ಸಾರಾಂಶ
ಹೊಸಪೇಟೆ: ವಿಶ್ವವಿಖ್ಯಾತ ಹಂಪಿ ಸ್ಮಾರಕಗಳ ವೀಕ್ಷಣೆಗೆ ಕಳೆದ ಐದು ದಿನಗಳಲ್ಲಿ 4 ಲಕ್ಷಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದು, ಈ ಮೂಲಕ ಹಂಪಿ ಪ್ರವಾಸೋದ್ಯಮಕ್ಕೆ ಚೇತರಿಕೆ ನೀಡಿದ್ದಾರೆ.
ಬೆಳಕಿನ ಹಬ್ಬ ದೀಪಾವಳಿ ಸಮಯದಲ್ಲೇ ಭಾರೀ ಪ್ರಮಾಣದಲ್ಲಿ ಹಂಪಿಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದು, ಪ್ರವಾಸೋದ್ಯಮ ಸೀಜನ್ ಆರಂಭದಲ್ಲೇ ಉತ್ತಮ ಸಂಕೇತದ ಸಂದೇಶ ರವಾನಿಸಿದ್ದಾರೆ.ಹಂಪಿಗೆ ಅ.20ರಂದು 60 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದರೆ, ಅ.21ರಂದು 60 ಸಾವಿರ, ಅ.22ರಂದು ಒಂದು ಲಕ್ಷಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ್ದರೆ, ಅ.23ರಂದು 80 ಸಾವಿರ ಪ್ರವಾಸಿಗರು ಮತ್ತು ಅ.24ರಂದು ಒಂದು ಲಕ್ಷಕ್ಕೂ ಅಧಿಕ ಪ್ರವಾಸಿಗರು ಹಂಪಿಗೆ ಆಗಮಿಸಿ ಸ್ಮಾರಕಗಳನ್ನು ವೀಕ್ಷಿಸಿದ್ದಾರೆ.
ದೀಪಾವಳಿ ಹಿನ್ನೆಲೆಯಲ್ಲಿ ಹಂಪಿಗೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿ ಸ್ಮಾರಕಗಳ ಮಾಹಿತಿ ಪಡೆದಿದ್ದಾರೆ. ಹಂಪಿ, ಹೊಸಪೇಟೆ, ಗಂಗಾವತಿ, ಕಮಲಾಪುರ, ಆನೆಗೊಂದಿ ಭಾಗದ ಹೊಟೇಲ್, ರೆಸಾರ್ಟ್, ಹೋಂ ಸ್ಟೇಗಳು ರಶ್ ಆಗಿದ್ದು, ಪ್ರವಾಸೋದ್ಯಮ ನೆಚ್ಚಿಕೊಂಡವರ ಬದುಕಿನ ಬಂಡಿಗೂ ಆಸರೆ ಆಗಿದ್ದಾರೆ.ಹಂಪಿಯಲ್ಲಿ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿದ್ದರಿಂದ ಕೆಲ ರೆಸ್ಟೋರೆಂಟ್ ಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಪ್ರವಾಸಿಗರು ಊಟ ಸವಿದಿದ್ದಾರೆ. ಒಮ್ಮೆಲೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸಿದ್ದರಿಂದ; ಈ ಬಾರಿ ಆತಿಥ್ಯ ನೀಡಲು ಸ್ವಲ್ಪ ಗೊಂದಲ ಆಯಿತು. ಆದರೂ ಪ್ರವಾಸಿಗರು ತಾಳ್ಮೆಯಿಂದ ಸರದಿ ಸಾಲಿನಲ್ಲಿ ನಿಂತು ಊಟ ಸವಿದಿದ್ದಾರೆ ಎಂದು ರೆಸ್ಟೋರೆಂಟ್ ವೊಂದರ ಮಾಲೀಕ ಭೀಮು ಕನ್ನಡಪ್ರಭಕ್ಕೆ ತಿಳಿಸಿದರು.
