ಈ ಬಾರಿಯ ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ೪೧೨೪ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರತಿ ವರ್ಷವೂ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆಯಲ್ಲಿ ಶೇ.೦.೫ರಷ್ಟು ಹೆಚ್ಚಳವಾಗುತ್ತಿದೆ. ಈ ಬಾರಿಯ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆ ಮೇಲೆ ಹದ್ದಿನ ಕಣ್ಣಿಡಲು ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ನೂರಾರು ಸೀಸಿ ಕ್ಯಾಮೆರಾ, ಡ್ರೋನ್‌ಗಳ ಕಣ್ಗಾವಲು ಇರಿಸಲಾಗಿದೆ.
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಈ ಬಾರಿಯ ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ೪೧೨೪ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರತಿ ವರ್ಷವೂ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆಯಲ್ಲಿ ಶೇ.೦.೫ರಷ್ಟು ಹೆಚ್ಚಳವಾಗುತ್ತಿದೆ. ಈ ಬಾರಿಯ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆ ಮೇಲೆ ಹದ್ದಿನ ಕಣ್ಣಿಡಲು ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ನೂರಾರು ಸೀಸಿ ಕ್ಯಾಮೆರಾ, ಡ್ರೋನ್‌ಗಳ ಕಣ್ಗಾವಲು ಇರಿಸಲಾಗಿದೆ.
೨೦೨೪ರಲ್ಲಿ ನಾಗಮಂಗಲ ಪಟ್ಟಣದಲ್ಲಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ವೇಳೆ ಕೋಮುಗಲಭೆ ಸೃಷ್ಟಿಯಾಗಿದ್ದರೆ, ೨೦೨೫ರಲ್ಲಿ ಮದ್ದೂರಿನಲ್ಲಿ ಗಲಭೆ ಮರುಕಳಿಸಿತ್ತು. ೨೦೨೬ರಲ್ಲಿ ಗಲಭೆ ನಡೆದಿದ್ದ ಸ್ಥಳವಾದ ನಾಗಮಂಗಲದಲ್ಲಿ ಭಾವೈಕ್ಯತೆಯ ಗಣೇಶೋತ್ಸವ ನಡೆದಿರುವುದು ಉತ್ತಮ ಬೆಳವಣಿಗೆಯಾಗಿದೆ. ಅದೇ ರೀತಿ ಮದ್ದೂರಿನಲ್ಲಿ ೧೦೮ ಸಾಮೂಹಿಕ ಗಣೇಶಮೂರ್ತಿಗಳ ವಿಸರ್ಜನಾ ಮೆರವಣಿಗೆಯೂ ಶಾಂತಿಯುತವಾಗಿ ನಡೆದಿರುವುದು ಸಮಾಧಾನವನ್ನು ತಂದಿದೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಕ್ಕಾಂ:
ಗಣೇಶಮೂರ್ತಿಗಳ ಮೆರವಣಿಗೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ ನೇತೃತ್ವದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ವಿಸರ್ಜನಾ ಮೆರವಣಿಗೆ ಸ್ಥಳದಲ್ಲಿ ಖುದ್ದು ಹಾಜರಿದ್ದು ಭದ್ರತೆಯ ಮೇಲುಸ್ತುವಾರಿ ವಹಿಸುತ್ತಿದ್ದಾರೆ.ಮದ್ದೂರಿನಲ್ಲಿ ನಡೆದ ಗಣೇಶಮೂರ್ತಿಗಳ ಮೆರವಣಿಗೆ ಸಮಯದಲ್ಲೂ ಮಸೀದಿಗಳ ಎದುರು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕರ್ಪೂರ ಹಚ್ಚಿ, ಪಟಾಕಿ ಸಿಡಿಸುವ ಪ್ರಯತ್ನ ನಡೆಸಿದರೂ ಅದಕ್ಕೆ ತಡೆಯೊಡ್ಡಿ ಸಮಾಧಾನದಿಂದ ಮುನ್ನಡೆಸಿದರು. ಪೊಲೀಸರ ಕ್ರಮವನ್ನು ಖಂಡಿಸಿ ಪ್ರತಿಭಟನೆಗಿಳಿದ ಹಿಂದೂ ಕಾರ್ಯಕರ್ತರ ಮನವೊಲಿಸಿ ತೆರಳುವಂತೆ ಮಾಡಿದರು.
ಸೀಸಿ ಕ್ಯಾಮರಾ, ಡ್ರೋನ್‌ಗಳ ಹದ್ದಿನಕಣ್ಣು:ಸಾಮೂಹಿಕ ಗಣೇಶಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆಯುವ ಸ್ಥಳಗಳಲ್ಲಿ ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ನೂರಾರು ಸೀಸಿ ಕ್ಯಾಮೆರಾ, ಡ್ರೋನ್‌ಗಳ ಅಳವಡಿಸಲಾಗುತ್ತಿದೆ. ಭಾನುವಾರ ನಾಗಮಂಗಲದಲ್ಲಿ ನಡೆಯುವ ಸಾಮೂಹಿಕ ಗಣೇಶಮೂರ್ತಿಗಳ ವಿಸರ್ಜನಾ ಮೆರವಣಿಗೆ ವೇಳೆ ೪೦ ಕಡೆಗಳಲ್ಲಿ ೧೨೦ ಸೀಸಿ ಕ್ಯಾಮೆರಾ, ಡ್ರೋನ್ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಎಲ್ಲಾ ಕಡೆಗಳಿಂದಲೂ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ಸೆರೆಯಾಗುವಂತೆ ಅಳವಡಿಸಲಾಗಿದೆ. ಶಾಂತಿಗೆ ಭಂಗ ಉಂಟುಮಾಡುವ ಚಟುವಟಿಕೆಗಳು ನಡೆದಲ್ಲಿ ಅದು ಕ್ಮಾಮೆರಾಗಳ ಹದ್ದಿನ ಕಣ್ಣಿನಲ್ಲಿ ಸೆರೆಯಾಗುವಂತೆ ವ್ಯವಸ್ಥಿತವಾಗಿ ಅಳವಡಿಸಿರುವುದು ಈ ಬಾರಿಯ ಒಂದು ವಿಶೇಷವಾಗಿದೆ.
