ಸಾರಾಂಶ
ದೇವರಾಜು ಕಪ್ಪಸೋಗೆ
ಕನ್ನಡಪ್ರಭ ವಾರ್ತೆ ಚಾಮರಾಜನಗರ2021ರ ಮೇ1ರ ಮಧ್ಯರಾತ್ರಿ ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ದುರಂತ ಸಂಭವಿಸಿ 36 ಮಂದಿ ಕೋವಿಡ್ ರೋಗಿಗಳು ಮೃತಪಟ್ಟು ಇಂದಿಗೆ ನಾಲ್ಕು ವರ್ಷವಾಗಿದ್ದು, ಸಂತ್ರಸ್ತರ ಕುಟುಂಬಕ್ಕೆ ಸರ್ಕಾರ ನೀಡಿದ್ದ ಭರವಸೆಯಂತೆ ಕಾಯಂ ಕೆಲಸವಾಗಲಿ, ಕೆಲವರಿಗೆ ಸೂಕ್ತ ಪರಿಹಾರವೂ ಸಿಕ್ಕಿಲ್ಲ.
ಅಂದಿನ ಬಿಜೆಪಿ ಸರ್ಕಾರ ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಿಲ್ಲ. ಸೂಕ್ತ ಪರಿಹಾರವನ್ನೂ ನೀಡಿಲ್ಲ ಎಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಅಂದಿನ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಚಾಮರಾಜನಗರ ಜಿಲ್ಲೆಯಲ್ಲೇ ಸಚಿವ ಸಂಪುಟ ಸಭೆ ನಡೆಸಿದರೂ ಆಕ್ಸಿಜನ್ ದುರಂತದ ಬಗ್ಗೆ ಚಕಾರವೆತ್ತಲಿಲ್ಲ. ಮರು ದಿನವೇ ಚಾಮರಾಜನಗರಕ್ಕೆ ಭೇಟಿ ನೀಡಿದ್ದ ವೇಳೆ ಸಂತ್ರಸ್ತರು ಸೂಕ್ತ ಪರಿಹಾರ ಹಾಗೂ ಕಾಯಂ ಉದ್ಯೋಗಕ್ಕೆ ಮನವಿ ಮಾಡಿದರೂ ಕ್ಯಾರೆ ಎನ್ನಲಿಲ್ಲ. ಇದರಿಂದ ಬೇಸತ್ತ ಸಂತ್ರಸ್ತರು ಸಿದ್ದರಾಮಯ್ಯನವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ.ಸಮರ್ಪಕವಾಗಿ ಸಿಗದ ಪರಿಹಾರ:ಆಕ್ಸಿಜನ್ ದುರಂತದಲ್ಲಿ ಮೃತಪಟ್ಟ 36 ಮಂದಿ ಕುಟುಂಬದ 13 ಮಂದಿ ಸಂತ್ರಸ್ತರಿಗೆ ತಲಾ 5 ಲಕ್ಷ ರು. ಪರಿಹಾರ ನೀಡಿದ್ದರೆ, 11 ಮಂದಿಗೆ ತಲಾ 2 ಲಕ್ಷ ಪರಿಹಾರ ನೀಡಲಾಗಿದೆ. ಇನ್ನು 12 ಸಂತ್ರಸ್ತರಿಗೆ ಒಂದು ಪೈಸೆ ಪರಿಹಾರವನ್ನೂ ನೀಡಿಲ್ಲ. ಸರ್ಕಾರ ಗಲಭೆಗಳಲ್ಲಿ ಮೃತಪಟ್ಟ ಕುಟುಂಬಗಳಿಗೆ 25 ಲಕ್ಷ ರು. ಪರಿಹಾರ ನೀಡಲಾಗುತ್ತದೆ. ಮೊನ್ನೆ ಕಾಶ್ಮೀರದಲ್ಲಿ ಮೃತಪಟ್ಟ ಕರ್ನಾಟಕದ ಕುಟುಂಬಗಳಿಗೆ ತಲಾ 10 ಲಕ್ಷ ರು. ಪರಿಹಾರ ಘೋಷಿಸಲಾಗಿದೆ. ಆದರೆ ಸರ್ಕಾರದ ನಿರ್ಲಕ್ಷ್ಯದಿಂದ ಮೃತಪಟ್ಟ ಬಡ ಕುಟುಂಬಗಳಿಗೆ 2 ರಿಂದ 5 ಲಕ್ಷ ಪರಿಹಾರ 12 ಕುಟುಂಬಗಳಿಗೆ ಯಾವ ಪರಿಹಾರವನ್ನೂ ನೀಡಿಲ್ಲ.!ತಪ್ಪಿತಸ್ಥರಿಗೆ ಶಿಕ್ಷೆಯಾಗಿಲ್ಲ:
ಆಕ್ಸಿಜನ್ ದುರಂತಕ್ಕೆಅಧಿಕಾರಗಳ ನಿರ್ಲಕ್ಷವೇ ಪ್ರಮುಖ ಕಾರಣವಾಗಿದ್ದರೂ ಇದುವರಗೆ ಆಕ್ಸಿಜನ್ ದುರಂತಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ನಿರ್ಲಕ್ಷ್ಯ ವಹಿಸಿದ್ದವರು ಯಾವುದೇ ಅಳುಕಿಲ್ಲದೆ ಅಧಿಕಾರ ಅನುಭವಿಸುತ್ತಿದ್ದರೆ. ಕುಟುಂಬ ವರ್ಗದವರನ್ನು ಕಳೆದುಕೊಂಡವರು ಕಣ್ಣಿರಧಾರೆ ಹರಿಸುತ್ತಿದ್ದಾರೆ. ಆಡಳಿತ ಪಕ್ಷವಾಗಲಿ- ಪ್ರತಿ ಪಕ್ಷವಾಗಲಿ ಇದರ ತಲೆ ಕೆಡಿಸಿಕೊಂಡಿಲ್ಲ.1 ಲಕ್ಷ ರು ಹಿಂದಿರುಗಿಸಲು ನಿರ್ಧಾರ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ದೊರಕದೆ ಮೃತಪಟ್ಟ ಕುಟುಂಬಗಳಿಗೆ ಸರ್ಕಾರಿ ನೌಕರಿ ನೀಡುವ ಬಗ್ಗೆ ಮಲೆಮಹದೇಶ್ವರ ಬೆಟ್ಟದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗದ ಕಾರಣ ನೊಂದಿರುವ 36 ಸಂತ್ರಸ್ತ ಕುಟುಂಬದವರು ಕಾಂಗ್ರೆಸ್ ಪಕ್ಷದಿಂದ ಅಂದಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೀಡಿದ್ದ ತಲಾ 1 ಲಕ್ಷ ರು.ಹಿಂದಿರುಗಿಸಲು ನಿರ್ಧರಿಸಿದ್ದಾರೆ.
ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಗುಂಡ್ಲುಪೇಟೆಯಲ್ಲಿ ಸಂತ್ರಸ್ತ ಕುಟುಂಬದವರನ್ನೆಲ್ಲ ಭೇಟಿ ಮಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ 36 ಕುಟುಂಬದ ತಲಾ ಒಬ್ಬರಿಗೆ ಸರ್ಕಾರಿ ನೌಕರಿ, ಸೂಕ್ತ ಪರಿಹಾರ, ಘಟನೆಗೆ ಕಾರಣರಾದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷವಾದರೂ ಸಂತ್ರಸ್ತ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ನೀಡಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸಂತ್ರಸ್ತರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಚ್.ಸಿ.ಮಹದೇವಪ್ಪ ಹಿಂದೆ ನಗರದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ ವೇಳೆ ಭರವಸೆ ನೀಡಿದ್ದರು.ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಕ್ಸಿಜನ್ ಸಂತ್ರಸ್ತರ ನೆರವಿಗೆ ಸರ್ಕಾರ ಹೆಚ್ಚಿನ ಪರಿಹಾರ ನೀಡಬಹುದು. ಸರ್ಕಾರಿ ಉದ್ಯೋಗ ನೀಡಲು ವಿಶೇಷ ಕ್ರಮ ಕೈಗೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ₹3647 ಕೋಟಿ ಯೋಜನೆಗಳನ್ನು ಪ್ರಕಟಿಸಿದ ಸರ್ಕಾರ 36 ಮಂದಿ ಆಕ್ಸಿಜನ್ ದುರಂತ ಸಂತ್ರಸ್ತರ ನೋವಿಗೆ ನಯಾಪೈಸೆ ಅನುದಾನವನ್ನೂ ನೀಡದಿರುವುದು ಸಂತ್ರಸ್ತರಿಗೆ ತೀವ್ರ ನೋವು ತಂದಿದೆ. ಸಂತ್ರಸ್ತರ ಮನವಿಗೆ ಕರಗದ ಸಿಎಂ ಮನ:
ಜಿಲ್ಲಾಡಳಿತ ಭವನದ ಆವರಣದಲ್ಲಿ ವಿವಿಧ ಪ್ರತಿಮೆಗಳ ಶಿಲಾನ್ಯಾಸಕ್ಕೆ ಕಳೆದ ಶುಕ್ರವಾರ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸಂತ್ರಸ್ತ ಕುಟುಂಬಗಳ 14 ಮಂದಿ ಭೇಟಿಯಾಗಿ ಮನವಿ ಸಲ್ಲಿಸಿದರು. ಆದರೆ ಸಿಎಂ ಮನವಿ ಪಡೆದು ಒಂದು ಮಾತೂ ಆಡದೇ ಮುಂದೆ ಹೋದರು ಎಂದು ಸಂತ್ರಸ್ತರು ನೋವು ತೋಡಿಕೊಂಡಿದ್ದಾರೆ.ಒಂದೆಡೆ ಬಿಜೆಪಿ ಸರ್ಕಾರ ಆಕ್ಸಿಜನ್ ಪೂರೈಕೆ ಮಾಡದೇ, ಪರಿಹಾರವನ್ನೂ ನೀಡದೇ ನಮ್ಮ ಕುಟುಂಬದ 36 ಜನರ ಸಾವಿಗೆ ಕಾರಣವಾಯಿತು. ಆಗ ವಿಪಕ್ಷದಲ್ಲಿದ್ದ ಕಾಂಗ್ರೆಸ್‌ನವರು ನಾವು ಅಧಿಕಾರಕ್ಕೆ ಬಂದರೆ ನಿಮಗೆಲ್ಲ ನ್ಯಾಯ ಕೊಡಿಸುವುದಾಗಿ ಹೇಳಿ ಇವರೂ ನಿರ್ಲಕ್ಷ್ಯ ವಹಿಸಿದ್ದಾರೆ. ಇನ್ನು ನಮಗೆ ನ್ಯಾಯ ದೊರಕುವ ಭರವಸೆಯೇ ಇಲ್ಲವಾಗಿದೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು. ಹೀಗಾಗಿ ತೀವ್ರ ನೊಂದಿರುವ ನಾವು, ಘಟನೆ ನಡೆದ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಮಗೆ ನೀಡಿದ್ದ ತಲಾ 1 ಲಕ್ಷ ರು. ಪರಿಹಾರವನ್ನು ಹಿಂದಿರುಗಿಸುವುದಾಗಿ ಹತಾಶೆಯಿಂದ ನುಡಿದರು. ಸರ್ಕಾರಗಳ ದಿವ್ಯ ನಿರ್ಲಕ್ಷ್ಯದಿಂದ ನೊಂದಿರುವ ನಾವು ಮೇ 2ರ ಬಳಿಕ ಹೋರಾಟದಿಂದ ಹಿಂದೆ ಸರಿಯುವುದಾಗಿ ಪ್ರಕಟಿಸಿದರು.ಭರವಸೆಯಂತೆ ಕಾಯಂ ಹುದ್ದೆ ನೀಡಿ:ಸಂಸದ, ಶಾಸಕರ ಭರವಸೆ ಮೇರೆಗೆ ಮುಂದಿನ ಕ್ಯಾಬಿನೆಟ್ ವರೆಗೂ ಕಾಯುತ್ತೇವೆ. ನಮಗೆ ಹೊರ ಗುತ್ತಿಗೆ ನೌಕರಿ ಬೇಡ,
