4 ಲಕ್ಷ ಬಿಜೆಪಿ ಸದಸ್ಯತ್ವದ ಗುರಿ: ಸಂಸದ ಕಾಗೇರಿ

| Published : Sep 20 2024, 01:38 AM IST

ಸಾರಾಂಶ

ಜಿಲ್ಲೆಯಲ್ಲೂ ಸದಸ್ಯತ್ವ ಅಭಿಯಾನ ಬಿರುಸಿನಿಂದ ಸಾಗುತ್ತಿದ್ದು, ಪ್ರಥಮ ಹಂತದ ಅಭಿಯಾನ ಸೆ. 25ಕ್ಕೆ ಮುಕ್ತಾಯಗೊಳ್ಳಲಿದೆ.

ಭಟ್ಕಳ: ಜಿಲ್ಲೆಯಲ್ಲಿ 4 ಲಕ್ಷ ಬಿಜೆಪಿ ಸದಸ್ಯತ್ವದ ಗುರಿ ಹೊಂದಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ತಾಲೂಕು ಹೆಬಳೆಯ ಬಿಜೆಪಿ ಮುಖಂಡ ಹಾಗೂ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಾಡಿಗ ಅವರ ಮನೆಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯಲ್ಲಿ ಸದಸ್ಯತ್ವ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರಕಿದ್ದು, ಕಾರ್ಯಕರ್ತರು ಹುಮ್ಮಸ್ಸಿನಿಂದ ಚುನಾವಣೆಯಲ್ಲಿ ಭಾಗವಹಿಸಿದ ರೀತಿಯಲ್ಲಿಯೇ ಸದಸ್ಯತ್ವ ಅಭಿಯಾನದಲ್ಲೂ ಉತ್ಸುಕತೆ ತೋರುತ್ತಿರುವುದು ಹೆಮ್ಮೆಯ ವಿಚಾರ. ಸೆ. 2ರಂದು ದೇಶದಲ್ಲಿ 8800002024 ನಂಬರಿಗೆ ಮಿಸ್ಡ್ ಕಾಲ್ ಕೊಡುವ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪ್ರಮುಖರು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದರು.

ಜಿಲ್ಲೆಯಲ್ಲೂ ಸದಸ್ಯತ್ವ ಅಭಿಯಾನ ಬಿರುಸಿನಿಂದ ಸಾಗುತ್ತಿದ್ದು, ಪ್ರಥಮ ಹಂತದ ಅಭಿಯಾನ ಸೆ. 25ಕ್ಕೆ ಮುಕ್ತಾಯಗೊಳ್ಳಲಿದೆ. ಬೂತ್ ಮಟ್ಟದಿಂದ ದೇಶ ಮಟ್ಟದ ತನಕ ಸದಸ್ಯತ್ವ ಅಭಿಯಾನದ ಸಭೆ ನಡೆಯುತ್ತಿದ್ದು, ಉತ್ತರ ಕನ್ನಡದಲ್ಲಿಯೂ ಸಭೆಗಳು ನಡೆಯುತ್ತಿವೆ.

ಜಿಲ್ಲಾ ಮಟ್ಟದ ಸಭೆಯಲ್ಲಿ ಸುನಿಲ್ ಕುಮಾರ್ ಭಾಗವಹಿಸಿ ಅಭಿಯಾನದ ಸಮರ್ಪಕ ಅನುಷ್ಠಾನಕ್ಕೆ ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ 4 ಲಕ್ಷ ಸದಸ್ಯತ್ವದ ಗುರಿಯನ್ನು ಹೊಂದಲಾಗಿದ್ದು, ಭಟ್ಕಳ ತಾಲೂಕಿನ ಪ್ರತಿ ಬೂತ್ ಮಟ್ಟದಲ್ಲೂ 200 ಸದಸ್ಯತ್ವ ಮಾಡಿಸುವ ಗುರಿ ಹೊಂದಲಾಗಿದೆ ಎಂದರು.

ಅ. 2ರ ಗಾಂಧಿ ಜಯಂತಿಯಂದು ಹಮ್ಮಿಕೊಳ್ಳುವ ಸ್ವಚ್ಚತಾ ಆಂದೋಲನ ಜನಾಂದೋಲನವಾಗಬೇಕು. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಕಾರಿಗಳು, ಶಾಲಾ ಶಿಕ್ಷಕರು, ಅಧಿಕಾರಿಗಳು, ನೌಕರರು, ಸ್ಥಳೀಯ ಸಂಸ್ಥೆಗಳ ಸದಸ್ಯರು, ಸಂಘ ಸಂಸ್ಥೆಗಳ ಸದಸ್ಯರು, ಜನ ಪ್ರತಿನಿದಿಗಳು ಎಲ್ಲರೂ ಸಂಪೂರ್ಣ ತಮ್ಮನ್ನು ತೊಡಗಿಸಿಕೊಂಡು ಯಶಸ್ವಿಗೊಳಿಸಬೇಕು. ಅಂದು ಗಿಡ- ಗಂಟಿಗಳನ್ನು ಕೀಳುವ ಕೆಲಸವನ್ನು ಇಟ್ಟುಕೊಳ್ಳದೇ ಕೇವಲ ಪ್ಲಾಸ್ಟಿಕ್, ಗ್ಲಾಸು, ಕಬ್ಬಿಣ ಹಾಗೂ ರಬ್ಬರ್ ಇವುಗಳನ್ನು ಮಾತ್ರ ಆರಿಸಿ ಸಂಗ್ರಹಿಸಬೇಕು ಎಂದರು.

ಸರ್ಕಾರ ಅಭಿವೃದ್ಧಿ ಕೆಲಸವನ್ನಷ್ಟೇ ಮಾಡುತ್ತದೆ. ಸ್ವಚ್ಛತೆಯ ಕಾರ್ಯಕ್ಕೆ ಜನರ ಸಹಕಾರ ಇಲ್ಲದೇ ಸಾಧ್ಯವಿಲ್ಲ. ಜನರು ಒಟ್ಟಾಗಿ ಸ್ವಚ್ಛತೆಯನ್ನು ಮಾಡಬೇಕು ಎಂದರು. ಸಂಸದರು ಬೇಂಗ್ರೆ ಹಾಗೂ ಮೂಡಶಿರಾಲಿಗಳಲ್ಲಿ ಸದಸ್ಯತ್ವ ಅಭಿಯಾನದ ಸಭೆಯನ್ನು ನಡೆಸಿದರು.