371ಜೆ ಸ್ಥಾನಮಾನ ದಕ್ಕಿದರೂ ತಪ್ಪದ ಗೋಳು

| Published : Sep 17 2024, 12:48 AM IST

ಸಾರಾಂಶ

ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಬಂದ ಮೇಲೆಯೂ ನಿಜಾಮರಿಂದ ಶೋಷಣೆಗೊಳಗಾಗಿದ್ದ (ಹೈದ್ರಾಬಾದ್ ಕರ್ನಾಟಕ) ಕಲ್ಯಾಣ ಕರ್ನಾಟಕಕ್ಕೆ ಈಗಲೂ ಗೋಳು ತಪ್ಪಿಲ್ಲ. ಕಳೆದ ಹತ್ತು ವರ್ಷಗಳ ಹಿಂದೆ 371ಜೆ ವಿಶೇಷ ಸ್ಥಾನಮಾನದ ನಂತರವೂ ಸಮಸ್ಯೆಗಳ ಸಾಲು ಸಾಲು ಹಾಗೆಯೇ ಇವೆ.

ಕಲಬುರಗಿಯಲ್ಲಿಂದು ಸಚಿವ ಸಂಪುಟ ಸಭೆ

ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನಕ್ಕೆ ಹತ್ತು ವರ್ಷ

ವಿಶೇಷ ಸ್ಥಾನಮಾನದಿಂದ ದಕ್ಕಿದ್ದಕ್ಕಿಂತ ದಕ್ಕಬೇಕಾಗಿರುವುದೇ ಹೆಚ್ಚು

ಕೆಕೆಆರ್ ಡಿಬಿಯಲ್ಲಿ ಕೊಟ್ಟಿದ್ದ ₹5 ಸಾವಿರ ಕೋಟಿಯಲ್ಲಿ ನೈಯಾಪೈಸೆ ಖರ್ಚಾಗಿಲ್ಲ

ಸಾಲು ಸಾಲು ಷರತ್ತುಗಳೇ ಅನುದಾನ ಬಳಕೆಗೆ ಅಡ್ಡಿ

ಕಲ್ಯಾಣ ಕರ್ನಾಟಕ ಭಾಗದಲ್ಲಿ 40 ಸಾವಿರ ಹುದ್ದೆ ಖಾಲಿ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಬಂದ ಮೇಲೆಯೂ ನಿಜಾಮರಿಂದ ಶೋಷಣೆಗೊಳಗಾಗಿದ್ದ (ಹೈದ್ರಾಬಾದ್ ಕರ್ನಾಟಕ) ಕಲ್ಯಾಣ ಕರ್ನಾಟಕಕ್ಕೆ ಈಗಲೂ ಗೋಳು ತಪ್ಪಿಲ್ಲ. ಕಳೆದ ಹತ್ತು ವರ್ಷಗಳ ಹಿಂದೆ 371ಜೆ ವಿಶೇಷ ಸ್ಥಾನಮಾನದ ನಂತರವೂ ಸಮಸ್ಯೆಗಳ ಸಾಲು ಸಾಲು ಹಾಗೆಯೇ ಇವೆ.

ಹೌದು, ಕಲ್ಯಾಣ ಕರ್ನಾಟಕ ತೀರಾ ಹಿಂದುಳಿದಿದೆ. ಅದಕ್ಕಾಗಿಯೇ 2013ರ ಜ. 1ರಂದು 371ಜೆ ವಿಶೇಷ ಸ್ಥಾನಮಾನವನ್ನು ಸುಮಾರು ವರ್ಷಗಳ ಹೋರಾಟದ ಫಲವಾಗಿ ನೀಡಲಾಯಿತು. ಇದಾದ ಮೇಲೆ ಸಾಕಷ್ಟು ಅನುಕೂಲವಾಗಿದೆಯಾದರೂ ಕೊಟ್ಟಿದ್ದ ವಿಶೇಷ ಸ್ಥಾನಮಾನವನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಸಾಧ್ಯವಾಗಿಲ್ಲ.