ಹೊರಗಿನಿಂದ ಬರುವವರ ಮೇಲೆ ನಿಗಾ:ನಾಗಮಂಗಲ ಮತ್ತು ಮದ್ದೂರು ಗಲಭೆ ಪ್ರಕರಣಗಳಿಂದ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆ ವೇಳೆ ಹೊರಗಿನಿಂದ ಬರುವವರ ಮೇಲೂ ನಿಗಾ ವಹಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಮೆರವಣಿಗೆಯ ಸಾಗುವ ಹಾದಿಯ ಸಂಪೂರ್ಣ ಚಿತ್ರಣವನ್ನು ಆಯೋಜಕರಿಂದ ಪಡೆದುಕೊಂಡಿದ್ದಾರೆ. ಮಸೀದಿ, ದರ್ಗಾಗಳ ಮುಂದೆ ಮೆರವಣಿಗೆ ಸಾಗುವುದಕ್ಕೆ ಯಾವುದೇ ಅಡ್ಡಿಪಡಿಸಿಲ್ಲ. ಆ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆಯನ್ನು ನಿಯೋಜಿಲಾಗಿದೆ. ಯಾರೂ ಸಹ ಪ್ರಚೋದನೆಗೆ ಒಳಗಾಗದಂತೆ, ಶಾಂತಿಗೆ ಭಂಗ ತರುವ ಚಟುವಟಿಕೆಗಳನ್ನು ನಡೆಸದಂತೆ ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದಾರೆ.
ಗಲಭೆ ನಡೆದ ಸ್ಥಳಗಳಾಗಿದ್ದ ಮದ್ದೂರು ಮತ್ತು ನಾಗಮಂಗಲ ಹೊರತುಪಡಿಸಿದರೆ ಶ್ರೀರಂಗಪಟ್ಟಣ ಸ್ವಲ್ಪ ಮಟ್ಟಿಗೆ ಸೂಕ್ಷ್ಮ ಪ್ರದೇಶವಾಗಿದೆ. ಉರುಸ್ ಹಾಗೂ ಹನುಮ ಸಂಕೀರ್ತನ ಯಾತ್ರೆ ನಡೆಯುವ ಸಮಯದಲ್ಲಿ ಬಿಗುವಿನ ವಾತಾವರಣವಿರುತ್ತದೆ. ಅಲ್ಲಿಯೂ ಸಹ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ. ಉಳಿದ ತಾಲೂಕುಗಳಲ್ಲಿಯೂ ಕೋಮುಘರ್ಷಣೆ ಪ್ರಕರಣಗಳು ಮರುಕಳಿಸದಂತೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪೊಲೀಸ್ ವಿಭಾಗವಾರು ಗಣೇಶ ಮೂರ್ತಿ ಪ್ರತಿಷ್ಠಾಪನೆವಿಭಾಗ ಸಂಖ್ಯೆ
ಮಳವಳ್ಳಿ ೧೦೦೧ಮಂಡ್ಯ ೮೬೨
ನಾಗಮಂಗಲ ೧೧೬೬ಶ್ರೀರಂಗಪಟ್ಟಣ ೧೦೯೫
ಒಟ್ಟು ೪೧೨೪ಸಾಮೂಹಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಶಾಂತಿಯುತವಾಗಿ ನಡೆಯುವಂತೆ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಶಾಂತಿಗೆ ಭಂಗ ತರುವ ಚಟುವಟಿಕೆಗಳು ನಡೆಯದಂತೆ ಹಿಂದೂ-ಮುಸ್ಲಿಂ ಮುಖಂಡರೊಂದಿಗೆ ಶಾಂತಿಸಭೆ ನಡೆಸಿದ್ದೇವೆ. ಮದ್ದೂರಿನಲ್ಲಿ ಶಾಂತಿಯುತವಾಗಿ ಗಣೇಶಮೂರ್ತಿಗಳ ವಿಸರ್ಜನಾ ಮೆರವಣಿಗೆ ನಡೆದಿದೆ. ನಾಗಮಂಗಲದಲ್ಲೂ ನಾಳಿನ ಮೆರವಣಿಗೆಗೆ ಸೀಸಿ ಕ್ಯಾಮೆರಾಗಳು, ಡ್ರೋನ್‌ಗಳ ಕಣ್ಗಾವಲು ಇಟ್ಟಿದ್ದೇವೆ. ಈಗಾಗಲೇ ಅಲ್ಲಿ ಭಾವೈಕ್ಯತೆಯ ಗಣೇಶೋತ್ಸವ ನಡೆದು ಹೊಸ ವಾತಾವರಣ ಸೃಷ್ಟಿಯಾಗಿದೆ. ಆದರೂ ಎಲ್ಲೆಡೆ ಬಿಗಿಭದ್ರತೆಯೊಂದಿಗೆ ಶಾಂತಿಯುತ ಗಣೇಶ ವಿಸರ್ಜನೆಗೆ ಪಣ ತೊಟ್ಟಿದ್ದೇವೆ.
- ಡಾ.ವಿ.ಜೆ.ಶೋಭಾರಾಣಿ, ಜಿಲ್ಲಾ ಪೊಲೀಸ್ ಅಧೀಕ್ಷಕರು, ಮಂಡ್ಯ