿಣತಿಯನ್ನು ಹೊಂದಿದೆ ಎಂದು ಮಾಹಿತಿ ನೀಡಿದರು.ಕೆಎಂಸಿ ಅಸೋಸಿಯೇಟ್ ಡೀನ್ ಡಾ.ಕೃಷ್ಣಾನಂದ ಪ್ರಭು, ಭ್ರೂಣಶಾಸ್ತ್ರಜ್ಞ ಡಾ.ಸತೀಶ್ ಅಡಿಗ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮಾರ್ಕ್‌ನ ಸಹಾಯದಿಂದ ಜನಿಸಿದ 200ಕ್ಕೂ ಹೆಚ್ಚು ಮಕ್ಕಳು ಮತ್ತು ಅವರ ಪೋಷಕರು ಪಾಲ್ಗೊಂಡಿದ್ದರು.