ಅಸಂಘಟಿತ ವಲಯದಿಂದ ಜಿಡಿಪಿಗೆ ಶೇ.4 ಆದಾಯ

| Published : Sep 02 2024, 02:04 AM IST

ಸಾರಾಂಶ

ವೈದಿಕ ಮತ್ತು ಶೂದ್ರ ವರ್ಗಗಳನ್ನು ಆಹಾರ ಪದ್ಧತಿಯಲ್ಲಿ ಗುರುತಿಸಲಾಗುತ್ತಿದೆ ಎಂದು ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಹೇಳಿದರು.

ತುಮಕೂರು: ವೈದಿಕ ಮತ್ತು ಶೂದ್ರ ವರ್ಗಗಳನ್ನು ಆಹಾರ ಪದ್ಧತಿಯಲ್ಲಿ ಗುರುತಿಸಲಾಗುತ್ತಿದೆ ಎಂದು ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಹೇಳಿದರು.ನಗರದಲ್ಲಿ ಸ್ಲಂ ಜನಾಂದೋಲನ ಕಚೇರಿಯಲ್ಲಿ ನಡೆದ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಮಹಿಳಾ ಕಾನೂನುಗಳು ಮತ್ತು ಪ್ರಸ್ತುತತೆ ಹಾಗೂ ಅಸಂಘಟಿತ ವಲಯದಲ್ಲಿ ಸ್ಲಂ ಯುವಕರ ಸವಾಲುಗಳ ಕುರಿತು ಅರಿವಿನ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಗುರುತಿನಿಂದ ಶೂದ್ರ ವರ್ಗಗಳನ್ನು ನಿಯಂತ್ರಿಸುವುದು ವೈದೀಕರಣಕ್ಕೆ ಸುಲಭವಾಗಿದೆ. ಕೆಳ ಜಾತಿಯಲ್ಲಿರುವ ಅಂತರ, ಕಲಹ ಮೇಲ್ಜಾತಿಗಳಿಗೆ ವರದಾನವಾಗಿದೆ. ಅಸಂಘಟಿತ ವಲಯದಿಂದ ದೇಶದ ಜಿಡಿಪಿಗೆ ಶೇ.4 ರಷ್ಟು ಆದಾಯ ಬರುತ್ತಿದೆ. ದೇಶದ ಶೇ.100ರಷ್ಟು ಆದಾಯದಲ್ಲಿ ಶೇ. 52ರಷ್ಟು ಅಂಬಾನಿ, ಅದಾನಿ ಪಾಲಾದರೆ ಇನ್ನುಳಿದ ಶೇ. 48 ರಷ್ಟು 140 ಕೋಟಿ ಜನರ ಪಾಲಾಗುತ್ತಿದೆ ಎಂದರು. ಮುಖಂಡ ಬಿ. ಉಮೇಶ್ ಮಾತನಾಡಿ, ದೇಶದಲ್ಲಿ ಏಕ ಸಂಸ್ಕೃತಿಯನ್ನು ಹೇರಲಾಗುತ್ತಿದೆ. ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತೆರಿಗೆ ಕಟ್ಟುವವರು ನಾಗರೀಕರೆಂದು ಪ್ರತಿಬಿಂಬಿಸಲಾಗುತ್ತಿದೆ. ಕೋಮು, ದ್ವೇಷ ಬಿತ್ತುವ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವಂತೆ ಮಾಡುವ ವ್ಯವಸ್ಥೆಯನ್ನು ಡಿಜಿಟಲ್‌ ಮಾಧ್ಯಮಗಳು ಮಾಡುತ್ತಿವೆ ಎಂದರು.ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯನ್ನು ಎಲ್ಲಾ ಸರ್ಕಾರಗಳು ದುರುಪಯೋಗ ಮಾಡಿಕೊಳ್ಳುತ್ತಿವೆ. ಅಸಂಘಟಿತ ವಲಯದಲ್ಲಿರುವ ಯುವಜನರು, ಸಾಮಾಜಿಕ ಭದ್ರತೆಗಾಗಿ ಬೀದಿಗಳಿದು ಹೋರಾಟ ಮಾಡಬೇಕು. ಇದರಿಂದ ದುಡಿಯುವ ಜನರಿಗೆ ಕಲ್ಯಾಣ ಕಾರ್ಯಕ್ರಮಗಳು ದೊರೆಯುತ್ತವೆ. ಸಾಂಸ್ಕೃತಿ ಚಲನೆಯಿಂದ ಮಾತ್ರ ಸ್ಲಂ ಯುವಜನರು ಮುಂದುವರಿಯಬೇಕೆಂದರು. ವಕೀಲೆ ಚೈತ್ರಾ ಮಾತನಾಡಿ, ಸಂವಿಧಾನ ಎಲ್ಲಾ ನಾಗರೀಕರಿಗೆ 6 ಮೂಲಭೂತ ಹಕ್ಕುಗಳನ್ನು ನೀಡಿದೆ. ಪರಿಚ್ಚೇದ 12 ರಿಂದ 35 ರವರೆಗೆ ನಮ್ಮ ಹಕ್ಕುಗಳನ್ನು ನೀಡಿದೆ. ಸಮಾನತೆಯ ಹಕ್ಕು, ಶೋಷಣೆ ವಿರುದ್ದದ ಹಕ್ಕು, ಧಾರ್ಮಿಕ ಸ್ವಾತಂತ್ಯ್ರ ಹಕ್ಕು ಮತ್ತು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು, ಸಂವಿಧಾನಬದ್ದ ಪರಿಹಾರದ ಹಕ್ಕುಗಳನ್ನು ಕೊಡಲಾಗಿದೆ ಎಂದರು.ಕೊಳಚೆ ಪ್ರದೇಶಗಳಲ್ಲಿರುವ ಮಹಿಳೆಯರಿಗೆ ಕೆಲಸದ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ ನಡೆದರೆ ಕಾನೂನು ರೀತಿಯಲ್ಲಿ ಹೋರಾಟ ನಡೆಸಲು ಅವಕಾಶವಿದೆ. ಯತೇಚ್ಚವಾಗಿ ಬಾಲ್ಯ ವಿವಾಹ, ಮತ್ತು ಪೋಕ್ಸೋ ಪ್ರಕರಣಗಳು ಇತ್ತೀಚೆಗೆ ಸ್ಲಂಗಳಲ್ಲಿ ಸಾಮಾನ್ಯವಾಗಿದ್ದು, ಈಗಿನ ಬಿ.ಎನ್.‌ಎಸ್‌ ಪ್ರಕಾರ 12 ರಿಂದ 16 ವರ್ಷದ ಹೆಣ್ಣು ಮಕ್ಕಳ ಮೇಲೆ ನಡೆಯುವ ಲೈಂಗಿಕ ಪ್ರಕರಣಗಳಿಗೆ ಜೀವಾವಧಿ ಮತ್ತು ಮರಣದಂಡನೆ ಶಿಕ್ಷೆ ನೀಡಲು ಅವಕಾಶವಿದೆ ಎಂದರು.

