ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಶ್ರೀ ಅಖಿಲ ಹವ್ಯಕ ಮಹಾಸಭಾ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನೊಳಗೊಂಡ ತೃತೀಯ ವಿಶ್ವ ಹವ್ಯಕ ಸಮ್ಮೇಳನ ಡಿ.27, 28, 29ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಹಾಸಭಾ ಅಧ್ಯಕ್ಷ ಹಾಗೂ ಆಯುರ್ವೇದ ತಜ್ಞ ಡಾ.ಗಿರಿಧರ ಕಜೆ, ಸ್ವಾತಂತ್ರ್ಯಪೂರ್ವದಲ್ಲಿ 1943ರಲ್ಲಿ ಸ್ಥಾಪನೆಯಾದ ಶ್ರೀ ಅಖಿಲ ಹವ್ಯಕ ಮಹಾಸಭಾ ಇದೀಗ 81ನೇ ವರ್ಷದಲ್ಲಿದೆ. ಇಷ್ಟು ವರ್ಷಗಳಲ್ಲಿ ಎರಡು ಬಾರಿ ವಿಶ್ವ ಹವ್ಯಕ ಸಮ್ಮೇಳನ ನಡೆದಿದ್ದು, ಇದೀಗ ತೃತೀಯ ಸಮ್ಮೇಳನಕ್ಕೆ ಸರ್ವ ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದರು.
ಅರಮನೆ ಮೈದಾನದ ಒಟ್ಟು 12 ಎಕರೆಯಲ್ಲಿ ಹರಡಿರುವ ಗ್ರ್ಯಾಂಡ್ ಕ್ಯಾಸೆಲ್ ಮತ್ತು ರಾಯಲ್ ಸೆನೆಟ್ ಮಹಾಸಭಾಂಗಣದಲ್ಲಿ ಮೂರು ದಿನಗಳ ಕಾಲ ವಿವಿಧ ಸಭೆ, ಸಮಾರಂಭಗಳು, ಗೋಷ್ಠಿಗಳು, ಗಾನ, ನರ್ತನ, ಭೋಜನಗಳು ಮೇಳೈಸಲಿವೆ. ಕರ್ನಾಟಕದ ಮಲೆನಾಡು, ಕರಾವಳಿಯಲ್ಲಿ ನೆಲೆನಿಂತ ಹವ್ಯಕರು ಮಾತ್ರವಲ್ಲದೆ, ದೇಶ ವಿದೇಶಗಳಿಂದ ಸಹಸ್ರಾರು ಮಂದಿ ಸಮುದಾಯ ಬಾಂಧವರು ಆಗಮಿಸಲಿದ್ದಾರೆ. ಮೂರೂ ದಿನಗಳ ಕಾಲ ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಮಾರ್ಗದರ್ಶನ ನೀಡಲಿದ್ದಾರೆ ಎಂದು ಹೇಳಿದರು.ಸಮ್ಮೇಳನದಲ್ಲಿ ಏನೇನು?:
ಸಮ್ಮೇಳನದಲ್ಲಿ ಹಳ್ಳಿಕಾರ್, ಗಿರ್, ಕಾಂಕ್ರೀಜ್, ಮಲೆನಾಡು ಗಿಡ್ಡ ಇತ್ಯಾದಿ ಭಾರತೀಯ ಗೋತಳಿಗಳ ಪ್ರದರ್ಶನ, ಆಕಳಿಗೆ ಸ್ವಯಂ ಹುಲ್ಲು ತಿನ್ನಿಸುವ, ಮಕ್ಕಳಿಗೆ ಕರುಗಳೊಂದಿಗೆ ಬಾಲಲೀಲೆಗಳಿಗೆ ಅವಕಾಶ ಸಿಗಲಿದೆ. ಹವ್ಯಕರ ಅಡಕೆ ಕೃಷಿಯ ತರಾವರಿ ಉಪಕರಣಗಳು, ಯಂತ್ರಗಳನ್ನೊಳಗೊಂಡ ಸಮಗ್ರ ವಸ್ತು ಪ್ರದರ್ಶನ ಇರಲಿದೆ. ಗಾಯತ್ರಿ ಮಹಾಮಂತ್ರದ ಕುರಿತಾದ ಸಮಗ್ರ ದರ್ಶನ, ಪ್ರತಿನಿತ್ಯ ಲೋಕ ಕಲ್ಯಾಣಕ್ಕಾಗಿ ಹವ್ಯ ಯಜ್ಞ- ಗಣಪತಿ ಹವನ ಹಾಗೂ ಅರುಣ ಮಂತ್ರ ಹವನ, ಶ್ರೀ ಸೂಕ್ತ ಹವನ ಹಾಗೂ ರುದ್ರ ಹವನ, ಧನ್ವಂತರಿ ಹವನ ಆಯೋಜಿಸಲಾಗಿದೆ. ಸತ್ಯಗಣಪತಿ ಪೂಜೆ, ದುರ್ಗಾಪೂಜೆ, ಸತ್ಯನಾರಾಯಣ ಪೂಜೆ, ಶಿವಪೂಜೆ, ಧನ್ವಂತರಿ ಪೂಜೆಗಳು ನಡೆಯಲಿವೆ. ಭಕ್ತಿ ಭಜನೆ, ಸಾಮೂಹಿಕ ಭಗವದ್ಗೀತಾ ಪಠಣ, ಯಾಗ ಮಂಡಲ ಕಲಾ ಪ್ರದರ್ಶನ ಇರಲಿದೆ ಎಂದು ವಿವರಿಸಿದರು.8 ಗೋಷ್ಠಿ, 18 ವಿಷಯ ಚಿಂತನ:
ಹವ್ಯಕ ಸಮಾಜಕ್ಕೆ ಸಂಬಂಧಿತ ವಿಚಾರಗಳು, ಸಮುದಾಯದ ವಿವಿಧ ಸಮಸ್ಯೆಗಳ ಪರಾಮರ್ಶೆ, ಚಿಂತನ ಮಂಥನಕ್ಕೆ 8 ಗೋಷ್ಠಿಗಳನ್ನು ಆಯೋಜಿಸಲಾಗಿದ್ದು, 18 ವಿಚಾರಗಳ ಕುರಿತು ತತ್ಸಂಬಂಧಿ ವಿಷಯ ತಜ್ಞರು ವಿಚಾರ ವಿನಿಮಯ ಮಾಡಲಿದ್ದಾರೆ.ಯಕ್ಷ, ಕಲಾ, ನಾಟ್ಯ ವೈಭವ:
ತೆಂಕುತಿಟ್ಟು, ಬಡಗುತಿಟ್ಟುಗಳ ಯಕ್ಷಗಾನ ವೇಷಭೂಷಣಗಳ ಪ್ರದರ್ಶನ, ಅವುಗಳ ಸವಿಸ್ತಾರ ಮಾಹಿತಿ, ಸಮುದಾಯದ ಶ್ರೇಷ್ಠ ಯಕ್ಷಕಲಾ ಸಾಧಕರ ಕಲಾವೈವಿಧ್ಯ ಅನಾವರಣವಾಗಲಿದೆ. ಪ್ರಸಿದ್ಧ ಕಲಾವಿದರಿಂದ ನಗರ ಸಂಕೀರ್ತನೆ, ನೃತ್ಯ- ಗಾನದ ವಿಶಿಷ್ಟ ಸಮ್ಮಿಲನ ‘ನರ್ತನ ಸಂಕೀರ್ತನ’ ನಡೆಯಲಿದೆ. ನಾಡಿನ ಹೆಸರಾಂತ ಹವ್ಯಕ ಕಲಾವಿದರು ಶಾಸ್ತ್ರೀಯ ಸಂಗೀತ, ಸುಗಮ ಸಂಗೀತದ ರಸಧಾರೆ ಹರಿಸಲಿದ್ದಾರೆ. ಅಲ್ಲದೆ, ವಿವಿಧ ಬಗೆಯ ನೃತ್ಯ ಪ್ರಾಕಾರಗಳ ಪ್ರದರ್ಶನ, ನಾಟ್ಯೋತ್ಸವ ಮನಸೂರೆಗೊಳ್ಳಲಿದೆ. ಜತೆಗೆ ತಬಲಾ, ಮೃದಂಗ, ವೀಣೆ, ಪಿಟೀಲು, ಹಾರ್ಮೋನಿಯಂ ವಾದ್ಯ ಪ್ರಾಕಾರಗಳ ನಾದಲೋಕ ಅನಾವರಣವಾಗಲಿದೆ ಎಂದರು.ವಿವಿಧ ಸ್ಪರ್ಧೆಗಳು:
ಹವ್ಯಕ ಸಂಸ್ಕೃತಿಯ ಛಾಯಾಚಿತ್ರ ಪ್ರದರ್ಶನ ಹಾಗೂ ಸ್ಪರ್ಧೆ, ಹವ್ಯಕ ಸಂಪ್ರದಾಯದ ಚಿತ್ರಕಲಾ ಸ್ಪರ್ಧೆ, ರಂಗೋಲಿ ಕಲಾಸ್ಪರ್ಧೆ, ಹೂಕುಂಡ- ಇಕಬಾನ ಕಲಾಸ್ಪರ್ಧೆ, ವೈವಿಧ್ಯಮಯ ಕರಕುಶಲ ವಸ್ತು ಪ್ರದರ್ಶನ ಸ್ಪರ್ಧೆ ಹಾಗೂ ಅವುಗಳ ಮಾರಾಟ, ಹವ್ಯಕರ ಮನೆಗಳಲ್ಲಿ ಹಳೆ ಕಾಲದಲ್ಲಿ ಉಪಯೋಗಿಸುತ್ತಿದ್ದ ಕಡೆಗೋಲು, ಕೆರೆಮಣೆ, ಸೌಟುಗಳು, ಕತ್ತಿಗಳು, ಉಡುಚಾಪೆ, ಕಡಕಲಮಣೆ ಸೇರಿದಂತೆ ವಿವಿಧ ಪಾರಂಪರಿಕ ವಸ್ತುಗಳ ಪ್ರದರ್ಶನ ಮತ್ತು ಸ್ಪರ್ಧೆ, ಹವ್ಯಕ ಸಂಸ್ಕೃತಿಯನ್ನು ಬಿಂಬಿಸುವ ಸೆಲ್ಫಿ ಪಾಯಿಂಟ್‌ಗಳು ಈ ಸಮ್ಮೇಳನದ ವಿಶೇಷತೆಗಳಾಗಿವೆ ಎಂದು ಡಾ.