ಸಾರಾಂಶ
ಉಲುಕ್ ಉಪ್ಪಿನಂಗಡಿಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಕಳೆದ ಎರಡು ವರ್ಷದಿಂದ ಬೇಸಿಗೆಯಲ್ಲಿ ಬತ್ತುತ್ತಿರುವ ಬಂದಾರು ಗ್ರಾಮದ ಬಟ್ಲಡ್ಕ ಎಂಬಲ್ಲಿರುವ ಬಿಸಿ ನೀರ ಚಿಲುಮೆ ಈ ಬಾರಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಮತ್ತೆ ಚೇತರಿಸಿಕೊಂಡಿದೆ. ಬಂಡೆಗಳ ನಡುವಿನಿಂದ ಮತ್ತೆ ಬಿಸಿ ನೀರು ಹರಿದು ಬರಲು ಆರಂಭವಾಗಿದೆ.ವಿಶೇಷವೆಂದರೆ ಜೂ.೨೫ರಂದು ಬೆಳಗ್ಗೆ ಮೊದಲ ಬಾರಿಯೆಂಬಂತೆ ಈ ನೀರಿನ ತಾಪಮಾನ ೪೦.೩ ಡಿಗ್ರಿ ಸೆಲ್ಸಿಯಸ್ ಆಗಿದೆ ಎನ್ನುತ್ತಾರೆ ಈ ಜಾಗದ ಮಾಲಕ ಮುಹಮ್ಮದ್ ಬಂದಾರು.
ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಅಂಕರಮಜಲಿನ ಬಟ್ಲಡ್ಕ ಎಂಬಲ್ಲಿ ಮುಳುಗು ತಜ್ಞರಾದ ಮುಹಮ್ಮದ್ ಬಂದಾರು ಅವರ ಜಾಗದಲ್ಲಿ ಬಿಸಿನೀರಿನ ಚಿಲುಮೆಯೊಂದಿದ್ದು, ಬಿಸಿನೀರು ಬಂದು ಬೀಳುವ ಜಾಗದಲ್ಲಿ ಆಯತಾಕರಾರವಾಗಿ ಕಲ್ಲುಗಳನ್ನು ಜೋಡಿಸಿ ಕೆರೆಯಂತೆ ಮಾಡಲಾಗಿದೆ. ಇದು ೧೦ ರಿಂದ ೧೨ ಅಡಿ ಉದ್ದ, ಏಳು ಅಡಿ ಅಗಲ, ಐದು ಅಡಿ ಆಳವಿದ್ದು, ಇದರ ಮೇಲ್ಗಡೆ ಇರುವ ಕಲ್ಲುಗಳ ನಡುವಿನಿಂದ ಸುಮಾರು ಅರ್ಧ ಇಂಚಿನಷ್ಟು ಬಿಸಿನೀರು ಬಂದು ಇದಕ್ಕೆ ಬೀಳುತ್ತದೆ. ಇದರ ಕೆಳಗಡೆ ತಗ್ಗು ಪ್ರದೇಶದಲ್ಲಿ ಗದ್ದೆಯಿದ್ದು, ಇದಕ್ಕಿಂತ ಸುಮಾರು ೧೦೦ ಮೀ. ದೂರದಲ್ಲಿ ನೇತ್ರಾವತಿ ನದಿ ಹರಿಯುತ್ತಿದೆ.ಈ ಬಿಸಿನೀರ ಚಿಲುಮೆಯ ಬಗ್ಗೆ ಮಾಹಿತಿ ನೀಡುವ ಮುಹಮ್ಮದ್ ಬಂದಾರು ಅವರು, ಈ ಬಿಸಿ ನೀರಿನ ಚಿಲುಮೆಯು ಅನಾದಿ ಕಾಲದಿಂದಲೂ ಈ ಪರಿಸರದಲ್ಲಿದೆ. ನನ್ನ ತಾತನ ಕಾಲದಿಂದ ನಮಗೆ ಸಂಬಂಧಿಸಿದ ಭೂಮಿಯಲ್ಲಿ ಇದೆ. ನನ್ನ ಅರಿವಿನ ಪ್ರಕಾರ ವರ್ಷದ ೩೬೫ ದಿನವೂ ಇಲ್ಲಿ ನೀರು ಬತ್ತುತ್ತಿರಲಿಲ್ಲ. ಇದರಲ್ಲಿ ದಿನದ ೨೪ ಗಂಟೆಯೂ ಬಿಸಿನೀರು ಬಂಡೆಗಳೆಡೆಯಿಂದ ಬಂದು ಇದಕ್ಕೆ ಬೀಳುತ್ತಿತ್ತು. ಸುತ್ತಮುತ್ತಲು ಕೊಳವೆಬಾವಿಗಳ ಸಂಖ್ಯೆ ಹೆಚ್ಚಾದಂತೆ ಕಳೆದ ಎರಡು ವರ್ಷದಿಂದ ಬೇಸಿಗೆ ಕಾಲದಲ್ಲಿ ನೀರು ಬತ್ತುತ್ತಿದೆ.