ಸಾವಿತ್ರಿ ಬಾಪೂಲೆ ಮಹಿಳಾ ಸಂಘಟನೆಯ ಕಾರ್ಯದರ್ಶಿ ಅನುಪಮಾ, ಕೊಳಗೇರಿ ಸಮಿತಿಯ ಕಾರ್ಯದರ್ಶಿ ಅರುಣ್‌, ಸಂಘಮಿತ್ರ ಸೌಹಾರ್ದದ ತಿರುಮಲಯ್ಯ, ನಿವೇಶನ ರಹಿತ ಹೋರಾಟ ಸಮಿತಿಯ ಮಂಗಳಮ್ಮ, ಪೂರ್ಣಿಮಾ, ಹನುಮಕ್ಕ, ಡಾ. ಅಂಬೇಡ್ಕರ್‌ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ರಘು, ಸಂಪತ್‌ಕುಮಾರ್‌, ಅನಿಲ್‌, ಸುನೀಲ್‌, ಶಶಿ, ಹನುಮಂತರಾಜು, ತುಮಕೂರು ಸ್ಲಂ ಸಮಿತಿ ಪದಾಧಿಕಾರಿಗಳಾದ ಜಾಬೀರ್‌ಖಾನ್‌, ಶಂಕ್ರಯ್ಯ, ರಂಗನಾಥ್‌, ಕೃಷ್ಣಮರ್ತಿರ, ಗುಲ್ನಾಜ್‌, ರಾಮಕೃಷ್ಣಯ್ಯ, ಮುಬಾರಕ್‌ ಇದ್ದರು.