ತಾಲೂಕು ಮಟ್ಟದ ಜನಸ್ಪಂದನದಲ್ಲಿ 40 ಅರ್ಜಿ ಸ್ವೀಕೃತ

| Published : Jun 21 2024, 01:04 AM IST

ಸಾರಾಂಶ

ಬಾಗಲಕೋಟೆಯ ನವನಗರದ ತಾಲೂಕು ಪಂಚಾಯತಿ ಸಭಾಭವನದಲ್ಲಿ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಾರ್ವಜನಿಕರಿಂದ ಬಂದ ಅಹವಾಲುಗಳಿಗೆ ತುರ್ತು ವಿಲೇವಾರಿಗೆ ಕ್ರಮಕೈಗೊಳ್ಳುವಂತೆ ಬಾಗಲಕೋಟೆ ಶಾಸಕರು ಆಗಿರುವ ಬಿಟಿಡಿಎ ಅಧ್ಯಕ್ಷ ಎಚ್.ವಾಯ್.ಮೇಟಿ ಅಧಿಕಾರಿಗಳಿಗೆ ಸೂಚಿಸಿದರು.

ನವನಗರದ ತಾಲೂಕು ಪಂಚಾಯತಿ ಸಭಾಭವನದಲ್ಲಿ ಹಮ್ಮಿಕೊಂಡ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಸಾರ್ವಜನಿಕರು ಹೊತ್ತು ತಂದ ಕುಂದು-ಕೊರತೆ ಹಾಗೂ ಅಹವಾಲುಗಳಿಗೆ ಸ್ಪಂದಿಸುವ ಕೆಲಸವಾಗಬೇಕು. ಸಾಧ್ಯವಾದಷ್ಟು ಬೇಗನೇ ಇತ್ಯರ್ಥಗೊಳಿಸಿ, ಅಧಿಕಾರಿ ಹಾಗೂ ಇಲಾಖೆಯ ಮೇಲೆ ವಿಶ್ವಾಸ ಮೂಡಿಸುವ ಕಾರ್ಯವಾಗಬೇಕು. ಈಗಾಗಲೇ ಮೊದಲ ಹಂತದಲ್ಲಿ ತಾಲೂಕಿನ ರಾಂಪೂರ ಮತ್ತು ಸೀಮಿಕೇರಿಯಲ್ಲಿ ನಡೆಸಿದ ಜನಸ್ಪಂದನ ಕಾರ್ಯಕ್ರಮ ಯಶಸ್ವಿಯಾಗಿದ್ದು, ಸ್ವೀಕೃತಗೊಂಡ ಎಲ್ಲ ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮಾತನಾಡಿ, ಜನಸ್ಪಂದನ ಸರಕಾರದ ಮಹತ್ವದ ಕಾರ್ಯಕ್ರಮವಾಗಿದ್ದು, ಈಗಾಗಲೇ ಬಾಗಲಕೋಟೆ ತಾಲೂಕು ಹಂತದಲ್ಲಿ ರಾಂಪೂರ ಮತ್ತು ಸೀಮಿಕೇರಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಗಿದೆ. ರಾಂಪೂರದಲ್ಲಿ ಸ್ವೀಕೃತಗೊಂಡ 122 ಅರ್ಜಿ ಮತ್ತು ಸೀಮಿಕೇರಿಯಲ್ಲಿ ಸ್ವೀಕೃತಗೊಂಡ 54 ಅರ್ಜಿಗಳನ್ನು ಸಂಪೂರ್ಣವಾಗಿ ಇತ್ಯರ್ಥಗೊಳಿಸಲಾಗಿದೆ. ತಾಲೂಕು ಹಂತದಲ್ಲಿ ಬಂದ ಅರ್ಜಿಗಳ ಮೇಲೆ ರಾಜ್ಯ ಮಟ್ಟದಲ್ಲಿ ಮುಖ್ಯ ಮಂತ್ರಿಗಳ ಕಾರ್ಯಾಲಯದಿಂದ ನಿಯಂತ್ರಣ ಮಾಡಲಾಗುತ್ತಿದ್ದು, ಅರ್ಜಿಗಳಿಗೆ ತುರ್ತಾಗಿ ಇತ್ಯರ್ಥಗೊಳಿಸಲು ಹೇಳಿದರು.

ನಂತರ ನಡೆದ ಸಾರ್ವಜನಿರ ಅಹವಾಲು ಸ್ವೀಕಾರದಲ್ಲಿ ಒಟ್ಟು 40 ಅರ್ಜಿಗಳ ಸ್ವೀಕೃತೊಂಡಿದ್ದು, ಅದರಲ್ಲಿ ಮುಖ್ಯವಾಗಿ ಬಿಟಿಡಿಎಗೆ ಸಂಬಂಧಿಸಿದ ವಿವಿಧ ಸಂತ್ರಸ್ತರಿಂದ ನಿವೇಶನಕ್ಕಾಗಿ 29 ಅರ್ಜಿಗಳು ಬಂದಿದ್ದರೆ, ನಗರಸಭೆಗೆ ಸಂಬಂಧಿಸಿದ 4, ಕೆ.ಪಿ.ಟಿ.ಸಿ.ಎಲ್, ಎನ್.ಡಬ್ಲು.ಕೆ.ಎಸ್.ಆರ್.ಟಿಸಿ, ಉಪವಿಭಾಗಾಧಿಕಾರಿ ಕಚೇರಿ, ತಾಲೂಕು ಪಂಚಾಯತಿ, ಶಾಲಾ ಶಿಕ್ಷಣ ಇಲಾಖೆ, ಸಣ್ಣ ನೀರಾವರಿ ಇಲಾಖೆ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ ತಲಾ ಒಂದು ಅರ್ಜಿಗಳು ಸ್ವೀಕೃತಗೊಂಡಿದ್ದವು.

ನವನಗರದಲ್ಲಿ ಯುಜಿಡಿ ಸಂಪರ್ಕಕ್ಕೆ ಹಣ ತುಂಬಿದರೂ ಇನ್ನು ಸಂಪರ್ಕ ಕೊಡದೇ ಇರುವ ಬಗ್ಗೆ ಶಾಸಕರ ಗಮನಕ್ಕೆ ತಂದರು. ಕೂಡಲೇ ಸಂಪರ್ಕಕ್ಕೆ ಕ್ರಮ ವಹಿಸಲಾಗುವುದೆಂದು ನಗರಸಭೆ ಪೌರಾಯುಕ್ತ ವಾಸಣ್ಣ ಆರ್. ಹೇಳಿದರು. ಆದರ್ಶ ವಿದ್ಯಾಲಯದಲ್ಲಿ ಮುಖ್ಯ ಶಿಕ್ಷಣ ಕೊರತೆ, ಜಮೀನಿಗೆ ವಿದ್ಯುತ್ ಸಂಪರ್ಕ, ಕೆರೆ ತುಂಬಿಸುವ ಯೋಜನೆ ಬಗ್ಗೆ ಅಹವಾಲುಗಳು ಸಲ್ಲಿಕೆಯಾದವು. ಗ್ರಾಮೀಣ ಭಾಗದಲ್ಲಿ ಬಸ್ ನಿಲ್ಲಿಸುವ ಬಗ್ಗೆ ಅರ್ಜಿಗಳು ಸ್ವೀಕೃತಗೊಂಡಿದ್ದು, ಬಾಗಲಕೋಟೆ ಘಟಕ ವ್ಯವಸ್ಥಾಪಕ ಅಶೋಕ ಕೋರಿ ಕ್ರಮವಹಿಸಲಾಗುವುದೆಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಬಾಗಲಕೋಟೆ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಸೀಲ್ದಾರ್ ಅಮರೇಶ ಪಮ್ಮಾರ, ತಾರ್ಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹೇಮಾವತಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.