ವಿಜ್ಞಾನಿಗಳ ಅಧ್ಯಯನಕ್ಕೆ ಒಳಪಟ್ಟ ಸ್ಥಳ: ೧೦ ವರ್ಷಗಳಿಂದ ಭಾರತ ಸರ್ಕಾರದ ಭೂ ವಿಜ್ಞಾನಶಾಸ್ತ್ರದ ವಿಜ್ಞಾನಿಗಳ ತಂಡವೊಂದು ಇಲ್ಲಿಗೆ ಆಗಮಿಸಿ, ಅಧ್ಯಯನ ನಡೆಸುತ್ತಿದ್ದಾರೆ. ಮೊದಲು ಚೆನ್ನೈಯಿಂದ ಬರುತ್ತಿದ್ದರು. ಈಗ ಕೇರಳದ ತಿರುವನಂತಾಪುರದಿಂದ ಕೇಂದ್ರ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ವಿಜ್ಞಾನಿಗಳ ತಂಡವೊಂದು ಆರು ತಿಂಗಳಿಗೊಮ್ಮೆ ಇಲ್ಲಿಗೆ ಭೇಟಿ ನೀಡಿ ಅಧ್ಯಯನ ನಡೆಸುತ್ತಿದ್ದಾರೆ. ಅವರಿಗೆ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ಮಹಮ್ಮದ್ ಅವರು ಈ ನೀರಿನ ತಾಪಮಾನವನ್ನು ಪರೀಕ್ಷಿಸಿ ವರದಿ ಕಳುಹಿಸಬೇಕಿದೆ. ಅದಕ್ಕೆ ಬೇಕಾದ ಥರ್ಮಾಮೀಟರ್‌ಗಳನ್ನು ಇಲಾಖೆಯೇ ಅವರಿಗೆ ನೀಡಿದೆ. ನೀರಿನ ಉಷ್ಣತೆ ಹೆಚ್ಚಾಗುತ್ತಿದೆ: ನನಗೆ ಗೊತ್ತಿರುವ ಹಾಗೆ ಈವರೆಗೆ ಇಲ್ಲಿ ನೀರಿನ ಗರಿಷ್ಠ ಉಷ್ಣತೆ ೩೬.೬ ಡಿಗ್ರಿ ಸೆಲ್ಸಿಯಷ್ಟು ಇತ್ತು. ಆದರೆ ಈ ಇಂದು ಬೆಳಗ್ಗೆ ಮಾತ್ರ ೪೦.೩ ಡಿಗ್ರಿ ಸೆಲ್ಸಿಯಸ್ ಇತ್ತು. ನಮ್ಮ ಸುತ್ತಲಿನ ವಾತಾವರಣ ತಂಪಿದ್ದಾಗ ಈ ನೀರಿನ ತಾಪಮಾನ ಬಿಸಿಯಿರುತ್ತದೆ. ಮಳೆಗಾಲದಲ್ಲಿ ಬಂಡೆಗಳೆಡೆಯಿಂದ ಬರುವ ನೀರಿನ ಪ್ರಮಾಣವೂ ಸ್ವಲ್ಪ ಜಾಸ್ತಿಯಿರುತ್ತದೆ. ಇಲ್ಲಿಗೆ ಆಗಮಿಸುವ ವಿಜ್ಞಾನಿಗಳ ತಂಡ ನೀರು ಬಿಸಿಯಾಗಲು ನಿಖರ ಕಾರಣ ಹೇಳದಿದ್ದರೂ, ಭೂಮಿಯ ಒಳಗಡೆ ಈ ನೀರು ಇನ್ನಷ್ಟು ಬಿಸಿ ಇರುತ್ತದೆ. ಅದು ಹೊರಗೆ ಬಂದಂತೆ ಅದರ ತಾಪಮಾನ ಕಡಿಮೆಯಾಗುತ್ತದೆ ಎನ್ನುತ್ತಾರೆ. ಅಲ್ಲದೆ, ಈ ಬಿಸಿನೀರ ಚಿಲುಮೆ ಈಗ ದಕ್ಷಿಣ ಭಾರತದಲ್ಲಿ ಬೆರಳೆಣಿಕೆಯ ಚಿಲುಮೆಗಳಲ್ಲಿ ಒಂದೆಂದು ವಿಜ್ಞಾನಿಗಳ ತಂಡ ತಿಳಿಸಿದೆ ಎನ್ನುತ್ತಾರೆ ಮುಹಮ್ಮದ್ ಬಂದಾರು.
