ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ಗ್ರಾಮೀಣ ಭಾಗದ ರೈತಾಪಿ ವರ್ಗದವರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವ ಜತೆಗೆ ಆರ್ಥಿಕವಾಗಿ ಸದೃಢರಾಗುವುದು ಅಗತ್ಯ ಎಂದು ಶಾಸಕ ಎ. ಮಂಜು ತಿಳಿಸಿದರು. ತಾಲೂಕಿನ ಇಬ್ಬಡಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯದ 3ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೃಷಿಕರ ಮಕ್ಕಳಿಗೆ ಹೆಣ್ಣು ದೊರಕದ ಪರಿಸ್ಥಿತಿ ಏರ್ಪಟ್ಟಿರುವುದು ಅತ್ಯಂತ ನೋವಿನ ಸಂಗತಿ. ಭ್ರೂಣ ಹತ್ಯೆಯಂತಹ ಕೃತ್ಯದ ಪರಿಣಾಮ ಇಂದು ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗಿ ಮದುವೆಗೆ ಹೆಣ್ಣುಗಳು ದೊರಕದಂತಾಗಿದೆ, ಇಂತಹ ಕೃತ್ಯದ ವಿರುದ್ಧ ಜನರು ಇನ್ನಾದರೂ ಜಾಗೃತರಾಗಬೇಕು. ದೇವಾಲಯದ ವಾರ್ಷಿಕೋತ್ಸವ ಪ್ರಯುಕ್ತ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿರುವುದು ಇತರರಿಗೆ ಮಾದರಿಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಶಿಕ್ಷಣ ಮತ್ತು ಸಂಸ್ಕಾರ ಜೊತೆಯಾಗಿ ಸಾಗಿದಾಗ ಸಮಾಜಮುಖಿ ಕಾರ್ಯಗಳು ಸಾಕಾರಗೊಳ್ಳಲು ಸಾಧ್ಯ. ಗ್ರಾಮದ ಹಳೆಯ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಉತ್ತಮ ಕಾರ್ಯ ಎಂದರು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೊಸ ಕಟ್ಟಡ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಲಾಯಿತು. ಲೇಖಕರಾದ ಪ್ರೊ ಕೆ.ಪಿ.ಬಸವೇಗೌಡ, ಗೌಸ್ ಮೋದಿನ್ ಚಿಂಚರಕಿ, ಜಿ. ಪ್ರವೀಣ್ ಕುಮಾರ್ ಅವರ ಕೃತಿಗಳನ್ನು ಬಿಡುಗಡೆ ಮಾಡಲಾಯಿತು. ಅಂಗವಿಕಲರಿಗೆ ವೀಲ್ಹ್ ಚೇರ್ ವಿತರಣೆ, ಪ್ರಗತಿಪರ ಕೃಷಿಕರು, ನಿವೃತ್ತ ಸೈನಿಕರು, ಸಮಾಜ ಸೇವೆ, ಶಿಕ್ಷಣ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು. ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿ, ಅನ್ನದಾಸೋಹ ಏರ್ಪಡಿಸಲಾಗಿತ್ತು. ಗ್ರಾಪಂ ಅಧ್ಯಕ್ಷ ರವಿ, ಗ್ರಾಪಂ ಮಾಜಿ ಸದಸ್ಯ ಕೃಷ್ಣೇಗೌಡ, ಮುಖಂಡರಾದ ಮೂರ್ತಿ ಅರಸ್, ಶಿವನಂಜೇಗೌಡ, ಮುದ್ದೇಗೌಡ, ಶೈಲ, ಕಮಲಮ್ಮ, ಸಾವಿತ್ರಮ್ಮ ಹಾಗೂ ಗ್ರಾಮಸ್ಥರಿದ್ದರು.