ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಸರ್ಕಾರಿ ಮಾದರಿ ದ್ವಿಭಾಷಾ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಲಕ್ಕುಂಡಿ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ನಡೆಯಿತು.

ಗದಗ: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಗದಗ ತಾಲೂಕಿನ 36 ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ ಎಂದು ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಹೇಳಿದರು.

ಅವರು ಗುರುವಾರ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಸರ್ಕಾರಿ ಮಾದರಿ ದ್ವಿಭಾಷಾ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾಗಳು, ಗದಗ ಗ್ರಾಮೀಣ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಹಾಗೂ ಲಕ್ಕುಂಡಿ ಸಮೂಹ ಸಂಪನ್ಮೂಲ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಲಕ್ಕುಂಡಿ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೇಗನೆ ಪೂರ್ವ ಪ್ರಾಥಮಿಕ ಸರ್ಕಾರಿ ಶಾಲೆ ಆರಂಭವಾದರೆ 1ನೇ ತರಗತಿಗೆ ಅದೇ ಮಕ್ಕಳು ಪ್ರವೇಶ ಪಡೆಯುತ್ತಾರೆ ಎಂಬ ಕಾರಣಕ್ಕೆ 36 ಕಡೆ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸುತ್ತಿದ್ದೇವೆ. ಶಾಲಾ ಅಭಿವೃದ್ಧಿ ಸಮಿತಿ ವಿದ್ಯಾರ್ಥಿಗಳ ಪ್ರವೇಶ ಆರಂಭಿಸಿದರೆ ಜನವರಿಯಿಂದಲೇ ಅನುದಾನ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುತ್ತಾ ಬರುತ್ತಿದ್ದು, ಈ ಶಾಲೆಯಲ್ಲಿ ದೊರಕುವ ಸೌಲಭ್ಯದ ಕುರಿತು ಎಸ್‌ಡಿಎಂಸಿಯು ಶಾಲೆಯ ಹೊರಗೆ ಬ್ಯಾನರ್‌ ಅಳವಡಿಸಿ, ಆಕರ್ಷಿಸಿ, ಸರ್ಕಾರಿ ಶಾಲೆಯನ್ನು ಬೆಳಕಿಗೆ ತರಬೇಕು. ಕಳೆದ ವರ್ಷ ದ್ವಿಭಾಷಾ ಶಾಲೆಯಾಗಿ ಆಂಗ್ಲ ವಿಭಾಗ ಆರಂಭವಾಗಿದ್ದು, ಇದಕ್ಕೆ ಸರ್ಕಾರ 30 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನಿಗದಿಪಡಿಸಿತ್ತು. ಆದರೆ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಳೆದ ವರ್ಷ ಪ್ರವೇಶ ಬಯಸಿದ್ದರು. ಈ ಹಿನ್ನೆಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗಿತ್ತು. 40 ವಿದ್ಯಾರ್ಥಿಗಳಿಗೆ ಪ್ರವೇಶ ನಿಗದಿ ಮಾಡಿ ಸರ್ಕಾರ ಆದೇಶ ಮಾಡಿದ್ದು, ಸಂತಸ ತಂದಿದೆ ಎಂದರು.

ಗ್ರಾಪಂ ಅಧ್ಯಕ್ಷ ಕೆ.ಎಸ್. ಪೂಜಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಸ್.ಎಚ್. ಶೆಟ್ಟಿನಾಯ್ಕರ, ಪಿಡಿಒ ಅಮೀರನಾಯಕ ಮಾತನಾಡಿದರು. ಸಿಆರ್‌ಪಿ ಕೆ.ಟಿ. ಮೀರಾನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಗವಿಸಿದ್ದಪ್ಪ ಯಲಿಶಿರುಂಜ ಅಧ್ಯಕ್ಷತೆ ವಹಿಸಿದ್ದರು. ಅಕ್ಷರ ದಾಸೋಹದ ನಿರ್ದೇಶಕ ಶಂಕರ ಹಡಗಲಿ, ಗ್ರಾಪಂ ಸದಸ್ಯೆ ಅನಸಮ್ಮ ಅಂಬಕ್ಕಿ, ಕುಬೇರಪ್ಪ ಬೆಂತೂರು ಹಾಗೂ ಅಶೋಕ ಬೂದಿಹಾಳ, ಎನ್.ಎಚ್. ಪಾಟೀಲ, ಎಸ್.ಬಿ. ಹೊರಕೇರಿ, ಪಿ.ಎಂ. ಅಯ್ಯನಗೌಡರ, ರಮಜಾನಸಾಬ್‌ ತಹಶೀಲ್ದಾರ, ಪವಿತ್ರಾ ಬಣವಿ ಹಾಗೂ ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು. ಪಿ.ಎನ್. ಶಿರೋಳ ಸ್ವಾಗತಿಸಿದರು. ಅಂಜನಾ ಕರಿಯಲ್ಲಪ್ಪನವರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.