ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ತಾಲೂಕಿನಲ್ಲಿ ಕೆದಕಿದಷ್ಟು ವಕ್ಫ್ ಆಸ್ತಿಯು ಹಿಗ್ಗುತ್ತಲಿದ್ದು, ಈಗ ತಾಲೂಕಿನ ಬಳ್ಳಿಗೇರಿ, ಮಲಾಬಾದ, ಅನಂತಪುರ ಗ್ರಾಮಗಳ 125 ರೈತರ ಸುಮಾರು 500ಕ್ಕೂ ಅಧಿಕ ಎಕರೆ ಮುಸ್ಲಿಂ ರೈತರ ಆಸ್ತಿ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ದಾಖಲಾಗಿರುವುದು ಬೆಳಕಿಗೆ ಬಂದಿದೆ.ರಾಜ್ಯದಲ್ಲಿ ಕೋಲಾಹಲ ಸೃಷ್ಟಿಸಿರುವ ವಕ್ಫ್ ಆಸ್ತಿ ವಿವಾದದಿಂದ ಪಹಣಿ ತೆಗೆಸಿ ನೋಡಿದಾಗ ಇದು ಬೆಳಕಿಗೆ ಬಂದಿದ್ದು, ಭಾನುವಾರ ರೈತರು ಜಮೀನು ದಾಖಲೆಗಳೊಂದಿಗೆ ಹಿರಿಯ ವಕೀಲ ಸಂಪತ್ತಕುಮಾರ ಶೆಟ್ಟಿ ಅವರನ್ನು ಭೇಟಿಯಾಗಿ ಅಳಲು ತೊಡಿಕೊಂಡಿದ್ದಾರೆ. ಸಮಗ್ರ ದಾಖಲೆಗಳ ಅಧ್ಯಯನದ ನಂತರ ಸೋಮವಾರ ಅನಂತಪುರ ಸೇರಿ ಸುತ್ತ ಮುತ್ತಲಿನಲ್ಲಿ ಗ್ರಾಮದ ವಕ್ಫ್ ಆಸ್ತಿ ಎಂದು ದಾಖಲಾಗಿರುವ ರೈತರ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆ ಬಗ್ಗೆ ಚರ್ಚಿಸೋಣ ಎಂದು ವಕೀಲರು ಸಲಹೆ ನೀಡಿದ್ದು, ಸೋಮವಾರ ಸಂಜೆ ಅನಂಪುರ ಗ್ರಾಮದಲ್ಲಿ ವಕ್ಫ್ ಸಂತ್ರಸ್ತರ ಸಭೆ ನಡೆಸಲು ರೈತರು ನಿರ್ಧರಿಸಿದ್ದಾರೆ.
ರೈತರ ಪರವಾಗಿ ರೈತ ಮುಖಂಡರಾದ ಮಹಿಬೂಬ ಮುಲ್ಲಾ ಗುಲಾಬ ಮುಲ್ಲಾ ಜಂಟಿಯಾಗಿ ಮಾತನಾಡಿ, ಸೋಮವಾರ ಹಿರಿಯ ವಕೀಲ ಸಂಪತ್ತಕುಮಾರ ಶೆಟ್ಟಿ ನೈತೃತ್ವದಲ್ಲಿ ವಕ್ಫ್ ಬೋರ್ಡನಿಂದ ತೊಂದರೆಗೊಳಗಾದ ರೈತರ ಸಭೆ ಕರೆದಿದ್ದೇವೆ. ಈ ವಿಷಯ ಗಂಭೀರವಾಗಿ ಪರಿಗಣಿಸಿದ್ದು, ಪಕ್ಷಾತೀತ, ಜಾತ್ಯತೀತವಾಗಿ ನ್ಯಾಯ ಸಿಗುವವರೆಗೆ ಹೋರಾಟ ಮಾಡಲು ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.ಗೊಂದಲ ಸೃಷ್ಟಿಸಿದ ಸಿಎಂ ಆದೇಶ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊರಡಿಸಿದ ಆದೇಶದಲ್ಲಿ ವಕ್ಪ್ ಸಚಿವ ಜಮೀರ್ ಹಮ್ಮದಖಾನ್ ಅವರ ಆದೇಶದಂತೆ ಕಳುಹಿಸಿದ ನೋಟಿಸ್ ಮಾತ್ರ ಹಿಂಪಡೆದಿದ್ದಾರೆ. ಅವರ ನಿರ್ದೇಶನದ ಬಳಿಕ ನೋಟಿಸ್ ನೀಡಿದ್ದರೆ ಮಾತ್ರ ವಕ್ಫ್ ಹೆಸರು ತೆಗೆಯಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಆದರೆ 1018 ರಿಂದ 2005ರವರೆಗೆ ದಾಖಲೆ ಆದ ಆಸ್ತಿಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಇದು ಸಿಎಂ ಭರವಸೆ ಬಳಿಕವೂ ರೈತರು ಆತಂಕದಲ್ಲೇ ಇದ್ದಾರೆ.ಅಥಣಿ ತಾಲೂಕಿನ ವಕ್ಫ್ ಆಸ್ತಿ ದಾಖಲಾದ ರೈತರು ಕರೆದ ಸಭೆಯಲ್ಲಿ ಭಾಗವಹಿಸುತ್ತೇನೆ. ತೀವ್ರ ಹೋರಾಟ ಮಾಡಿ ಸರ್ಕಾರದ ಮೇಲೆ ಒತ್ತಡ ತರುವವರೆಗೆ ಈ ಸಮಸ್ಯೆ ಬಗೆಹರಿಯುವುದಿಲ್ಲ. ಮುಖ್ಯಮಂತ್ರಿಗಳ ಆದೇಶ ಮೂಗಿಗೆ ತುಪ್ಪ ವರೆಸುವ ತಂತ್ರವಾಗಿದೆ. ಆದರೆ ಈ ತುಪ್ಪ ರೈತನ ಬಾಯಿಗೆ ಬರುವುದಿಲ್ಲ.
-ಸಂಪತ್ತಕುಮಾರ ಶೆಟ್ಟಿ ವಕೀಲ