ನದಿಯ ಮಧ್ಯ ಭಾಗದಲ್ಲಿ ಬಂಡೆಯ ಮೇಲೆ ನಿಂತು ಫೋಟೋ ತೆಗೆಯುವಾಗ ನೀರಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಲು ಹೋಗಿ ನಾಲ್ವರು ತುಂಗಾ ನದಿ ಪಾಲಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಹಿಷಿ ಬಳಿ ಗುರುವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ನದಿಯ ಮಧ್ಯ ಭಾಗದಲ್ಲಿ ಬಂಡೆಯ ಮೇಲೆ ನಿಂತು ಫೋಟೋ ತೆಗೆಯುವಾಗ ನೀರಿಗೆ ಬಿದ್ದ ವ್ಯಕ್ತಿಯನ್ನು ರಕ್ಷಿಸಲು ಹೋಗಿ ನಾಲ್ವರು ತುಂಗಾ ನದಿ ಪಾಲಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಹಿಷಿ ಬಳಿ ಗುರುವಾರ ನಡೆದಿದೆ.

ಬೆಂಗಳೂರು ಮೂಲದ ಕಾನೂನು ವಿದ್ಯಾರ್ಥಿಗಳಾದ ಕಾರ್ತಿಕ್ (31), ನಕುಲ್ (19), ಪವನ್ (30) ಮತ್ತು ಖಾಸಗಿ ಸಂಸ್ಥೆಯ ಉದ್ಯೋಗಿ ಚೇತನ್ (19) ಮೃತ ವ್ಯಕ್ತಿಗಳು.

ಮದುವೆಗೆಂದು ಬೆಂಗಳೂರಿನಿಂದ 20 ಜನರು 2 ಟಿಟಿ ವಾಹನದಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದರು. ಮಧ್ಯಾಹ್ನ ಊಟದ ಬಳಿಕ ಮಹಿಷಿ ಗ್ರಾಮಕ್ಕೆ ದೇವಾಲಯ ಹಾಗೂ ನದಿ ವೀಕ್ಷಣೆಗೆ ತೆರಳಿದ್ದರು. ಈ ವೇಳೆ ಅಲ್ಲಿನ ಅಶ್ವತ್ಥನಾರಾಯಣ ಸ್ವಾಮಿ ದೇವಸ್ಥಾನದ ಬಳಿ ತುಂಗಾ ನದಿಯ ಮಧ್ಯ ಭಾಗದಲ್ಲಿ ಬಂಡೆಯ ಮೇಲೆ ಓರ್ವ ನಿಂತು ಫೋಟೋ ತೆಗೆಯುತ್ತಿದ್ದರು. ಆಗ ಆ ವ್ಯಕ್ತಿ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಹೋಗಿ ನಾಲ್ವರು ನೀರಿನಲ್ಲಿ ಮುಳುಗಿದ್ದಾರೆ. ಅವರು ನಾಪತ್ತೆಯಾಗುತ್ತಿದ್ದಂತೆ ಜೊತೆಗಿದ್ದ ಸ್ನೇಹಿತರು, ಮಾಳೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ತುಂಗಾ ನದಿಯಲ್ಲಿ ಶೋಧ ನಡೆಸಿ ನಾಲ್ವರ ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ.