ನರೇಗಾ ಯೋಜನೆಯಲ್ಲಿ 386 ಅವ್ಯವಹಾರ ಪ್ರಕರಣ ದಾಖಲು

| Published : Mar 05 2024, 01:31 AM IST

ಸಾರಾಂಶ

ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳ ಕರ್ತವ್ಯಲೋಪ, ಬೇಜವಾಬ್ದಾರಿ ವರ್ತನೆ, ಕ್ರಮವಲ್ಲದ ಕ್ರಮ, ಅಸಮರ್ಪಕ ಕಾರ್ಯನಿರ್ವಹಣೆ, ಸ್ವಜನಪಕ್ಷಪಾತ, ಸೇವಾ ವಿಫಲತೆ, ಪಕ್ಷಪಾತ ಇತರೆ ದೂರು ಕುರಿತು ವಿಚಾರಣೆ ನಡೆಸಿ ತೀರ್ಮಾನ ಘೋಷಿಸುವ, ಸರ್ಕಾರಕ್ಕೆ ವರದಿ ಸಲ್ಲಿಸುವ ಅಧಿಕಾರ ಒಂಬುಡ್ಸ್ ಮನ್ ವ್ಯಾಪ್ತಿಯಲ್ಲಿದೆ.

ಕನ್ನಡಪ್ರಭ ವಾರ್ತೆ ರಾಮನಗರ

ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಯ ಅನುಷ್ಠಾನದಲ್ಲಿ 386 ಅವ್ಯವಹಾರ ಪ್ರಕರಣಗಳು ದಾಖಲಾಗಿದ್ದು, 366 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ.

ನರೇಗಾ ಯೋಜನೆಯಡಿ ನಾನಾ ಅಕ್ರಮ, ಕಳಪೆ ಗುಣಮಟ್ಟ, ನಿರುದ್ಯೋಗ ಭತ್ಯೆ, ವೇತನ ಪಾವತಿ ವಿಳಂಬ ಸೇರಿ ದಾಖಲಾದ 386ರ ಪೈಕಿ 59 ಪ್ರಕರಣಗಳು ಸಾಬೀತಾಗಿವೆ. ಒಂಬುಡ್ಸ್ ಮನ್ ರವರು ಆರೋಪ ಸಾಬೀತಾದ ಪ್ರಕರಣಗಳಲ್ಲಿ ಅಕ್ರಮಕ್ಕೆ ಸಂಬಂಧಪಟ್ಟವರಿಂದ 74,55,119 ರು.ಗಳನ್ನು ವಸೂಲಿ ಮಾಡುವಂತೆ ಆದೇಶ ನೀಡಿದ್ದಾರೆ.

ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ 42 ಪ್ರಕರಣಗಳು ದಾಖಲಾಗಿ 38 ಪ್ರಕರಣಗಳು ಇತ್ಯರ್ಥವಾಗಿದ್ದವು. 6 ಪ್ರಕರಣದಲ್ಲಿ 35,47,035 ರು. ವಸೂಲಾತಿಗೆ ಆದೇಶಿಸಲಾಗಿತ್ತು.

ಅದೇ ರೀತಿ 2020-21ನೇ ಸಾಲಿನಲ್ಲಿ ದಾಖಲಾದ 142 ಪ್ರಕರಣಗಳಲ್ಲಿ 12 ರಿಂದ 4,57,673 ರುಪಾಯಿ ಹಾಗೂ 2021-22ನೇ 65 ಪ್ರಕರಣಗಳ ಪೈಕಿ 64 ಇತ್ಯರ್ಥಗೊಂಡು 14 ಪ್ರಕರಣಗಳಿಂದ 18,28,082 ರು. ವಸೂಲಿಗೆ ಆದೇಶವಾಗಿತ್ತು.

