ಸಾರಾಂಶ
ಮಲೆಮಹದೇಶ್ವರ ಬೆಟ್ಟದಲ್ಲಿ ಮೂರನೇ ಕಾರ್ತಿಕ ಸೋಮವಾರ ವಿಶೇಷ ಪೂಜಾ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಅರ್ಚಕ ಕೆ.ವಿ.ಮಾದೇಶ್ ಹಾಗೂ ತಂಡದವರಿಂದ ಸಂಭ್ರಮ ಸಡಗರದೊಂದಿಗೆ ಜರುಗಿತು.
ಕನ್ನಡಪ್ರಭ ವಾರ್ತೆ ಹನೂರು ಮಲೆಮಹದೇಶ್ವರ ಬೆಟ್ಟದಲ್ಲಿ ಮೂರನೇ ಕಾರ್ತಿಕ ಸೋಮವಾರ ವಿಶೇಷ ಪೂಜಾ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಅರ್ಚಕ ಕೆ.ವಿ.ಮಾದೇಶ್ ಹಾಗೂ ತಂಡದವರಿಂದ ಸಂಭ್ರಮ ಸಡಗರದೊಂದಿಗೆ ಜರುಗಿತು.
ಮಲೆಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆಯುತ್ತಿರುವ ಕಾರ್ತಿಕ ಮಾಸದ ಮೂರನೇ ಸೋಮವಾರ ವಿಶೇಷ ಪೂಜಾ ಕಾರ್ಯಕ್ರಮಗಳು ಮಹದೇಶ್ವರನಿಗೆ ಬೆಳಗಿನ ಜಾವ 3 ಗಂಟೆಗೆ ಮೊದಲನೇ ಪೂಜೆ ಪ್ರಯುಕ್ತ ವಿಶೇಷ ದ್ರವ್ಯಗಳಿಂದ ಜೇನುತುಪ್ಪ, ಹಾಲು, ಮೊಸರು ಸೇರಿದಂತೆ ವಿವಿಧ ಹಣ್ಣುಗಳಿಂದ ಶಾಸ್ತ್ರವಾಗಿ ಪೂಜೆ ನಡೆಯಿತು. ಬಿಲ್ವಾರ್ಚನೆ, ದೂಪದ ಆರತಿ, ಪುಷ್ಪಾರ್ಚನೆ ಮತ್ತು ಮಾದಪ್ಪನಿಗೆ ಪ್ರಿಯವಾದ ನೈವೇದ್ಯ ಅನ್ನ, ಮೆಣಸಿನ ಸಾಂಬಾರು, ವಡೆ, ಪಾಯಸ, ಒಬ್ಬಟ್ಟು ಇವುಗಳಿಂದ ವಿಶೇಷ ನೈವೇದ್ಯ ಮಾಡಲಾಗಿತ್ತು. ಜೊತೆಗೆ ಕಾರ್ತಿಕ ಮೂರನೇ ವಾರದ ಸೋಮವಾರ ದೇವಾಲಯದ ಪ್ರಾರಂಭದಲ್ಲಿ ಹುಲಿ ವಾಹನ ಉತ್ಸವ ಜರುಗಿತು. ಮಾದೇಶ್ವರನಿಗೆ ವಿಶೇಷ ಮಹಾಮಂಗಳಾರತಿ ಪೂಜಾ ಜರುಗಿತು.ಎಲ್ಲಿ ನೋಡಿದರೂ ಜನಸ್ತೋಮ:
3ನೇ ಕಾರ್ತಿಕ ಸೋಮವಾರ ನಡೆಯುತ್ತಿರುವ ಪೂಜಾ ಕಾರ್ಯಕ್ರಮದ ಪ್ರಯುಕ್ತ ರಾಜ್ಯದ ನಾನಾ ಭಾಗಗಳಿಂದ ಮಾದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಪೂಜೆಗೆ ಬಂದಿದ್ದು. ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ದೇವಾಲಯದ ಪೂಜಾ ಕಾರ್ಯಕ್ರಮಗಳ ಬಗ್ಗೆ ಹಾಗೂ ದಾಸೋಹ ವಿಶೇಷ ಪ್ರಸಾದದ ಬಗ್ಗೆ ಪರಿಶೀಲನೆ ನಡೆಸಿ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸಿದ್ದರು.ಉತ್ಸವಗಳು:
ಹರಕೆ ಹೊತ್ತ ಮಾದಪ್ಪನ ಭಕ್ತರಿಂದ ವಿಶೇಷವಾಗಿ ಬೆಳ್ಳಿ ರಥೋತ್ಸವ, ಹುಲಿವಾಹನ ಉತ್ಸವ, ಮಾದಪ್ಪನ ಉತ್ಸವ, ದೂಪದ ಸೇವೆ ಮಂಜನ ಸೇವೆ ಉರುಳು ಸೇವೆ ಮತ್ತು ಮುಡಿಸೇವೆ ಸೇರಿದಂತೆ ಹಲವು ಸೇವೆಗಳು ನಡೆದವು.ದಾಸೋಹ ಸೇವಾರ್ಥ:
ಮಧುಚಂದ್ರ ಮತ್ತು ಕುಟುಂಬ ವರ್ಗ, ಟಿ.ನರಸಿಪುರ ಗ್ರಾಮದ ಉದ್ಯಮಿಗಳಿಂದ ವಿಶೇಷ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ವೇಳೆ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಎಇ ರಘು ಮತ್ತು ದಾಸೋಹ ಅಧಿಕಾರಿ ಸ್ವಾಮಿ ದಾಸೋಹ ವ್ಯವಸ್ಥೆಯನ್ನು ಪರಿಶೀಲಿಸಿ ಭಕ್ತರಿಗೆ ದಾಸೋಹ ಬಡಿಸಿ ಶುಚಿ ರುಚಿ ಬಗ್ಗೆ ಪರಿಶೀಲನೆ ನಡೆಸಿದರು.ಸೂಕ್ತ ಬಂದೋಬಸ್ತ್:
ಬರುವ ಭಕ್ತಾದಿಗಳಿಗೆ ಯಾವುದೇ ಲೋಪದೋಷಗಳು ಉಂಟಾಗದಂತೆ ಕ್ರಮವಹಿಸುವ ನಿಟ್ಟಿನಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಪೊಲೀಸ್ ಇಲಾಖೆ ವತಿಯಿಂದ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡುವ ಮೂಲಕ ಸೂಕ್ತ ಕ್ರಮ ಕೈಗೊಂಡಿದೆ.