ರೌಡಿ ನಿಗ್ರಹ ದಳದ ಪೊಲೀಸರು 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ವಿವಿಧೆಡೆ ಕಾರ್ಯಾಚರಣೆ ನಡೆಸಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಒಂಬತ್ತು ಮಂದಿ ರೌಡಿಗಳನ್ನು ಬಂಧಿಸಿದ್ದಾರೆ.

ಕನ್ನಡಪ್ರಭವಾರ್ತೆ ಬೆಂಗಳೂರು

ರೌಡಿ ನಿಗ್ರಹ ದಳದ ಪೊಲೀಸರು 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ವಿವಿಧೆಡೆ ಕಾರ್ಯಾಚರಣೆ ನಡೆಸಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಒಂಬತ್ತು ಮಂದಿ ರೌಡಿಗಳನ್ನು ಬಂಧಿಸಿದ್ದಾರೆ.

ಜೆ.ಜೆ.ನಗರ ಪೊಲೀಸ್ ಠಾಣೆಯ ರೌಡಿಶೀಟರ್‌ಗಳಾದ ಅವೇಜ್ ಅಲಿಯಾಸ್‌ ಮೊಹಮ್ಮದ್ ಅಲಿ (26), ಮಣಿರಾಜ್‌ ಅಲಿಯಾಸ್‌ ಮಣಿ (40) ರಾಜಗೋಪಾಲನಗರ ಪೊಲೀಸ್ ಠಾಣೆಯ ರೌಡಿಶೀಟರ್‌ಗಳಾದ ಅಯೂಬ್‌ಖಾನ್‌ (39), ರಾಜು ಅಲಿಯಾಸ್‌ ಕರಿಯ ರಾಜು (32), ಕಲಾಸಿಪಾಳ್ಯ ಪೊಲೀಸ್‌ ಠಾಣೆಯ ರೌಡಿಶೀಟರ್‌ ಶಹಜಾದ್‌ (26), ಕಾಮಾಕ್ಷಿಪಾಳ್ಯ ಠಾಣೆಯ ರೌಡಿಶೀಟರ್‌ ನೂತನ್‌ ಅಲಿಯಾಸ್‌ ಕೋತಿ (24), ಪೀಣ್ಯ ಪೊಲೀಸ್‌ ಠಾಣೆಯ ರೌಡಿಶೀಟರ್‌ ಶಶಿಕುಮಾರ್‌ ಅಲಿಯಾಸ್‌ ಶಶಿ, ಕೋಣನಕುಂಟೆ ಪೊಲೀಸ್‌ ಠಾಣೆಯ ರೌಡಿಶೀಟರ್‌ ಸತೀಶ್‌ ಕುಮಾರ್‌ (39) ಮತ್ತು ಕುಮಾರಸ್ವಾಮಿ ಲೇಔಟ್‌ ಪೊಲೀಸ್‌ ಠಾಣೆಯ ರೌಡಿಶೀಟರ್‌ ಫಿರೋಜ್‌ ಪಾಷಾ ಅಲಿಯಾಸ್‌ ಫಯಾಜ್‌ ಬಂಧಿತರು.

ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಹಲ್ಲೆ, ಕೊಲೆ, ಕೊಲೆಯತ್ನ, ದರೋಡೆ ಮತ್ತು ರಾಬರಿ ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ರೌಡಿಗಳನ್ನು ಪತ್ತೆ ಮಾಡುವ ಸಲುವಾಗಿ ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡಿದ್ದ ರೌಡಿ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿ ನ.24 ಮತ್ತು ನ.25 ರಂದು 9 ರೌಡಿಗಳನ್ನು ಬಂಧಿಸಿದ್ದಾರೆ. ರೌಡಿ ನಿಗ್ರಹ ದಳದ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಉಪ ಪೊಲೀಸ್ ಆಯುಕ್ತರು, ರೌಡಿ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿ ತಂಡವು ಈ ವಿಶೇಷ ಕಾರ್ಯಾಚರಣೆಗಳನ್ನು ನಡೆಸಿದೆ.