ಸಾರಾಂಶ
ಬೆಂಗಳೂರು : ಮೊದಲ ಬಾರಿ ₹1.5 ಕೋಟಿಯ ಐಷಾರಾಮಿ 3ಬಿಎಚ್‌ಕೆ ಫ್ಲ್ಯಾಟ್ ನಿರ್ಮಾಣ ಯೋಜನೆ ರೂಪಿಸಿರುವ ಕರ್ನಾಟಕ ಗೃಹ ಮಂಡಳಿಯ ಸೂರ್ಯ ಶೈನ್ ಯೋಜನೆಯಡಿ ಫ್ಲ್ಯಾಟ್ ಖರೀದಿಸಲು ಆಸಕ್ತಿ ತೋರಿ 40 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ.
ಬರೋಬ್ಬರಿ 2,200 ಚದರಡಿ ವಿಸ್ತೀರ್ಣದ 50 ಐಷಾರಾಮಿ ಫ್ಲ್ಯಾಟ್‌ಗಳ ಅಪಾರ್ಟ್‌ಮೆಂಟ್ ನಿರ್ಮಾಣ ಯೋಜನೆಯ ‘ಬೇಡಿಕೆ ಸಮೀಕ್ಷೆ’ಗೆ ಅ.5ರಂದು ಕೆಎಚ್‌ಬಿ ಅರ್ಜಿ ಆಹ್ವಾನಿಸಿತ್ತು. 5 ವಾರಗಳಲ್ಲಿ 40 ಅರ್ಜಿಗಳು ಸಲ್ಲಿಕೆಯಾಗಿದ್ದು, ನ.30ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಗತ್ಯಬಿದ್ದರೆ ದಿನಾಂಕವನ್ನು ಮತ್ತಷ್ಟು ವಿಸ್ತರಿಸಲಾಗುತ್ತದೆ ಎಂದು ಕೆಎಚ್‌ಬಿ ಮೂಲಗಳು ತಿಳಿಸಿವೆ.
ನಗರದ ಎಲೆಕ್ಟ್ರಾನಿಕ್ ಸಿಟಿಯಿಂದ ಆರೇಳು ಕಿ.ಮೀ ದೂರದಲ್ಲಿ ಬೃಹತ್ ನಿವೇಶನ ನಿರ್ಮಾಣ ಯೋಜನೆಯಾಗಿರುವ ಕೆಎಚ್‌ಬಿ ಸೂರ್ಯ ನಗರ 1ನೇ ಹಂತದಲ್ಲಿ ಈ ಅಪಾರ್ಟ್‌ಮೆಂಟ್ ತಲೆ ಎತ್ತಲಿದೆ. 3ಬಿಎಚ್‌ಕೆ ಜೊತೆಗೆ ಪೌಡರ್ ರೂಮ್, ಈಜುಕೊಳ, ಜಿಮ್, ಗ್ರಂಥಾಲಯ, ಪಾರ್ಟಿ ಹಾಲ್, ಸೋಲಾರ್ ವ್ಯವಸ್ಥೆ, ಇವಿ ಚಾರ್ಜಿಂಗ್, ಆಟದ ಮೈದಾನ ಸೇರಿ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಐಷಾರಾಮಿ ಅಪಾರ್ಟ್‌ಮೆಂಟ್ ಯೋಜನೆ ಒಳಗೊಂಡಿದೆ ಎಂದು ಕೆಎಚ್‌ಬಿ ತಿಳಿಸಿದೆ.