2022-23ನೇ ಸಾಲಿನಲ್ಲಿ ದಾಖಲಾದ 84 ಪ್ರಕರಣಗಳಲ್ಲಿ 83 ವಿಲೇವಾರಿ ಮಾಡಲಾಗಿದ್ದು, ಆರೋಪ ಸಾಬೀತಾದ 21 ಪ್ರಕರಣಗಳಲ್ಲಿ 13,59,634 ರು. ಹಾಗೂ 2023-24 ನೇ ಸಾಲಿನ 53 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 6 ಪ್ರಕರಣಗಳಿಂದ 2,62,695 ರು. ವಸೂಲಾತಿಗೆ ಒಂಬುಡ್ಸ್ ಮನ್ ಆದೇಶ ನೀಡಿದ್ದರು.

ಆದರೆ, ಒಂಬುಡ್ಸ್ ಮನ್ ಆದೇಶ ಪ್ರಶ್ನಿಸಿ ಅಧಿಕಾರಿಗಳು ಮೇಲ್ಮನವಿ ಪ್ರಾಧಿಕಾರದ ಮೊರೆ ಹೋದ ಉದಾಹರಣೆಗಳು ಇವೆ.

ಯಾವ ರೀತಿ ಪ್ರಕರಣಗಳು?:

ಯೋಜನೆ ಅನುಷ್ಠಾನದಲ್ಲಿ ಅಧಿಕಾರಿಗಳ ಕರ್ತವ್ಯಲೋಪ, ಬೇಜವಾಬ್ದಾರಿ ವರ್ತನೆ, ಕ್ರಮವಲ್ಲದ ಕ್ರಮ, ಅಸಮರ್ಪಕ ಕಾರ್ಯನಿರ್ವಹಣೆ, ಸ್ವಜನಪಕ್ಷಪಾತ, ಸೇವಾ ವಿಫಲತೆ, ಪಕ್ಷಪಾತ ಇತರೆ ದೂರು ಕುರಿತು ವಿಚಾರಣೆ ನಡೆಸಿ ತೀರ್ಮಾನ ಘೋಷಿಸುವ, ಸರ್ಕಾರಕ್ಕೆ ವರದಿ ಸಲ್ಲಿಸುವ ಅಧಿಕಾರ ಒಂಬುಡ್ಸ್ ಮನ್ ವ್ಯಾಪ್ತಿಯಲ್ಲಿದೆ.

ಕಳಪೆ ಕಾಮಗಾರಿ, ಜೆಸಿಬಿ ಯಂತ್ರ ಬಳಸಿ ಕಾಮಗಾರಿ ಅನುಷ್ಠಾನ, ಸ್ವಂತ ಜಮೀನಿನಲ್ಲಿ ಸಮುದಾಯ ಕಾಮಗಾರಿ ಮಾಡಿರುವುದು, ಕಾಮಗಾರಿ ಅನುಷ್ಠಾನ ಮಾಡದೇ ಹಣ ಬಿಡುಗಡೆ ಮಾಡಿರುವ , ಕಡಿಮೆ ಅಳತೆಯ ಕಾಮಗಾರಿಗೆ ಹೆಚ್ಚು ಹಣ ಪಾವತಿ , ಅನುಮೋದಿಸಲ್ಪಡದ ಕಾಮಗಾರಿಗಳ ಅನುಷ್ಠಾನ ಹಾಗೂ ಒಂದೇ ಕಾಮಗಾರಿಗೆ ಎರಡು ಬಾರಿ ಬಿಲ್ ಮಾಡಿರುವ ಬಗ್ಗೆ ದೂರುಗಳು ಬರುತ್ತವೆ.

ಅರ್ಜಿ, ಮನವಿಗಳು, ಅರ್ಜಿವಿಲೇವಾರಿ, ಪಂಚಾಯಿತಿ ಸಂದಾಯಗಳು, ಮಾಸಿಕ ಸಭೆ, ಫಲಾನುಭವಿಗಳ ಆಯ್ಕೆ ಕುರಿತು ದೂರುಗಳನ್ನು ಸ್ವೀಕರಿಸಬಹುದಾಗಿದೆ. ದೂರನ್ನು ಘೋಷಿತ ಪ್ರಮಾಣ ಪತ್ರ, ನಿಗದಿತ ನಮೂನೆಯಲ್ಲಿ ಪಡೆದು ತನಿಖೆ ನಡೆಸುವ ಅಧಿಕಾರ ಒಂಬುಡ್ಸ್ ಮನ್ ಅವರಿಗೆ ನೀಡಲಾಗಿದೆ.