ಪ್ರತ್ಯೇಕ ಪ್ರಾಧಿಕಾರ:

371ಜೆ ಅನುಷ್ಠಾನಕ್ಕೆ ಪ್ರತ್ಯೇಕ ಪ್ರಾಧಿಕಾರ ರಚನೆಯ ಕೂಗು ಈ ಭಾಗದಲ್ಲಿ ಕೇಳಿ ಬರುತ್ತಿದೆ. ಜಾರಿಯಾಗಿರುವ ವಿಶೇಷ ಸ್ಥಾನದ ಮೇಲೆ ವಿಶೇಷ ನಿಗಾ ಇಡಲು ಯಾವುದೇ ವ್ಯವಸ್ಥೆ ಇಲ್ಲದೇ ಇರುವುದರಿಂದ, ಸರ್ಕಾರದ ಮುಂದೆ ಇದು ಹೋಗಬೇಕಾಗಿದೆ. ಹೀಗಾಗಿ, ಪ್ರತ್ಯೇಕ ಪ್ರಾಧಿಕಾರ ರಚನೆಯಾದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಈ ಭಾಗದವರು.

371 ಜೆ ಸ್ಥಾನಮಾನ ಲಭ್ಯವಾದ ಮೇಲೆ ನೇಮಕಾತಿಯಲ್ಲಿ ಸಾಕಷ್ಟು ಆದ್ಯತೆ ಸಿಗುತ್ತಿದೆ. ಸ್ಥಳೀಯ ಉದ್ಯೋಗಗಳಲ್ಲಿ ಶೇ. 80ರಷ್ಟು ಸ್ಥಳೀಯವಾಗಿಯೇ ಸಿಗುತ್ತಿವೆ. ಇನ್ನು ರಾಜ್ಯವ್ಯಾಪಿ ನೇಮಕಾತಿಯಲ್ಲಿ ಶೇ. 8ರಷ್ಟು ಹುದ್ದೆಗಳು ದೊರೆಯುತ್ತಿವೆ. ವೈದ್ಯಕೀಯ, ಎಂಜಿನಿಯರ್ ಸೇರಿದಂತೆ ವಿವಿಗಳಲ್ಲಿಯೂ ಹೆಚ್ಚಿನ ಸ್ಥಾನಮಾನ ದೊರೆಯುತ್ತಿದೆ. ಆದರೆ, ಇದು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ ಎನ್ನುವ ಆರೋಪ ಇದೆ.

ತಪ್ಪಾಗಿ ಅರ್ಥೈಸಿ ಮೋಸ:

371ಜೆಯನ್ನು ತಪ್ಪಾಗಿ ಅರ್ಥೈಸಿ ನೇಮಕಾತಿಯಲ್ಲಿ ಮೋಸ ಮಾಡಲಾಗುತ್ತದೆ. ಕಲ್ಯಾಣ ಕರ್ನಾಟಕ ಭಾಗದವರು ಸಾಮಾನ್ಯ ಹುದ್ದೆಗಳಲ್ಲಿ ಸ್ಪರ್ಧೆ ಮಾಡುವುದಕ್ಕೆ ಅವಕಾಶ ಇಲ್ಲದಂತೆ ಮಾಡಲಾಗುತ್ತದೆ. ಈ ಭಾಗದವರನ್ನು ಈ ಭಾಗದಲ್ಲಿಯೇ ಪೈಪೋಟಿಗೆ ಇಳಿಯುವಂತೆ ಮಾಡುವ ಮೂಲಕ ಮೋಸ ಮಾಡಲಾಗುತ್ತದೆ.

ಬಳಕೆಯಾಗದ ಅನುದಾನ:

ಕಲ್ಯಾಣ ಕರ್ನಾಟಕಕ್ಕೆ ಪ್ರಸಕ್ತ ವರ್ಷ ಸಿಎಂ ಸಿದ್ದರಾಮಯ್ಯ ಅವರು ಬರೋಬ್ಬರಿ ₹5 ಸಾವಿರ ಕೋಟಿ ಘೋಷಣೆ ಮಾಡಿದ್ದಾರೆ.

ದುರಂತ ಎಂದರೇ 6 ತಿಂಗಳಾದರೂ ಇದುವರೆಗೂ ನೈಯಾಪೈಸೆ ಬಳಕೆಯಾಗಿಲ್ಲ. ಈಗ ಪ್ರಸ್ತಾವನೆಗೆ ಅನುಮೋದನೆ ನೀಡಲಾಗುತ್ತಿದೆ. ಕೊಟ್ಟಿರುವ ಅನುದಾನ ಬಳಕೆಯಾಗದೆ ಇರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಶಿಸ್ತು ಕ್ರಮ:

ಕಲ್ಯಾಣ ಕರ್ನಾಟಕ ಅನುದಾನ ಬಳಕೆಯಲ್ಲಿ ವಿಳಂಬವಾಗುತ್ತಿರುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು. ಜಿಲ್ಲಾಧಿಕಾರಿಗಳನ್ನೇ ಹೊಣೆ ಮಾಡಿದರೆ ಮಾತ್ರ ಅನುದಾನ ಬಳಕೆಯಾಗಲು ಸಾಧ್ಯವಾಗುತ್ತದೆ.