ಹಂಪಿ, ಕಮಲಾಪುರ, ಹೊಸಪೇಟೆ ಭಾಗದ ರೆಸ್ಟೋರೆಂಟ್, ಹೊಟೇಲ್, ರೆಸಾರ್ಟ್, ಹೋಂ ಸ್ಟೇಗಳಲ್ಲಿ ಉತ್ತರ ಭಾರತ, ದಕ್ಷಿಣ ಭಾರತ ಮತ್ತು ಚೈನೀಸ್ ಡಿಶ್ ಸೇರಿದಂತೆ ಬಗೆ ಬಗೆಯ ಖಾದ್ಯ ಮಾಡುವ ನುರಿತ ಬಾಣಸಿಗರು ಇದ್ದಾರೆ. ಈಗ ಸ್ಥಳೀಯ ಹೊಟೇಲ್ ಗಳಲ್ಲಿ ದಿಲ್ಲಿ, ನೇಪಾಳ, ಹರ್ಯಾಣ, ಬಿಹಾರ, ಒರಿಸ್ಸಾದ ಬಾಣಸಿಗರು ಕೆಲಸ ನಿರ್ವಹಿಸುತ್ತಿದ್ದಾರೆ. ಹಾಗಾಗಿ ದೇಶ, ವಿದೇಶಿ ಪ್ರವಾಸಿಗರಿಗೂ ಅವರು ಬಯಸಿದ ಊಟ ದೊರೆಯುತ್ತಿದೆ ಎಂದು ರೆಸ್ಟೋರೆಂಟ್ ಮಾಲೀಕರೋರ್ವರು ತಿಳಿಸಿದರು.ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಾಲಯ, ವಿಜಯ ವಿಠಲ ದೇವಾಲಯ, ಕಲ್ಲಿನತೇರು, ಕಮಲ ಮಹಲ್, ಸಪ್ತಸ್ವರ ಮಂಟಪ, ಪುರಂದರದಾಸರ ಮಂಟಪ, ಹಜಾರ ರಾಮ ದೇವಾಲಯ, ರಾಣಿ ಸ್ನಾನ ಗೃಹ, ಆನೆಲಾಯ, ಅರಮನೆ ಅಧಿಷ್ಠಾನ, ರಾಜರ ರಹಸ್ಯ ಸಭಾ ಗೃಹ ಸೇರಿದಂತೆ ವಿವಿಧ ಸ್ಮಾರಕಗಳನ್ನು ವೀಕ್ಷಿಸಿದ ಪ್ರವಾಸಿಗರು, ಕಮಲಾಪುರದ ಜೂಲಾಜಿಕಲ್ ಪಾರ್ಕ್, ಆನೆಗೊಂದಿಯ ಅಂಜನಾದ್ರಿ ಬೆಟ್ಟ ಮತ್ತು ಹೊಸಪೇಟೆಯ ತುಂಗಭದ್ರಾ ಜಲಾಶಯ ಮತ್ತು ದರೋಜಿ ಕರಡಿಧಾಮಗಳನ್ನು ವೀಕ್ಷಿಸಿದ್ದಾರೆ.
ಹಂಪಿಗೆ ತೆರಳಲು ಸರಳ ರಸ್ತೆ ಮಾರ್ಗದ ವ್ಯವಸ್ಥೆ ಮಾಡಬೇಕು. ಸೇತುವೆ ನಿರ್ಮಾಣದ ನೆಪದಲ್ಲಿ ಸುತ್ತಿ ಬಳಸಿ ತೆರಳುವ ಮಾರ್ಗಕ್ಕೆ ತಿಲಾಂಜಲಿ ಇಡಬೇಕು ಎಂದು ಪುಣೆಯ ಪ್ರವಾಸಿಗ ಆನಂದ ತುಂಬೆ ಸಲಹೆ ನೀಡಿದರು.;Resize=(128,128))
;Resize=(128,128))