ಸಾರಾಂಶ
ಮುಂದಿನ ಎರಡು ವರ್ಷಗಳಲ್ಲಿ ಅವಿಭಜಿತ ದ.ಕ.ಜಿಲ್ಲೆಯಲ್ಲಿ ದಿನವಹಿ 4.50 ಲಕ್ಷ ಕೇಜಿ ಹಾಲು ಉತ್ಪಾದನೆ ಗುರಿ ಹೊಂದಲಾಗಿದೆ ಎಂದು ಸುಚರಿತ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ(ನಂದಿನಿ)ಕ್ಕೆ ಒಳಪಡುವ ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಳೆದ ಒಂದೂವರೆ ವರ್ಷದಿಂದ ಹಾಲು ಉತ್ಪಾದನೆಯಲ್ಲಿ ತೀವ್ರ ಕುಸಿತ ಕಂಡು ಬಂದಿದೆ. ಉಭಯ ಜಿಲ್ಲೆಗಳಲ್ಲಿನ ಹಾಲು ಹಾಗೂ ಹಾಲಿನ ಉತ್ಪಾದನೆಯ ಬೇಡಿಕೆ ಪೂರೈಸಲು ಸದ್ಯ ಹೊರ ಜಿಲ್ಲೆಗಳನ್ನು ಅವಲಂಬಿಸಲಾಗುತ್ತಿದೆ. ಈ ಅವಲಂಬನೆಯನ್ನು ತಪ್ಪಿಸಿ, ಸ್ಥಳೀಯ ಹೈನುಗಾರರಿಗೆ ಪೋತ್ಸಾಹ ನೀಡುವ ನಿಟ್ಟಿನಲ್ಲಿ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಹಲವು ತಂತ್ರಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದೆ ಎಂದು ಒಕ್ಕೂಟ ಅಧ್ಯಕ್ಷ ಸುಚರಿತ ಶೆಟ್ಟಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಮಿಶ್ರ ಕರು ತಳಿ ಯೋಜನೆ ಮೂಲಕ ಹಸು ಖರೀದಿದಾರರಿಗೆ ಸುಮಾರು 3,500 ರು. ಸಹಾಯಧನ, 1 ಎಕರೆ ಪ್ರದೇಶದಲ್ಲಿ ಹಸಿರು ಹುಲ್ಲು ಬೆಳೆಯುವವರಿಗೆ 20,000 ರು. ಸಬ್ಸಿಡಿ, ಎರಡು ಮೂರು ಹಸು ಸಾಕುವವರಿಗೆ ಮತ್ತಷ್ಟು ಹೆಚ್ಚುವರಿ ಹಸು ಸಾಕಲು ಸಬ್ಸಿಡಿ ಜತೆಗೆ ಬೇಸಿಗೆಯಲ್ಲಿ ಪಶು ಆಹಾರವಾದ ಸೈಲೇಜ್ (ಹಸಿ ಜೋಳವನ್ನು ಹಸಿರು ಎಲೆಗಳೊಂದಿಗೆ ಕತ್ತರಿಸಿ ತಯಾರಿಸುವ ಪಶು ಆಹಾರ) ಖರೀದಿಗೆ ಒಕ್ಕೂಟ ಯೋಜನೆ ರೂಪಿಸುತ್ತಿದೆ ಎಂದರು.ಅವಿಭಜಿತ ದ.ಕ. ಜಿಲ್ಲೆಯಲ್ಲಿ ಯುವಕರಲ್ಲಿ ಹೈನುಗಾರಿಕೆಯಲ್ಲಿ ನಿರಾಸಕ್ತಿ, ಪಶು ಆಹಾರದ ಬೆಲೆಯಲ್ಲಿ ಹೆಚ್ಚಳ, ಕಳೆದ ಒಂದೂವರೆ ವರ್ಷದ ಹಿಂದೆ ಜಿಲ್ಲೆಯಲ್ಲಿ ಜಾನುವಾರುಗಳನ್ನು ಕಾಡಿದ ಕಾಲುಬಾಯಿ ರೋಗ, ಚರ್ಮಗಂಟು ರೋಗದಿಂದಾಗಿ ಹಾಲಿನ ಉತ್ಪಾದನೆಯಲ್ಲಿ ಭಾರೀ ಕುಸಿತ ಕಂಡು ಬಂದಿದೆ. ಪ್ರಸಕ್ತ ದಿನಂಪ್ರತಿ ಹಾಲು ಶೇಖರಣೆ 3,70,530 ಕೇಜಿಯಷ್ಟಾಗಿದೆ ಎಂದರು. ಸಂಘಸಂಸ್ಥೆ ಅಥವಾ ಸೌಹಾರ್ದ ಸಂಘಗಳು ಹೈನುಗಾರಿಕೆಗೆ ಮುಂದೆ ಬಂದರೆ ಪ್ರೋತ್ಸಾಹ ನೀಡಲಾಗುವುದು ಎಂದರು.
