ವಿದ್ಯಾರ್ಥಿ ಜೀವನದಲ್ಲಿ ಕಲಿಯುವ ಪಾಠಗಳು ಭವಿಷ್ಯಕ್ಕೆ ಭದ್ರ ಬುನಾದಿಯಾಗಲಿವೆ. ಮಕ್ಕಳು ಸಮಯದ ಮಹತ್ವ ಅರಿತು, ದುಶ್ಚಟಗಳಿಗೆ ದಾಸರಾಗದೆ ತಮ್ಮಲ್ಲಿರುವ ಪ್ರತಿಭೆಯನ್ನು ಅರಿತುಕೊಂಡು ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.
ಹಾವೇರಿ: ವಿದ್ಯಾರ್ಥಿ ಜೀವನದಲ್ಲಿ ಕಲಿಯುವ ಪಾಠಗಳು ಭವಿಷ್ಯಕ್ಕೆ ಭದ್ರ ಬುನಾದಿಯಾಗಲಿವೆ. ಮಕ್ಕಳು ಸಮಯದ ಮಹತ್ವ ಅರಿತು, ದುಶ್ಚಟಗಳಿಗೆ ದಾಸರಾಗದೆ ತಮ್ಮಲ್ಲಿರುವ ಪ್ರತಿಭೆಯನ್ನು ಅರಿತುಕೊಂಡು ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.
ನಗರದ ಬಸವಕೇಂದ್ರ ಹೊಸಮಠದಲ್ಲಿ ಗುರುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆ ಹಾಗೂ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಮೌಲ್ಯಗಳನ್ನು ಕಲಿಸುವ ಜವಾಬ್ದಾರಿ ಮನೆ, ಶಾಲೆ ಹಾಗೂ ಮಠಗಳ ಮೇಲಿದೆ. ಮಕ್ಕಳು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ನಿರಂತರ ಶ್ರಮಿಸಬೇಕು. ಶಿಕ್ಷಕರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಮಕ್ಕಳಲ್ಲಿ ಸಾಧನೆಯ ಪ್ರೇರಣೆ ಮೂಡಿಸುವ ಉದ್ದೇಶದಿಂದ ಬಾಲಪ್ರತಿಭೆ ಭೂಮಿಕಾ ಈಟೇರ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಗೌರವಿಸಲಾಗಿದೆ ಎಂದರು.
ಪತ್ರಕರ್ತ ನಾರಾಯಣ ಹೆಗಡೆ ಮಾತನಾಡಿ, ಬಾಲ್ಯ ಜೀವನವನ್ನು ಸಂತೋಷದಿಂದ ಅನುಭವಿಸುವುದರ ಜತೆಗೆ ಭವಿಷ್ಯದ ಗುರಿ ಸಾಧನೆಗೆ ಈಗಿನಿಂದಲೇ ಶ್ರಮಿಸಬೇಕು. ಪಾಲಕರು ಮಕ್ಕಳ ಕನಸುಗಳಿಗೆ ಪ್ರೋತ್ಸಾಹ ನೀಡಬೇಕು. ಶಿಕ್ಷಕರು ಮತ್ತು ಹಿರಿಯರ ಮಾರ್ಗದರ್ಶನ ಪಾಲಿಸಬೇಕು. ಮೊಬೈಲ್ ಗೀಳಿಗೆ ಬಿದ್ದು ಅಮೂಲ್ಯ ಸಮಯ ಹಾಗೂ ಭವಿಷ್ಯ ಹಾಳುಮಾಡಿಕೊಳ್ಳಬಾರದು. ಪ್ರತಿಯೊಂದು ಮಗುವಿನಲ್ಲೂ ಪ್ರತಿಭೆ ಅಡಗಿದ್ದು, ಅದನ್ನು ಗುರುತಿಸಿ ಬೆಳೆಸುವ ಕೆಲಸವಾಗಬೇಕು. ಕನ್ನಡ ಉಳಿಸಿ ಬೆಳೆಸುವ ಹೊಣೆ ಎಲ್ಲರ ಮೇಲಿದೆ ಎಂದರು.ಉಪನ್ಯಾಸಕ ಶೇಖರ ಭಜಂತ್ರಿ ಮಾತನಾಡಿ, ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನ ಹಕ್ಕು, ಸ್ವಾತಂತ್ರ್ಯ ಮತ್ತು ಸಹಬಾಳ್ವೆಯ ಅವಕಾಶ ಕಲ್ಪಿಸುವ ಶ್ರೇಷ್ಠ ಸಂವಿಧಾನ ನೀಡಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪತ್ರಕರ್ತ ವೀರೇಶ ಮಡ್ಲೂರ, ರಾಜೇಂದ್ರ ಸಜ್ಜನರ, ಚಂದ್ರಶೇಖರ ಶಿಸನಹಳ್ಳಿ, ಬಾಲಪ್ರತಿಭೆ ಭೂಮಿಕಾ ಈಟೇರ, ಮುಖ್ಯಶಿಕ್ಷಕಿ ಮಂಜುಳಾ ಕಳ್ಳಿಹಾಳ ಉಪಸ್ಥಿತರಿದ್ದರು. ಪಿ.ಎನ್. ಹಿರೇಮಠ ಸ್ವಾಗತಿಸಿದರು. ಭೂಮಿಕಾ ಈಟೇರ ಪ್ರಾರ್ಥಿಸಿದರು. ಚನ್ನಪ್ಪ ಕೋಣನವರ ನಿರೂಪಿಸಿದರು.