ಕಳೆದ ಹತ್ತು ವರ್ಷಗಳಲ್ಲಿ ಬಂದಿರುವ ₹14 ಸಾವಿರ ಕೋಟಿಯಲ್ಲಿಯೂ ₹2500 ಕೋಟಿ ಬಳಕೆಯಾಗಿಲ್ಲ. ಕೆಕೆಆರ್ ಡಿಬಿ ಅನುದಾನ ಬಳಕೆಗೆ ಭಾರೀ ಷರತ್ತುಗಳು ಇರುವುದೇ ಸಮಸ್ಯೆಯಾಗಿದೆ ಎನ್ನಲಾಗುತ್ತಿದೆ.

40 ಸಾವಿರ ಹುದ್ದೆಗಳು ಖಾಲಿ:

ರಾಜ್ಯಾದ್ಯಂತ 2 ಲಕ್ಷ ಸರ್ಕಾರಿ ನೌಕರರ ಹುದ್ದೆಗಳು ಖಾಲಿ ಇದ್ದರೆ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿಯೇ 40 ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಇವೆ. ಇದರಲ್ಲಿ 22 ಸಾವಿರಕ್ಕೂ ಅಧಿಕ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಇದು, ಕೇವಲ ಮಂಜೂರಾದ ಹುದ್ದೆಗಳ ಖಾಲಿ ಇರುವ ಮಾಹಿತಿ. ಆದರೆ, ಬದಲಾದ ಜನಸಂಖ್ಯೆ ಮತ್ತು ತಾಲೂಕು ಕೇಂದ್ರ, ಜಿಲ್ಲಾ ಕೇಂದ್ರಗಳ, ಶಾಲಾ-ಕಾಲೇಜುಗಳ ಹೆಚ್ಚಳವಾಗಿದ್ದ ಲೆಕ್ಕಚಾರ ತೆಗೆದುಕೊಂಡರೆ ಇನ್ನು ಖಾಲಿ ಇರುವ ಹುದ್ದೆಗಳ ಸಂಖ್ಯೆ ವಿಪರೀತ ಹೆಚ್ಚಳವಾಗಲಿದೆ.

ಶಾಲಾ-ಕಾಲೇಜುಗಳ ಅಭಾವ:

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಾಲಾ-ಕಾಲೇಜುಗಳ ಅಭಾವ ಹೆಚ್ಚಿದೆ. ನಗರ ಪ್ರದೇಶದಲ್ಲಿರುವ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ದನಗಳಂತೆ ತುಂಬಲಾಗುತ್ತದೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮೂಲಭೂತ ಸೌಕರ್ಯ ಇಲ್ಲದಿರುವುದು ಮಾತ್ರ ಸೋಜಿಗದ ಸಂಗತಿಯಾಗಿದೆ.

ಹಾಗೆಯೇ ಆರೋಗ್ಯ ಕ್ಷೇತ್ರದಲ್ಲಿಯೂ ಸಾಕಷ್ಟು ಸುಧಾರಣೆಯಾಗಬೇಕಾಗಿದೆ. ಹೆರಿಗೆಗಾಗಿ ಶಸ್ತ್ರ ಚಿಕಿತ್ಸಾ ಕೇಂದ್ರದಲ್ಲಿ ಸರದಿ ನಿಲ್ಲಬೇಕಾಗಿದೆ. ಮೂರು ತಿಂಗಳಿಗೆ ಆಪರೇಶನ್ ಡೇಟ್ ನೀಡುವ ಸರ್ಕಾರಿ ಆಸ್ಪತ್ರೆಗಳು ಇರುವುದು ಇಡೀ ಸಮಸ್ಯೆಯನ್ನು ಎಳೆ ಎಳೆಯಾಗಿ ಬಿಡಿಸಿಡುತ್ತದೆ.