ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತ ಸ್ನೇಹಿಯಾಗಿದ್ದು, ಠೇವಣಿ ಇಡುವುದು ಮತ್ತು ಹಣದ ಅವಶ್ಯಕತೆಯಿದ್ದವರು ಸಾಲ ಪಡೆದು ಸಕಾಲದಲ್ಲಿ ಪಾವತಿಸಿ ಆರ್ಥಿಕವಾಗಿ ಸದೃಢವಾಗಬೇಕು ಎಂದು ಸಂಘದ ಅಧ್ಯಕ್ಷ ಬಸನಗೌಡ ಪಾಟೀಲ ಹೇಳಿದರು.ಪಟ್ಟಣದ ಪಿಕೆಪಿಎಸ್ ಸಂಘದ ಆವರಣದಲ್ಲಿ ಶುಕ್ರವಾರ ಸಂಜೆ 4 ಗಂಟೆಗೆ ಪಿಕೆಪಿಎಸ್‌ನ 65ನೇ ವಾರ್ಷಿಕ ಸರ್ವಸಾಧಾರಣ ಸಭೆ ಉದ್ಘಾಟಿಸಿ ಮಾತನಾಡಿ, 2023-24ನೇ ಸಾಲಿನ ಅಂತ್ಯಕ್ಕೆ ಅಂದಾಜು ₹ 39,99,633 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಪ್ರಸಕ್ತ ವರ್ಷ ಶೇ.8 ಲಾಭಾಂಶ ವಿತರಿಸಲು ನಿರ್ಧರಿಸಲಾಗಿದೆ ಎಂದರು. ₹ 20,40,14169.93 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಸಂಘದಿಂದ ಒಟ್ಟು 1774 ಜನರಿಗೆ ₹13,75,83,706 ಕೋಟಿ ವಿವಿಧ ಸಾಲ ವಿತರಿಸಲಾಗಿದೆ ಎಂದು ತಿಳಿಸಿದರು.
ಮಹಾಲಿಂಗಪು ಭಾಗದ ಕೃಷಿ ಅಧಿಕಾರಿ ಟಿ.ಎಂ.ಡಾಗೆ ಮಾತನಾಡಿ, ಪಿಎಂ ಕಿಸಾನ್ ಸಹಾಯಧನ ಪಡೆಯುವ ಪ್ರತಿಯೊಬ್ಬ ರೈತರು ಇ ಕೆವೈಸಿ ಮಾಡಿಸಿಕೊಳ್ಳಬೇಕು. ರೈತ ಸೇವಾ ಕೇಂದ್ರದಲ್ಲಿ ಸುತ್ತಮುತ್ತಲಿನ 10 ಗ್ರಾಮಗಳ ರೈತರಿಗಾಗಿ ಮುಂಗಾರು ಹಂಗಾಮಿನ ಸೋಯಾಬೀನ್ ಮತ್ತು ಗೋವಿನಜೋಳ ಬೀಜಗಳು, ಪರಿಕರಗಳು ಲಭ್ಯವಿದ್ದು, ರೈತರು ಮಳೆಗಾಲ ಸ್ಥಿತಿ ನೋಡಿಕೊಂಡು ಬಿತ್ತನೆ ಮಾಡಬೇಕು ಎಂದರು.ಸಭೆಯಲ್ಲಿ 28ಕ್ಕೂ ಅಧಿಕ ವಿಷಯಗಳನ್ನು ಚರ್ಚಿಸಿ, ಸರ್ವಾನುಮತದ ಠರಾವು ಪಾಸ್ ಮಾಡಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಬಿಎ, ಬಿಕಾಂ, ಬಿಎಸ್ಸಿ ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಮತ್ತು ಜಾಣ ಬಡವಿದ್ಯಾರ್ಥಿಗಳು ಸೇರಿದಂತೆ ಸುಮಾರು 38 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯಧನದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ಇವರೊಂದಿಗೆ ಉತ್ತಮ ಗ್ರಾಹಕಾರದ ನೇತಾಜಿ ಶಿಂಧೆ, ಮಹಾಲಿಂಗ ಕೌಜಲಗಿ, ಗಿರಮಲ್ಲಪ್ಪ ಬರಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಸಿ ವಿತರಣೆ: ಸಭೆಯಲ್ಲಿ ಭಾಗವಹಿಸಿದ ಸದಸ್ಯರಿಗೆ ಪೇರು, ನಿಂಬು, ನುಗ್ಗೆಕಾಯಿ, ಅಶೋಕ ಗಿಡ ಸೇರಿ ವಿತರಿಸಿ ಪರಿಸರ ಪ್ರೇಮ ಮೆರೆದಿದ್ದು ವಿಶೇಷವಾಗಿತ್ತು. ಪಿಕೆಪಿಎಸ್ ಮುಖ್ಯಕಾರ್ಯನಿರ್ವಹಣಾಧಾಕಾರಿ ಈರಣ್ಣ ಬೆಟಗೇರಿ ಸ್ವಾಗತಿಸಿ ವಾರ್ಷಿಕ ವರದಿ ವಾಚಿಸಿದರು. ಉಪಾಧ್ಯಕ್ಷ ಮಹಾಲಿಂಗಪ್ಪ ಪೂಜಾರಿ, ನಿರ್ದೇಶಕ ಅಶೋಕಗೌಡ ಪಾಟೀಲ, ಈರಪ್ಪ ದಿನ್ನಿಮನಿ, ಶಿವಲಿಂಗ ಘಂಟಿ, ಸಂಗಪ್ಪ ಡೋಣಿ, ವಿಷ್ಣುಗೌಡ ಪಾಟೀಲ, ಮಲ್ಲಿಕಾರ್ಜುನ ಕುಳ್ಳೋಳ್ಳಿ, ಬಸವರಾಜ ಅರಳಿಕಟ್ಟಿ, ಹಣಮಂತ ಬುರುಡ, ಶಿವಪ್ಪ ನಾಗನೂರ, ಶೈಲಾ ಪವಾರ, ಸುರೇಖಾ ಸೈದಾಪುರ, ಡಿಸಿಸಿ ಬ್ಯಾಂಕಿನ ಪ್ರತಿನಿಧಿ ಸೇರಿದಂತೆ ಸಿಬ್ಬಂದಿ ಹಾಗೂ ನೂರಾರು ರೈತರು ಇದ್ದರು. ಮುಖ್ಯಕಾರ್ಯವಾಹಕ ಈರಣ್ಣ ಬೆಟಗೇರಿ ನಿರೂಪಿಸಿ ವಂದಿಸಿದರು.