36 ಸೇತುವೆ ಮುಳುಗಡೆ, ಮಹಾ ಸಂಪರ್ಕ ಕಡಿತ

| Published : Jul 27 2024, 12:49 AM IST

ಸಾರಾಂಶ

ಬೆಳಗಾವಿ: ನೆರೆಯ ಮಹಾರಾಷ್ಟ್ರ ಮತ್ತು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ನದಿಗಳು ಉಕ್ಕಿ ಹರಿಯುತ್ತಿದ್ದು, ಈವರೆಗೆ ಒಟ್ಟು 36 ಸೇತುವೆ ಮುಳುಗಡೆಯಾಗಿವೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ನೆರೆಯ ಮಹಾರಾಷ್ಟ್ರ ಮತ್ತು ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ನದಿಗಳು ಉಕ್ಕಿ ಹರಿಯುತ್ತಿದ್ದು, ಈವರೆಗೆ ಒಟ್ಟು 36 ಸೇತುವೆ ಮುಳುಗಡೆಯಾಗಿವೆ. ಮಹಾರಾಷ್ಟ್ರ ಸಂಪರ್ಕ ಸೇತುವೆಗಳು ಮುಳುಗಡೆಯಾಗಿರುವುದರಿಂದ ಮಹಾರಾಷ್ಟ್ರ ಸಂಪರ್ಕಿಸುವ ಬೆಳಗಾವಿಯ ಎಲ್ಲ ಮಾರ್ಗಗಳನ್ನು ಬಂದ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.ಬೆಳಗಾವಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ಮುಳುಗಡೆಯಾದ ಸೇತುವೆಯ ಬಳಿ ಬಿಗಿ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಕಳೆದ ಮೂರು ದಿನಗಳಿಂದ ನಾವು, ಜಿಲ್ಲಾಧಿಕಾರಿ, ಜಿಪಂ ಸಿಇಒ ನಿರಂತರವಾಗಿ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರವಾಹ ಭೀತಿ ಇರುವ ಗ್ರಾಮದ ಜನರನ್ನು ಸ್ಥಳಾಂತರ ಮಾಡುವ ಕಾರ್ಯ ನಡೆಯುತ್ತಿದೆ ಎಂದರು.

ಸಾರ್ವಜನಿಕರು ಮೀನುಗಾರಿಕೆ ಸೇರಿದಂತೆ ಇನ್ನಿತರ ಕಾರಣಗಳಿಗೆ ನದಿ ನೀರಿನಲ್ಲಿ ಹೋಗಬಾರದು. ಇದಕ್ಕೆ ಜಿಲ್ಲಾಡಳಿತದಿಂದ ಸಾಕಷ್ಟು ಕ್ರಮ ಕೈಗೊಂಡಿದೆ. ಎಲ್ಲಿ ಹೋಗಲು ಜನರಿಗೆ ತೊಂದರೆ ಇದೆಯೋ ಅಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ. ಅಪಾಯ ಇರುವ ಕಡೆಗಳಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸದ್ಯದ ಮಟ್ಟಿಗೆ ಪ್ರವಾಹದ ಭೀಕರತೆ ಇಲ್ಲ. ಆಲಮಟ್ಟಿ ಜಲಾಯಶದಿಂದ 2.75 ಲಕ್ಷ ಕ್ಯುಸೆಕ್ ನಿಂದ 3 ಲಕ್ಷ ಕ್ಯುಸೆಕ್ ವರೆಗೂ ನೀರು ಬಿಡುತ್ತಿರುವುದರಿಂದ ನೀರು ಉಳಿಯುತ್ತಿಲ್ಲ. ನಮ್ಮ ಜಿಲ್ಲೆಗೆ ಬರುವ 2.2 ಕ್ಯುಸೆಕ್ ಕಲೋಳ ಬ್ಯಾರೇಜ್ ಜೊತೆಗೆ 60 ಸಾವಿರ ಕ್ಯುಸೆಕ್ ಘಟಪ್ರಭಾ ನದಿಗೆ ಒಟ್ಟು 2.95 ಲಕ್ಷ ಕ್ಯುಸೆಕ್‌ ನೀರು ಬರುತ್ತಿರುವುದರಿಂದ ಸದ್ಯಕ್ಕೆ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೂ ನದಿ ದಡದಲ್ಲಿರುವ ಗ್ರಾಮಸ್ಥರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಬೇಕು ಎಂದು ಹೇಳಿದರು.