ಭರವಸೆಯಂತೆ ಕಾಯಂ ಹುದ್ದೆ ನೀಡಿ, ಭರವಸೆ ಈಡೇರದಿದ್ದರೆ ಜಿಲ್ಲಾಸ್ಪತ್ರೆ ಮುಂದೆ ಅಮರಾಣಾಂತ ಉಪವಾಸ ಮಾಡುತ್ತೇವೆ ಎಂದು ಸಂತ್ರಸ್ತರು ಹೇಳಿದ್ದಾರೆ.ಸಿಎಂ ಸಿದ್ದರಾಮಯ್ಯನವರ ಹೆಸರು
ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವೆನಾಲ್ಕು ವರ್ಷಗಳ ಹಿಂದೆ ನಾವು ನಮ್ಮ ಕುಟುಂಬದವನ್ನು ಕಳೆದುಕೊಂಡಾಗ ಇದೇ ಕಾಂಗ್ರೆಸ್‌ನವರು ನಮಗೆ ಭರವಸೆ ಬೆಳಕಾಗಿದ್ದರು. ಆದರೆ, ಅಂದಿನಿಂದ ಉದ್ಯೋಗಕ್ಕಾಗಿ ತಿರುಗಿ ತಿರುಗಿ ಸಾಕಾಗಿದೆ. ನಾವೆಲ್ಲ ಸಾಯುವುದಕ್ಕೆ ಸಿದ್ದರಾಗಿದ್ದೇವೆ. ಬಿಜೆಪಿ ಸರ್ಕಾರ ಆಕ್ಸಿಜನ್ ನೀಡದೇ ನನ್ನ ಗಂಡನ ಸಾವಿಗೆ ಕಾರಣವಾಗಿದೆ. ಈ ಸರ್ಕಾರ ನನ್ನ ಸಾವಿಗೆ ಕಾರಣವಾಗುತ್ತದೆ. ಮನವಿ ಕೊಡಲು ಹೋದರೆ ಮುಖ್ಯಮಂತ್ರಿ, ಏನಮ್ಮ ಏತಕ್ಕೆ ಬಂದಿದ್ದೀರಾ ಎಂದೂ ಕೇಳಲಿಲ್ಲ. ಮೇ 2 ರ ನಂತರ ನನ್ನ ಸಾವಿಗೆ ಸಿದ್ದರಾಮಯ್ಯನವರೇ ಕಾರಣ ಎಂದು ಬರೆದಿಟ್ಟು ಸಾಯುತ್ತೇನೆ.
-ನಾಗರತ್ನ, ಆಕ್ಸಿಜನ್ ದುರಂತ ಸಂತ್ರಸ್ತೆ.ಕಾಂಗ್ರೆಸ್‌ಗೆ ಹಣ ವಾಪಸ್ ಮಾಡುತ್ತೇವೆ
ನಮಗೆ ನ್ಯಾಯಯುತ ಪರಿಹಾರವನ್ನೂ ನೀಡಲಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯೂ ಆಗಲಿಲ್ಲ. ಸರ್ಕಾರಿ ಉದ್ಯೋಗವನ್ನೂ ನೀಡಲಿಲ್ಲ. ನಮಗೂ ಸಾಕಾಗಿ ಹೋಗಿದೆ. ಅಂದು ರಾಹುಲ್‌ಗಾಂಧಿ ಡಿ.ಕೆ.ಶಿವಕುಮಾರ್ ಕೇವಲ ಮೊಸಳೆ ಕಣ್ಣೀರು ಹಾಕಿದರು. ಡಿ.ಕೆ.ಶಿವಕುಮಾರ್ ನೀಡಿದ 1 ಲಕ್ಷ ಪರಿಹಾರದ ಹಣ ವಾಪಸ್ ಮಾಡುತ್ತೇವೆ.-ಮಂಜುನಾಥ್, ನಲ್ಲೂರು, ಸಂತ್ರಸ್ತ.ಮುಂದಿನ ಕ್ಯಾಬಿನೆಟ್‌ವರೆಗೆ ಕಾಯಿರಿಮುಂದಿನ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಚರ್ಚಿಸಲು ಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡುತ್ತೇನೆ. ಮುಂದಿನ ಕ್ಯಾಬಿನೆಟ್‌ನಲ್ಲಿ ಖಂಡಿತಾ ಚರ್ಚೆ ಆಗುತ್ತೆ, ಸರ್ಕಾರಿ ಉದ್ಯೋಗ ಅಥವಾ ಒನ್‌ಟೈಮ್ ಸೆಂಟಲ್‌ಮೆಂಟ್ ಮಾಡಿಸುತ್ತೇನೆ. ನಿಮಗೆ ಕೊಟ್ಟ ಭರವಸೆ ಈಡೇರಿಸ್ತೀವಿ, ಮುಂದಿನ ಕ್ಯಾಬಿನೆಟ್ ಮೀಟಿಂಗ್ ವರಗೆ ಕಾಯಿರಿ.-ಸುನೀಲ್ ಬೋಸ್, ಸಂಸದ
-ಸಿ.ಪುಟ್ಟರಂಗಶೆಟ್ಟಿ, ಶಾಸಕ