ಗಿರಿಧರ ಕಜೆ ತಿಳಿಸಿದರು.ಹವ್ಯಕ ಪಾಕೋತ್ಸವ:
ಹವ್ಯಕರ ಆಹಾರ ವೈವಿಧ್ಯವನ್ನು ಪರಿಚಯಿಸುವ ಹವ್ಯಕ ಪಾಕೋತ್ಸವ ಸಮ್ಮೇಳನದ ಇನ್ನೊಂದು ವಿಶೇಷತೆ. ಕನ್ನಡದ ಪ್ರಥಮ ನಾಟಕ ಎಂದೇ ಖ್ಯಾತವಾದ ಹವ್ಯಕ ನಾಟಕ ‘ಇಗ್ಗಪ್ಪ ಹೆಗಡೆಯ ವಿವಾಹ ಪ್ರಹಸನ’ವನ್ನು ಪ್ರದರ್ಶಿಸಲಾಗುವುದು. ಸಮ್ಮೇಳನದಲ್ಲಿ ವಿಶೇಷವಾಗಿ 567 ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲು ತೀರ್ಮಾನಿಸಲಾಗಿದೆ.ಪ್ರವೇಶ ಶುಲ್ಕ ಇಲ್ಲ. ಮೂರೂ ದಿನಗಳ ಕಾಲ ನಾಲ್ಕು ಹೊತ್ತಿನ ಉಚಿತ ಊಟೋಪಚಾರದ ವ್ಯವಸ್ಥೆಯಿದೆ. ಸಮ್ಮೇಳನದ ಯಶಸ್ಸಿಗೆ 1008 ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.
ಪ್ರಮುಖರಾದ ಸರವು ರಮೇಶ್ ಭಟ್, ಗೀತಾದೇವಿ ಸಿ., ಸುಮಾ ರಮೇಶ್, ಉದಯಶಂಕರ ಭಟ್ ಇದ್ದರು.----------
1.5 ಲಕ್ಷ ಜನರ ಮಹಾಸಮಾಗಮಸಮ್ಮೇಳನದ ವಿಶೇಷತೆಯಾಗಿ 6000 ಹವ್ಯಕ ಪುಸ್ತಕಗಳ ಪ್ರದರ್ಶನ, 300ಕ್ಕೂ ಅಧಿಕ ಸುಪ್ರಸಿದ್ಧ ಕಲಾವಿದರಿಂದ ಸಾಂಸ್ಕೃತಿಕ ವೈಭವ, 108 ಸಾಂಸ್ಕೃತಿಕ ಕಾರ್ಯಕ್ರಮಗಳು, 108 ವರ್ಷಗಳ ಪಂಚಾಂಗದ ಪ್ರದರ್ಶನ, 100ಕ್ಕೂ ಅಧಿಕ ಹವ್ಯಕ ಖಾದ್ಯಗಳ ಸ್ವಾದ, 81 ಕರಕುಶಲ ವಸ್ತುಗಳ ಮಳಿಗೆಗಳು, 81 ವಾಣಿಜ್ಯ ಮಳಿಗೆಗಳು, 8 ಗೋಷ್ಠಿಗಳಲ್ಲಿ 18 ವಿಚಾರಗಳ ಚಿಂತನೆ ಮಂಥನ, ಶತ ಕಂಠಗಳಿಂದ ಭಗವದ್ಗೀತೆ ಪಠಣ, ನೂರಾರು ಮಾತೆಯರಿಂದ ಭಕ್ತಿಭಜನೆ, 81 ಹವಿ ತಿನಿಸುಗಳ ಮಾರಾಟ, ಸಾವಿರದ ರಕ್ತದಾನ, 100ಕ್ಕೂ ಅಧಿಕ ಪಾರಂಪರಿಕ ವಸ್ತುಗಳ ಪ್ರದರ್ಶನ, 108 ಬೈಕ್‌ಗಳ ರ್‍ಯಾಲಿ, ಸಹಸ್ರಾರು ಹೆಜ್ಜೆಗಳ ವಾಕಥಾನ್, ಒಟ್ಟಾರೆಯಾಗಿ 1.5 ಲಕ್ಷಕ್ಕೂ ಅಧಿಕ ಜನರ ಮಹಾಸಮಾಗಮ ನಡೆಯಲಿದೆ.