ನ್ಯಾಯ ದೊರೆಯುವ ಜೊತೆಗೆ ಸಕಾಲದಲ್ಲಿ, ಸುಲಭವಾಗಿ ಸಿಗುವುದು ಅತ್ಯಂತ ಮುಖ್ಯ. ಈ ನಿಟ್ಟಿನಲ್ಲಿ ಹೊಸ ನ್ಯಾಯಾಲಯ ಮಹತ್ವದ ಪಾತ್ರ ವಹಿಸಲಿದೆ. ನ್ಯಾಯಾಂಗ ವ್ಯವಸ್ಥೆ ಯಶಸ್ಸಿನಲ್ಲಿ ವಕೀಲರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಹಿರಿಯ ಸಿವಿಲ್ ನ್ಯಾಯಾಲಯದ ಕಟ್ಟಡದಲ್ಲಿ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪ್ರತಿ ವಾರದಲ್ಲಿ ಒಂದು ದಿನ ಕಾರ್ಯ ನಿರ್ವಹಿಸಲು ಅಧಿಕೃತವಾಗಿ ಚಾಲನೆ ನೀಡಲಾಯಿತು.ಶ್ರೀರಂಗಪಟ್ಟಣದ ಮೂರನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಜೋಸ್ನ ಮಾತನಾಡಿ, ನ್ಯಾಯಾಲಯದ ಸ್ಥಾಪನೆಯು ಜನಸಾಮಾನ್ಯರ ನ್ಯಾಯದಾನದ ಹಕ್ಕನ್ನು ಮತ್ತಷ್ಟು ಬಲಪಡಿಸುತ್ತದೆ. ವಿಶೇಷವಾಗಿ ಬಡವರು, ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಹಾಗೂ ಸಮಾಜದ ದುರ್ಬಲ ವರ್ಗದವರಿಗೆ ನ್ಯಾಯದ ಬಾಗಿಲು ಇನ್ನಷ್ಟು ಹತ್ತಿರವಾಗಲಿದೆ ಎಂದರು.
ನ್ಯಾಯ ದೊರೆಯುವ ಜೊತೆಗೆ ಸಕಾಲದಲ್ಲಿ, ಸುಲಭವಾಗಿ ಸಿಗುವುದು ಅತ್ಯಂತ ಮುಖ್ಯ. ಈ ನಿಟ್ಟಿನಲ್ಲಿ ಹೊಸ ನ್ಯಾಯಾಲಯ ಮಹತ್ವದ ಪಾತ್ರ ವಹಿಸಲಿದೆ. ನ್ಯಾಯಾಂಗ ವ್ಯವಸ್ಥೆ ಯಶಸ್ಸಿನಲ್ಲಿ ವಕೀಲರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.ನ್ಯಾಯಾಧೀಶರು ಮತ್ತು ವಕೀಲರು ನ್ಯಾಯದಾನದ ಪ್ರಕ್ರಿಯೆಯಲ್ಲಿ ಪರಸ್ಪರ ಗೌರವ ಹಾಗೂ ಸಹಕಾರದಿಂದ ಕಾರ್ಯನಿರ್ವಹಿಸಬೇಕು. ವಕೀಲರು ಕಕ್ಷಿದಾರರ ಹಿತಾಸಕ್ತಿಯನ್ನು ಕಾಪಾಡುವ ಜೊತೆಗೆ ನ್ಯಾಯಾಲಯದ ಘನತೆ, ವೃತ್ತಿಯ ಗೌರವ ಮತ್ತು ನ್ಯಾಯಾಂಗದ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಎತ್ತಿಹಿಡಿಯಬೇಕು ಎಂದು ತಿಳಿಸಿದರು.
ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ನ್ಯಾ.ಸುನಿಲ್ ದತ್ ಯಾದವ್ ಮತ್ತು ಮಂಡ್ಯ ಜಿಲ್ಲಾ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸತ್ಯಾನಂದ ವಿಡಿಯೋ ಸಂವಾದದಲ್ಲಿ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ರಾಜ್ಯ ವಕೀಲರ ಪರಿಷತ್ ಉಪಾಧ್ಯಕ್ಷ ಶಿವಮೂರ್ತಿ, ನಿರ್ದೇಶಕ ಮಹದೇವ ಪ್ರಸಾದ್, ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ನಾಗೇಗೌಡ, ಉಪಾಧ್ಯಕ್ಷ ಪುರುಷೋತ್ತಮ, ಕಾರ್ಯದರ್ಶಿ ಎಸ್.ಜೆ.ಮಂಜೇಗೌಡ, ಜಂಟಿ ಕಾರ್ಯದರ್ಶಿ ದೊಡ್ಡಯ್ಯ, ಖಜಾಂಚಿ ಪ್ರಸನ್ನ ಕುಮಾರ್ ಸೇರಿದಂತೆ ಹಿರಿಯ ಕಿರಿಯ ವಕೀಲರು ನ್ಯಾಯಾಲಯದ ಸಿಬ್ಬಂದಿ ಸೇರಿ ಹಲವರು ಉಪಸ್ಥಿತರಿದ್ದರು.