ಬಂಟರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು 38 ಎಕರೆ ಜಾಗ ಗುರುತು

| Published : Nov 19 2024, 12:48 AM IST

ಬಂಟರ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು 38 ಎಕರೆ ಜಾಗ ಗುರುತು
Share this Article
  • FB
  • TW
  • Linkdin
  • Email

ಸಾರಾಂಶ

ಬಂಟರ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಕೊಪ್ಪದಲ್ಲಿ 38 ಎಕರೆ ಜಾಗ ಗುರುತಿಸಿಕೊಳ್ಳಲಾಗಿದೆ ಎಂದು ಬೆಂಗಳೂರಿನ ಕೀರ್ತಿ ಫೌಂಡೇಶನ್ ಅಧ್ಯಕ್ಷ ಕೀರ್ತಿರಾಜ್ ಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಬಂಟರ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಕೊಪ್ಪದಲ್ಲಿ 38 ಎಕರೆ ಜಾಗ ಗುರುತಿಸಿಕೊಳ್ಳಲಾಗಿದೆ ಎಂದು ಬೆಂಗಳೂರಿನ ಕೀರ್ತಿ ಫೌಂಡೇಶನ್ ಅಧ್ಯಕ್ಷ ಕೀರ್ತಿರಾಜ್ ಶೆಟ್ಟಿ ಹೇಳಿದರು.

ಪಟ್ಟಣದ ಬಂಟರ ಯಾನೆ ನಾಡವರ ಸಂಘ ಸೋಮವಾರ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಬಂಟರ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಬೇಕು ಎಂಬ ಉದ್ದೇಶಹೊಂದಿದ್ದು, ಈಗಾಗಲೇ ಕೊಪ್ಪದಲ್ಲಿ 38 ಎಕರೆ ಜಾಗ ಗುರುತಿಸಿ ಖರೀದಿಸಲಾಗಿದೆ. ಅಲ್ಲಿ ಬಂಟರ ಸಮುದಾಯದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಆಲೋಚನೆ ಹೊಂದಲಾಗಿದೆ ಎಂದು ತಿಳಿಸಿದರು.

ಕೀರ್ತಿ ಫೌಂಡೇಶನ್ ವತಿಯಿಂದ 60 ಶಾಲೆಗಳನ್ನು ದತ್ತು ಪಡೆದಿದ್ದು, ಸುಮಾರು 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕೀರ್ತಿ ಫೌಂಡೇಶನ್ ಬಂಟರ ಸಮುದಾಯದ ಏಳ್ಗೆಗಾಗಿ ಶ್ರಮಿಸುತ್ತಿದ್ದು, ಕ್ರೀಡೆ, ಶಿಕ್ಷಣ, ಆರೋಗ್ಯದ ಕುರಿತು ಕಾಳಜಿ ವಹಿಸಿ ಸಹಾಯಧನ ಮಾಡುತ್ತಿದೆ ಎಂದರು.ಬಂಟರ ಸಂಘದ ಸ್ಥಾಪಕ ಅಧ್ಯಕ್ಷ ಡಾ. ಸುನೀಲ್‌ಕುಮಾರ್ ರೈ ಮಾತನಾಡಿ, ಬಂಟರ ಸಂಘದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಹಲವು ಬದಲಾವಣೆಗಳ ಮೂಲಕ ಸಂಘ ಯಶಸ್ಸಿನ ಹಾದಿಯತ್ತ ಮುನ್ನಡೆಯುತ್ತಿದೆ. ಯಾವುದೇ ಸಂಘ ಸಂಸ್ಥೆ ನಿಂತ ನೀರಾಗದೆ ಸಕ್ರಿಯವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಯಶಸ್ಸು ಸಾಧ್ಯವಾಗಲಿದ್ದು, ಈ ನಿಟ್ಟಿನಲ್ಲಿ ಬಂಟರ ಸಂಘದ ಸದಸ್ಯರು ಒಗ್ಗೂಡಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮುದಾಯದ ಯುವಕರು ವಿದ್ಯಾಭ್ಯಾಸ ಪಡೆದಾಗ ಮಾತ್ರ ಸಮುದಾಯ ಬಲಗೊಳ್ಳಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಬಾಳೆಹೊನ್ನೂರು ಬಂಟರ ಸಂಘದಿಂದ ಪ್ರತೀ ವರ್ಷ ₹2ರಿಂದ 3 ಲಕ್ಷ ವಿದ್ಯಾರ್ಥಿ ವೇತನವನ್ನು ಪ್ರತಿಭಾವನ್ವಿತರಿಗೆ ನೀಡಲಾಗುತ್ತಿದೆ ಎಂದರು.

ಈಗಾಗಲೇ 50ಕ್ಕೂ ಅಧಿಕ ಮಹಿಳೆಯರಿಗೆ ಸ್ವಾವಲಂಬಿ ಜೀವನಕ್ಕಾಗಿ ಹೊಲಿಗೆ ಯಂತ್ರಗಳ ವಿತರಣೆ, ಬಡ ಕುಟುಂಬದಲ್ಲಿನ ವಿವಾಹಕ್ಕಾಗಿ 15ಕ್ಕೂ ಅಧಿಕ ಜನರಿಗೆ ಮಾಂಗಲ್ಯ ಸರ ವಿತರಣೆ ಮಾಡಲಾಗಿದೆ. ಸಂಘದಿಂದ ಸ್ವಂತ ಜಾಗವನ್ನು ಖರೀದಿಸಿದ್ದು, ಸಂಘದ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಬಂಟರ ಸಂಘದ ಹಿರಿಯರಾದ ಸಾಧುಶೆಟ್ಟಿ, ವಿಠ್ಠಲ್ ರೈ, ಜಗನ್ನಾಥ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. 50ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಶಾಲಾ ಬ್ಯಾಗ್ ಹಾಗೂ ಆಯ್ದ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.

ವಿದ್ಯಾರ್ಥಿ ವೇತನದ ದಾನಿ ಬೆಂಗಳೂರು ಅಮ್ಮಣ್ಣಿ ರಾಮಣಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ.ಪಿ. ಶೇಖರಶೆಟ್ಟಿ, ಬಂಟರ ಸಂಘದ ಅಧ್ಯಕ್ಷ ರಾ. ವೆಂಕಟೇಶ್ ಶೆಟ್ಟಿ, ಚಿಕ್ಕಮಗಳೂರು ಸಂಘದ ಅಧ್ಯಕ್ಷ ಪುರಂದರ ಶೆಟ್ಟಿ, ಯುವ ಬಂಟರ ವೇದಿಕೆ ಅಧ್ಯಕ್ಷ ಚಂದ್ರಶೇಖರ್ ರೈ, ಪ್ರಮುಖರಾದ ನಯನ ಶೆಟ್ಟಿ, ಸುಚಿತಾ ಹೆಗ್ಡೆ, ಸೌಮ್ಯ, ನಟರಾಜ್ ಶೆಟ್ಟಿ, ವಿದ್ಯಾಶೆಟ್ಟಿ, ಹೇಮಲತಾ ಪ್ರಭಾಕರ್, ಸನತ್ ಶೆಟ್ಟಿ ಮತ್ತಿತರರು ಹಾಜರಿದ್ದರು.