ಕಿರಿ ಮಂಜೇಶ್ವರ ಹಾಗೂ ವಾಮದ ಪದವುಗಳಲ್ಲಿ ಅಶಕ್ತ ಹೈನುಗಾರರ ಮನೆ ಬಾಗಿಲಿಗೆ ಹಾಲಿನ ವಾಹನ ಬಂದು ಹಾಲು ಖರೀದಿ ನಡೆಸುತ್ತಿದೆ. ಇದನ್ನು ಉಚಿತವಾಗಿಯೇ ನಡೆಸಲಾಗುತ್ತಿದೆ ಎಂದರು.ದಿನಕ್ಕೆ 5.20 ಲಕ್ಷ ಕೇಜಿ ಬೇಡಿಕೆ: ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸುಮಾರು 5.20 ಲಕ್ಷ ಕೇಜಿಯಷ್ಟು ಹಾಲು ಮತ್ತು ಹಾಲಿನ ಉತ್ಪನ್ನಗಳ ಬೇಡಿಕೆ ಇದೆ. ಇದನ್ನು ಸರಿದೂಗಿಸಲು ಸದ್ಯ ಮಂಡ್ಯ, ಹಾಸನ, ಮೈಸೂರು ಜಿಲ್ಲೆಗಳಿಂದ ಹಾಲು ಖರೀದಿಸಲಾಗುತ್ತಿದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಒಟ್ಟು 741 ಹಾಲು ಉತ್ಪಾದಕರ ಸಹಕಾರಿ ಸಂಘಗಳಿದ್ದು, 55,784 ಸಕ್ರಿಯ ಸದಸ್ಯರಿದ್ದಾರೆ. ಒಕ್ಕೂಟದಿಂದ ಹಾಲಿನ ದರವಾಗಿ ಲೀಟರ್‌ಗೆ 37.74 ರು. ನೀಡಲಾಗುತ್ತಿದೆ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ವಿವೇಕ ಡಿ. ಮಾಹಿತಿ ನೀಡಿದ್ದಾರೆ.4.50 ಲಕ್ಷ ಕೇಜಿ ಹಾಲು ಖರೀದಿ ಗುರಿ: ಬರದಿಂದಾಗಿ ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಿರುವಂತೆಯೇ ಪಶು ಆಹಾರದ ಬೆಲೆಯೂ ಗಗನಕ್ಕೇರಿದೆ. ಇತರ ಜಿಲ್ಲೆಗಳಿಗೆ ಹೋಲಿಸಿದರೆ ದ.ಕ. ಹಾಗೂ ಉಡುಪಿಯಲ್ಲಿ ಹಸಿರು ಹುಲ್ಲು ಕೊರತೆ ಅಧಿಕವಾಗಿದೆ. ಒಣ ಹುಲ್ಲು ಕೇಜಿಗೆ 10 ರು. ದರದಲ್ಲಿ ಖರೀದಿಸುವುದು ರೈತರಿಗೆ ಅಸಾಧ್ಯವಾಗುತ್ತಿದೆ. ಇದಕ್ಕಾಗಿ ಈಗಾಗಲೇ ಹಸಿರು ಹುಲ್ಲು ಬೆಳೆಯುವವರಿಗೆ 1 ಎಕರೆಗೆ 20,000 ರು. ಸಬ್ಸಿಡಿ ನೀಡಲು ಒಕ್ಕೂಟ ನಿರ್ಧರಿಸಿದೆ. ಮುಂದಿನ ಎರಡು ವರ್ಷಗಳಲ್ಲಿ ಅವಿಭಜಿತ ದ.ಕ.ಜಿಲ್ಲೆಯಲ್ಲಿ ದಿನವಹಿ 4.50 ಲಕ್ಷ ಕೇಜಿ ಹಾಲು ಉತ್ಪಾದನೆ ಗುರಿ ಹೊಂದಲಾಗಿದೆ ಎಂದರು.ಅಡಕೆ ತೋಟ ಹೊಂದಿರುವವರು ತಮ್ಮ ತೋಟದಲ್ಲಿ ಹಸಿರು ಹುಲ್ಲು ಬೆಳೆದು ಹಸುಗಳನ್ನು ಪೋಷಿಸುವವರಿಗೆ ನೆರವು ನೀಡಲು ಒಕ್ಕೂಟ ಸಬ್ಸಿಡಿ ನೀಡಲು ಯೋಜನೆ ರೂಪಿಸಿದೆ. ಕೊಯ್ಲ ಪಶು ಸಂಗೋಪನಾ ಕ್ಷೇತ್ರದಲ್ಲೂ ಹುಲ್ಲು ಬೆಳಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದರು. ಬೇಡಿಕೆಯಲ್ಲೂ ಹೆಚ್ಚಳ: ಹಾಲು ಮಾತ್ರವಲ್ಲದೆ ಹಾಲಿನ ಉತ್ಪನ್ನಗಳಿಗೂ ಕಳೆದ ಒಂದೂವರೆ ವರ್ಷದಲ್ಲಿ ಬೇಡಿಕೆ ಹೆಚ್ಚಾಗಿದೆ. ಕಳೆದ ವರ್ಷ ಜ. 17ರಂದು ಮೊಸರಿನ ಬೇಡಿಕೆ 70,000 ಲೀಟರ್ ಆಗಿದ್ದರೆ, ಈ ವರ್ಷ ಅದೇ ದಿನ 80,000 ಲೀಟರ್ ಮೊಸರು ಮಾರಾಟವಾಗಿದೆ ಎನ್ನುತ್ತಾರೆ ಸುಚರಿತ ಶೆಟ್ಟಿ.