ಕನ್ನಡಪ್ರಭ ವಾರ್ತೆ ಬೆಳಗಾವಿ ಅರಣ್ಯ ಇಲಾಖೆಯ ಪೂರ್ವಾನುಮತಿ ಪಡೆಯದೇ 40 ಎಕರೆಯಲ್ಲಿ ಸಮೃದ್ಧವಾಗಿ ಬೆಳೆದಿದ್ದ ಸಾವಿರಾರು ಮರಗಳನ್ನು ಕಡಿದು ನಾಶಪಡಿಸಿರುವ ಘಟನೆ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದ ಕೌರಿಗುಡ್ಡದಲ್ಲಿ ಬೆಳಕಿಗೆ ಬಂದಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಅರಣ್ಯ ಇಲಾಖೆಯ ಪೂರ್ವಾನುಮತಿ ಪಡೆಯದೇ 40 ಎಕರೆಯಲ್ಲಿ ಸಮೃದ್ಧವಾಗಿ ಬೆಳೆದಿದ್ದ ಸಾವಿರಾರು ಮರಗಳನ್ನು ಕಡಿದು ನಾಶಪಡಿಸಿರುವ ಘಟನೆ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದ ಕೌರಿಗುಡ್ಡದಲ್ಲಿ ಬೆಳಕಿಗೆ ಬಂದಿದೆ.ಕಂದಾಯ ಇಲಾಖೆಗೆ ಸೇರಿದ 40 ಎಕರೆ ಸರ್ಕಾರಿ ಜಾಗವನ್ನು ಇಂಧನ ಇಲಾಖೆಗೆ ಹಸ್ತಾಂತರಿಸಿ, ಸೋಲಾರ್ ಪ್ಲಾಂಟ್ ನಿರ್ಮಾಣಕ್ಕಾಗಿ ಲೀಸ್ ನೀಡಲು ರಾಜ್ಯ ಸರ್ಕಾರ 17.09.2025ರಂದು ಅನುಮೋದನೆ ನೀಡಿದೆ. ಆದರೆ, ಯೋಜನೆಯ ಹೆಸರಿನಲ್ಲಿ ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ಸಾವಿರಾರು ಮರಗಳನ್ನು ಜೆಸಿಬಿ ಮೂಲಕ ಕಿತ್ತುಹಾಕಲಾಗಿದೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಗುಡ್ಡ ಪ್ರದೇಶದಲ್ಲಿ ಶ್ರೀಗಂಧ ಸೇರಿದಂತೆ ಅನೇಕ ಮೌಲ್ಯಯುತ ಮತ್ತು ಪರಿಸರ ಸಮತೋಲನಕ್ಕೆ ಅಗತ್ಯವಿರುವ ಮರಗಳಿದ್ದವು. ಅವುಗಳನ್ನು ನಿರ್ದಯವಾಗಿ ನೆಲಸಮಗೊಳಿಸಲಾಗಿದೆ. ಬರಡು ಗುಡ್ಡಗಳು ಸಾಕಷ್ಟು ಪ್ರಮಾಣದಲ್ಲಿ ಇರುವಾಗ, ಹಸಿರು ಗುಡ್ಡವನ್ನೇ ಗುರಿಯಾಗಿಸಿ ಸೋಲಾರ್ ಪ್ಲಾಂಟ್ ನಿರ್ಮಿಸುವ ಅಗತ್ಯವೇನಿದೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಅಲ್ಲದೇ, ಈ ಮರಗಳ ಮಾರಣಹೋಮದ ವಿರುದ್ಧ ಸಿಡಿದೆದ್ದಿರುವ ರೈತ ಸಂಘಟನೆಗಳು ಹಾಗೂ ಗ್ರಾಮಸ್ಥರು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಇಂಧನ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಬ್ಬ ರೈತ ತನ್ನ ಹೊಲದಲ್ಲಿ ಒಂದು ಮರ ಕಡಿದರೂ ಅರಣ್ಯ ಇಲಾಖೆ ಪ್ರಕರಣ ದಾಖಲಿಸುತ್ತದೆ. ಆದರೆ, ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಒಳಪಡುವ ಬಡಾಲ ಅಂಕಲಗಿ ಗ್ರಾಮದಲ್ಲಿ ಸಾವಿರಾರು ಮರಗಳು ನಾಶವಾಗುತ್ತಿವೆ. ಇದು ಯಾವ ನ್ಯಾಯ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ 40 ಎಕರೆ ಪ್ರದೇಶವನ್ನು ನಾಶಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ 500 ಎಕರೆ ಜಮೀನನ್ನು ಕಬಳಿಸುವ ಸಾಧ್ಯತೆ ಇದೆ ಎಂಬ ಆತಂಕವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.ಇದು ಪರಿಸರದ ಹತ್ಯೆ. ತಕ್ಷಣ ಮರ ಕತ್ತರಿಸುವುದನ್ನು ನಿಲ್ಲಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
-------ಬಾಕ್ಸ್......