ಭೂಗರ್ಭದಲ್ಲಿರುವ ಕೆಲವು ಖನಿಜಾಂಶಗಳು ಪರಸ್ಪರ ರಾಸಾಯನಿಕ ಕ್ರಿಯೆಗೆ ಒಳಗಾಗಿ ಬಿಸಿಯಾಗುವುದರಿಂದ ನೀರು ಬಿಸಿಯಾಗಲು ಕಾರಣ. ಅಧ್ಯಯನ ನಡೆಸದೇ ಈ ಬಗ್ಗೆ ನಿಖರವಾಗಿ ಏನನ್ನು ಹೇಳಲು ಸಾಧ್ಯವಿಲ್ಲ. ಆದರೂ ಹೆಚ್ಚಾಗಿ ಈ ರೀತಿಯ ಬಿಸಿನೀರು ಗಡಸು ನೀರಾಗಿದ್ದು, ಬಾವಿ ನೀರಿಗಿಂತ ಗುಣಮಟ್ಟದಲ್ಲಿ ಬದಲಾವಣೆ ಹೊಂದಿರುತ್ತದೆ. ಭೂಗರ್ಭದಲ್ಲಿರುವ ಶಿಲಾವಲಯದಲ್ಲಿ ಬೇರೊಂದು ಕಲ್ಲಿನ ಸಂಪರ್ಕವಿದ್ದಾಗ ಆಗ ಪರಸ್ಪರ ಘರ್ಷಣೆಯಿಂದ ಸುಣ್ಣದ ಕಲ್ಲು (ಲೈಮ್ ಸ್ಟೋನ್) ಸೇರಿದಂತೆ ಭೂಗರ್ಭದಲ್ಲಿರುವ ಕೆಲವೊಂದು ಖನಿಜಾಂಶಗಳು ಕರಗಿ ನೀರು ಬಿಸಿಯಾಗಲು ಕಾರಣವಾಗುತ್ತದೆ. ಖನಿಜಾಂಶದ ಸಾಂದ್ರತೆ ಹೆಚ್ಚಿರುವಲ್ಲಿ ಮಾತ್ರ ನೀರು ಬಿಸಿಯಾಗಲು ಸಾಧ್ಯ. ಕೆಲವು ಕಡೆ ಇಂತಹ ಬಿಸಿನೀರುಗಳು ಚರ್ಮ ವ್ಯಾಧಿಗೆ ಉತ್ತಮ ಔಷಧಿಯೂ ಆಗಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಚಿತ್ರದುರ್ಗದ ಭೂಗರ್ಭಶಾಸ್ತ್ರಜ್ಞ ಹಾಗೂ ಅಂತರ್ಜಲ ತಜ್ಞರೊಬ್ಬರು. ಪುತ್ತೂರು ಸಮೀಪದಲ್ಲಿ ಬೆಂದ್ರ್ ತೀರ್ಥ ಎಂಬ ಬಿಸಿ ನೀರ ಚಿಲುಮೆ ಇರುವುದು ಬಿಟ್ಟರೆ ಪರಿಸರದಲ್ಲಿ ಇನ್ನೊಂದು ಇರುವುದು ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದಲ್ಲಿರುವ ಈ ಚಿಲುಮೆ. ಚರ್ಮವ್ಯಾದಿಗೆ ಪರಿಣಾಮಕಾರಿಯಾಗಿರುವ ಈ ಬಿಸಿ ನೀರಿನ ಚಿಲುಮೆಯ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕಾಗಿಬೇಕಿದೆ.ನೀರು ಬಿಸಿಯಾಗಿ ಬರುತ್ತಿದ್ದರೂ ಅದನ್ನು ಕುಡಿಯುವುದಕ್ಕೆ ಬಳಸಲಾಗುತ್ತಿಲ್ಲ. ಅದನ್ನು ಆ ಜಾಗದ ಮಾಲಕರು ಪಂಚಾಯಿತಿ ಆಡಳಿತಕ್ಕೆ ಬಿಟ್ಟು ಕೊಟ್ಟಲ್ಲಿ ಅದನ್ನು ಅಭಿವೃದ್ಧಿಪಡಿಸಲು ಸಾಧ್ಯ. ಪ್ರಸ್ತುತ ಅದರಲ್ಲಿನ ನೀರು ನದಿ ಸೇರುವುದನ್ನು ಬಿಟ್ಟರೆ, ಬೇರಾವ ರೀತಿಯಲ್ಲಿಯೂ ಅದರ ಬಳಕೆಯಾಗುತ್ತಿಲ್ಲ ಎಂದು ಬಂದಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಹಿಂದೆ ಬತ್ತದ ಕೃಷಿ ಈ ನೀರಲ್ಲೇ ನಡೆಯುತ್ತಿತ್ತು...
ಈ ಚಿಲುಮೆಯ ನೀರು ಕುಡಿಯಲು ಯೋಗ್ಯವಾಗಿಲ್ಲ. ಇದು ಗಡಸು ನೀರಾಗಿದ್ದು, ಇದರಲ್ಲಿ ಸ್ನಾನ ಮಾಡಿದಾಗ ಸಾಬೂನಿನಲ್ಲಿ ನೊರೆಯೇ ಬರುವುದಿಲ್ಲ. ಮತ್ತೆ ಕೂದಲೂ ಕೂಡಾ ದಪ್ಪವಾಗುತ್ತದೆ. ಈ ನೀರಿನಲ್ಲಿ ಮೀನುಗಳನ್ನು ಹಾಕಿ ನೋಡಿದ್ದೇನೆ. ಆದರೆ ಅದು ಬದುಕುವುದಿಲ್ಲ. ಇದರಲ್ಲಿ ಒಂದು ರೀತಿಯ ಪಾಚಿ ಬರುತ್ತದೆ. ಈ ನೀರು ಚರ್ಮ ರೋಗಕ್ಕೆ ಉತ್ತಮವಂತೆ. ತುಂಬಾ ಜನ ಚರ್ಮ ರೋಗ ಇದ್ದವರು ಇಲ್ಲಿಗೆ ಬಂದು ಸ್ನಾನ ಮಾಡಿಕೊಂಡು ಹೋಗಿದ್ದಾರೆ. ಹಿಂದೆ ಗದ್ದೆಯಲ್ಲಿ ಮೂರು ಬೆಳೆ ಮಾಡುತ್ತಿದ್ದೆವು. ವಿಶೇಷವಾದ ಬಾಸ್ಮತಿ ಅಕ್ಕಿಯ ತಳಿಯನ್ನು ಬೆಳೆಸುತ್ತಿದ್ದರು. ಆಗ ಭತ್ತದ ಗದ್ದೆಗೆ ಈ ನೀರನ್ನು ಹರಿಸುವುದು ಬಿಟ್ಟರೆ, ಬೇರಾವುದೇ ಗೊಬ್ಬರ ಹಾಕುತ್ತಿರಲಿಲ್ಲ ಎನ್ನುತ್ತಾರೆ ಚಿಲುಮೆಯನ್ನು ಹೊಂದಿರುವ ಜಾಗದ ಮಾಲಕ ಮುಹಮ್ಮದ್ ಬಂದಾರು.