ವಿವೇಚನಾಧಿಕಾರ ಬಳಸಿ ಸರ್ಕಾರಕ್ಕೆ ವರದಿ ಸಲ್ಲಿಸಲು , ಅಂತಿಮ ಆದೇಶ ನೀಡುವ ಸಂಬಂಧ ವಿಶೇಷ ನ್ಯಾಯಾಧಿಕರವನ್ನು ಒಂಬುಡ್ಸ್ ಮನ್ ಗೆ ನೀಡಲಾಗಿದೆ.

ಗ್ರಾಮೀಣ ಅಭಿವೃದ್ಧಿ ಹಾಗೂ ಗ್ರಾಮೀಣರ ನಗರ ಪ್ರದೇಶ ವಲಸೆಯನ್ನು ತಪ್ಪಿಸಲು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣಾಭಿವೃದ್ಧಿಗೆ ರಚನಾತ್ಮಕ ಕಾರ್ಯಕ್ರಮವಾಗಿದೆ.

ಈ ಯೋಜನೆಯ ಅನುಷ್ಠಾನದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಮುಖ ಪಾತ್ರ ನಿರ್ವಹಿಸುತ್ತಾರೆ. ಹೆಚ್ಚಿನ ಜವಾಬ್ದಾರಿ ಮತ್ತು ಪ್ರಾಮಾಣಿಕತೆಯಿಂದ ಅಧಿಕಾರಿಗಳು ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕಿದೆ ಎನ್ನುತ್ತಾರೆ ಒಂಬುಡ್ಸ್ ಮನ್ ಚಲುವರಾಜು.

‘ರಾಮನಗರ ಜಿಲ್ಲೆಯಲ್ಲಿ ನರೇಗಾ ಅನುಷ್ಠಾನದ ವೇಳೆ ನಡೆದಿರುವ 386 ಅವ್ಯವಹಾರ ಪ್ರಕರಣಗಳ ಪೈಕಿ 58 ಪ್ರಕರಣಗಳಲ್ಲಿ ಆರೋಪ ಸಾಬೀತಾಗಿದೆ. ಆ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಇಲಾಖಾ ಕ್ರಮ ಜರುಗಿಸುವಂತೆ ಶಿಫಾರಸು ಮಾಡಲಾಗಿದೆ. ಇದುವರೆಗೂ ದುರುಪಯೋಗವಾಗಿದ್ದ 74.55 ಲಕ್ಷ ರು.ಗಳನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡಲು ಆದೇಶಿಸಲಾಗಿದ್ದು, ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಕ್ರಮ ವಹಿಸಬೇಕಿದೆ.’

- ಚಲುವರಾಜು,, ಒಂಬುಡ್ಸ್ ಮನ್ ,ರಾಮನಗರ ಜಿಪಂ.

ರಾಮನಗರ ಜಿಪಂ ಒಂಬುಡ್ಸ್ ಮನ್ ಆದೇಶಿಸಿರುವ ಪ್ರಕರಣಗಳ ವಿವರ

ವರ್ಷ, ದಾಖಲಾದ ಪ್ರಕರಣ, ವಿಲೇವಾರಿ ಪ್ರಕರಣ, ಸಾಬೀತಾದ ಪ್ರಕರಣ, ವಸೂಲಾತಿ ಮೊತ್ತ.

2019-20, 42, 38, 06, 35,47,035 ರು.2020-21, 142, 139, 12, 4,57,673 ರು.2021-22, 65, 64, 14, 18,28,082 ರು.2022-23, 84, 83, 21, 13,59,634 ರು.2023-24, 53, 42, 06, 2,62,695 ರು.

-------------------------------------------

ಒಟ್ಟು 386 366 59 74,55,119