ಕಂದಾಯ ಇಲಾಖೆಯಿಂದ ಭೂಮಿ ಹಸ್ತಾಂತರಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದ ಗಾಯರಾಣ ಜಮೀನಿನ ಸ.ನಂ.359 ರ 67.10 ಎಕರೆ ಜಮೀನಿನ ಪೈಕಿ 40 ಎಕರೆ ಸರ್ಕಾರಿ ಭೂಮಿಯನ್ನು ಪಿಎಂ ಕುಸುಮ್ ಪೀಡರ್ ಲೆವೆಲ್ ಸೋಲರೈಸೇಷನ್ ಯೋಜನೆಯಡಿ ಸೌರ ವಿದ್ಯುತ್ ಘಟಕ ಸ್ಥಾಪನೆಗಾಗಿ ಕಂದಾಯ ಇಲಾಖೆಯಿಂದ ಇಂಧನ ಇಲಾಖೆಗೆ ಕಾಯ್ದಿರಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಒಂದು ವರ್ಷಕ್ಕೆ ಲೀಸ್ ಹಣವಾಗಿ ಪ್ರತಿ ಎಕರೆಗೆ ₹25 ಸಾವಿರ ದರ ನಿಗದಿಯಾಗಿದ್ದು, ಒಟ್ಟು ₹10 ಲಕ್ಷ ಮೊತ್ತವನ್ನು ಸೌರ ಅಭಿವೃದ್ಧಿದಾರರಿಂದ ಸಂಗ್ರಹಿಸಲಾಗುತ್ತದೆ. ಪ್ರತಿ ಎರಡು ವರ್ಷಕ್ಕೊಮ್ಮೆ ಶೇ.5ರಷ್ಟು ದರ ಏರಿಕೆ ಅನ್ವಯವಾಗಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ಆದೇಶದ ಪ್ರತಿ ಕನ್ನಡಪ್ರಭಕ್ಕೆ ಲಭ್ಯವಾಗಿದೆ.
----------ಕೋಟ್
ಬಡಾಲ ಅಂಕಲಗಿ ಗ್ರಾಮದ ಸರ್ಕಾರಿ ಜಾಗದಲ್ಲಿ ಮರಗಳ ನಾಶವಾಗುತ್ತಿರುವ ಮಾಹಿತಿ ಬಂದ ಕೂಡಲೇ ಮರ ತೆರವು ಕಾರ್ಯಾಚರಣೆ ನಿಲ್ಲಿಸಲಾಗಿದೆ. ಎಸಿಎಫ್ ಅವರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ. ಸ್ಥಳ ಪರಿಶೀಲನೆ ನಡೆಯುತ್ತಿದ್ದು, ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಮೇಲ್ನೋಟಕ್ಕೆ ಇದು ಅರಣ್ಯ ಇಲಾಖೆಗೆ ಸೇರದ ಸರ್ಕಾರಿ ಗಾಯರಾಣ ಜಾಗವಾಗಿರಬಹುದು. ಅದನ್ನೂ ಪರಿಶೀಲನೆ ಮಾಡಲಾಗುತ್ತದೆ.ಎನ್.ಇ. ಕ್ರಾಂತಿ, ಉಪ ಅರಣ್ಯ ಸಂರಕ್ಷಣಾಧಿಕಾರಿ