ಸಂವಿಧಾನ ದಿನಾಚರಣೆಯ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಗುರುವಾರ ಪುಷ್ಪ ನಮನ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರತಿಯೊಬ್ಬ ನಾಗರಿಕರ ಸಂಕಷ್ಟದ ಸಮಯದಲ್ಲಿ ನೆರವಿಗೆ ಬರುವ, ನ್ಯಾಯಾಲಯಕ್ಕೆ ಹೋಗಿ ನ್ಯಾಯ ದೊರಕಿಸಿಕೊಳ್ಳಲು ಸಾಧ್ಯವಾಗಿರುವ ಸಂವಿಧಾನ ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.ವಿಧಾನಸೌಧ ಬಳಿ ಮಾತನಾಡಿದ ಅವರು, ಭಾರತದ ಪ್ರತಿಯೊಬ್ಬ ಪ್ರಜೆಗೆ ಬೆಳಕನ್ನು ನೀಡಿದ ಮಹಾನ್ ಚೇತನ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಸಂವಿಧಾನ ದಿನದಂದು ನಾವು ಸ್ಮರಿಸಬೇಕು. ತಾವು ಕೆಪಿಸಿಸಿ ಅಧ್ಯಕ್ಷನಾದಾಗ ಮೊದಲು ಮಾಡಿದ ಕೆಲಸವೆಂದರೆ ರೆಹಮಾನ್ ಖಾನ್ ಅವರ ಕೈಯಲ್ಲಿ, ಸಂವಿಧಾನದ ಪೀಠಿಕೆ ಓದಿಸಿ ಅಲ್ಲಿಂದಲೇ ಸಂವಿಧಾನ ಮಹತ್ವವನ್ನು ಸಾರುವ ಕೆಲಸವನ್ನು ಪ್ರಾರಂಭಿಸಿದೆ ಎಂದರು.
ಈ ಹಿಂದೆ ಸಚಿವರಾಗಿದ್ದ ಎಚ್.ಸಿ.ಮಹದೇವಪ್ಪ ಅವರು ಬಹಳ ಜವಾಬ್ದಾರಿಯಿಂದ ಸಂವಿಧಾನದ ಆಶಯಗಳು ಪ್ರತಿ ಮಕ್ಕಳಿಗೂ, ಜನರಿಗೂ ತಲುಪಿಸುವ ಕೆಲಸ ಮಾಡಿದ್ದರು. ಈಗ ಮುನಿಯಪ್ಪ ಅವರು ಆ ಕೆಲಸ ಕಾಳಜಿಯಿಂದ ಮಾಡುತ್ತಿದ್ದಾರೆ ಎಂದರು.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಂವಿಧಾನದ ಪೀಠಿಕೆಯನ್ನು ಶಾಲಾ- ಕಾಲೇಜುಗಳಲ್ಲಿ ಮತ್ತು ಸರ್ಕಾರದ ಎಲ್ಲಾ ಕಾರ್ಯಕ್ರಮಗಳಲ್ಲಿ ಓದಲು ಆದೇಶ ನೀಡಲಾಯಿತು. ಸಂವಿಧಾನದ ಉಳಿಸಿಕೊಂಡರೆ ಮಾತ್ರ ಬದುಕಲು ಸಾಧ್ಯ ಎಂಬ ತಿಳಿವಳಿಕೆ ನೀಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದರು.
ಗಾಂಧೀಜಿ ಕಾಂಗ್ರೆಸ್ ಪಕ್ಷದ ಜವಾಬ್ದಾರಿ ತೆಗೆದುಕೊಂಡು 100 ವರ್ಷ ಪೂರೈಸಿದ ಸಂದರ್ಭದಲ್ಲಿ ''''ಜೈ ಭೀಮ್, ಜೈ ಬಾಪು, ಜೈ ಸಂವಿಧಾನ್'''' ಎಂಬ ಹೆಸರಿನಲ್ಲಿ ಬೆಳಗಾವಿಯಲ್ಲಿ ಕಾರ್ಯಕ್ರಮ ರೂಪಿಸಿದ್ದೆವು. ನಮ್ಮ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ನಾನು ಕೂಡ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ಸಂವಿಧಾನ ಪುಸ್ತಕವನ್ನು ಇಟ್ಟುಕೊಂಡು ಅದಕ್ಕೆ ಗೌರವ ತೋರಿದ್ದೇವೆ; ಸಂವಿಧಾನ ನಮ್ಮೆಲ್ಲರ ಬದುಕಿನ ದೊಡ್ಡ ಪ್ರಾಣ ಗ್ರಂಥ. ಅದರ ಮೇಲೆ ನಂಬಿಕೆ ಇಟ್ಟು ಬದುಕುತ್ತಿದ್ದೇವೆ. ಅದನ್ನು ಉಳಿಸಿಕೊಂಡು ಹೋಗುವ ಕೆಲಸವನ್ನು ನಾವೆಲ್ಲರೂ ಸೇರಿ ಒಟ್ಟಾಗಿ ಮಾಡಬೇಕು ಎಂದು ಹೇಳಿದರು.